ಸರ್ಕಾರದ ಪೂರ್ವಾನುಮತಿ ಇಲ್ಲದಿದ್ದರೂ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ಮ್ಯಾಜಿಸ್ಪ್ರೇಟ್ ನ್ಯಾಯಾಲಯವು ವಿಚಾರಣೆಗೆ ಅಂಗೀಕರಿಸಿದೆ. ಆದ್ದರಿಂದ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಿದ ಹೈಕೋರ್ಟ್
ಬೆಂಗಳೂರು(ಜೂ.28): ಪ್ರಚೋದನಕಾರಿ ಭಾಷಣ ಮಾಡಿದ ಸಂಬಂಧ 6 ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಪ್ರಕರಣ ರದ್ದು ಕೋರಿ ಪ್ರಮೋದ್ ಮುತಾಲಿಕ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಪೀಠ ಈ ಆದೇಶ ನೀಡಿದೆ.
ಪ್ರಚೋದನಕಾರಿ ಭಾಷಣ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ, ಎರಡು ಕೋಮುಗಳ ನಡುವೆ ಶತ್ರುತ್ವ ಬಿತ್ತಿದ ಆರೋಪದ ಮೇಲೆ ಪ್ರಕರಣ ದಾಖಲಿಸಲು ರಾಜ್ಯ ಸರ್ಕಾರದಿಂದ ಪೂರ್ವಾನುಮತಿ ಪಡೆಯಬೇಕು. ಪೂರ್ವಾನುಮತಿ ಪಡೆಯದೆ ಪ್ರಕರಣ ದಾಖಲಿಸಿದ್ದ ಸಂದರ್ಭದಲ್ಲಿ ಆ ಪ್ರಕರಣವನ್ನು ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಬಾರದು. ಅದರೆ ಸರ್ಕಾರದ ಪೂರ್ವಾನುಮತಿ ಇಲ್ಲದಿದ್ದರೂ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ಮ್ಯಾಜಿಸ್ಪ್ರೇಟ್ ನ್ಯಾಯಾಲಯವು ವಿಚಾರಣೆಗೆ ಅಂಗೀಕರಿಸಿದೆ. ಆದ್ದರಿಂದ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಲಾಗುತ್ತಿದೆ ಎಂದು ಆದೇಶದಲ್ಲಿ ಹೈಕೋರ್ಟ್ ತಿಳಿಸಿದೆ.
ಉಡುಪಿ: ಸುನಿಲ್ ಕುಮಾರ್ ನಾಲಿಗೆ ಬಿಗಿ ಹಿಡಿದು ಮಾತಾಡಬೇಕು, ಮುತಾಲಿಕ್ ಆಕ್ರೋಶ
ಪ್ರಕರಣದ ಹಿನ್ನೆಲೆ:
2017ರ ಫೆ.25ರಂದು ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ಶ್ರೀರಾಮಸೇನಾ ಕಚೇರಿ ಉದ್ಘಾಟನೆ ಹಾಗೂ ಶಿವಾಜಿ ಮಹಾರಾಜ ಜಯಂತಿ ಆಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಭಾಷಣ ಮಾಡಿದ್ದ ಪ್ರಮೋದ್ ಮುತಾಲಿಕ್, ‘ಗೋವಿನ ಹತ್ಯೆ ಮಾಡಿದವರ ಕೈ ಕಡಿಯಬೇಕು’ ಎಂದು ಹೇಳಿಕೆ ನೀಡಿದ್ದರು. ಪ್ರಚೋದನಾ ಹೇಳಿಕೆ ನೀಡಿದ ಆರೋಪದ ಮೇಲೆ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ನಂತರ ಪೊಲೀಸರು ತನಿಖೆ ನಡೆಸಿ ಆರೋಪ ಪಟ್ಟಿಸಲ್ಲಿಸಿದ್ದರು. ಹಾಗಾಗಿ, ಪ್ರಕರಣ ರದ್ದು ಕೋರಿ ಮುತಾಲಿಕ್ ಹೈಕೋರ್ಚ್ ಮೆಟ್ಟಿಲೇರಿದ್ದರು.