ವಿಜಯಪುರ ಗಗನಕ್ಕೆ ಹೊಸ ರೆಕ್ಕೆ: ಮಹತ್ವದ ಹೆಜ್ಜೆಯ ಮಾಹಿತಿ ಹಂಚಿಕೊಂಡ ಸಚಿವ MB ಪಾಟೀಲ್

Published : Sep 03, 2026, 07:52 AM IST
Vijayapura Airport

ಸಾರಾಂಶ

ವಿಜಯಪುರದಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ವಿಮಾನ ನಿಲ್ದಾಣದಲ್ಲಿ ಮಹಾರಾಷ್ಟ್ರದ ಕಾರ್ವರ್‌ ಏವಿಯೇಷನ್‌ ಸಂಸ್ಥೆಯು ವಿಮಾನ ಚಾಲನಾ ತರಬೇತಿ ಅಕಾಡೆಮಿ ಸ್ಥಾಪಿಸಲು ಆಸಕ್ತಿ ತೋರಿದೆ. ಈ ಯೋಜನೆಯು ಪೈಲಟ್ ತರಬೇತಿ, ವಿಮಾನ ನಿರ್ವಹಣೆ ಮತ್ತು ದುರಸ್ತಿ ಸೇವೆಗಳನ್ನು ಒದಗಿಸಲಿದ್ದು, ಉತ್ತರ ಕರ್ನಾಟಕದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.

ವಿಜಯಪುರ ವಿಮಾನನಿಲ್ದಾಣದಲ್ಲಿ ವಿಮಾನ ಚಾಲನಾ ತರಬೇತಿ ಅಕಾಡೆಮಿ

ಬೆಂಗಳೂರು: ವಿಜಯಪುರದಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ವಿಮಾನ ನಿಲ್ದಾಣದಲ್ಲಿ ಮಹಾರಾಷ್ಟ್ರದ ಕಾರ್ವರ್‌ ಏವಿಯೇಷನ್‌ ಸಂಸ್ಥೆಯು ವಿಮಾನ ಚಾಲನಾ ತರಬೇತಿ ಅಕಾಡೆಮಿ ಸ್ಥಾಪಿಸಲು ಆಸಕ್ತಿ ತೋರಿದ್ದು, ಈ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ ಮುಂದಿನ ರೂಪುರೇಷೆ ನಿರ್ಧರಿಸಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು.

ವಿಮಾನ ಹಾರಾಟ ತರಬೇತಿ

ಖನಿಜ ಭವನದಲ್ಲಿ ಬುಧವಾರ ತಮ್ಮನ್ನು ಭೇಟಿಯಾದ ಕಾರ್ವರ್‌ ಏವಿಯೇಷನ್‌ ಸಂಸ್ಥೆಯ ನಿರ್ದೇಶಕ ನೆವಿಲ್‌ ಭರೂಚ ಮತ್ತು ವ್ಯವಸ್ಥಾಪಕ ಪರಮೇಶ್‌ ಪಾರೀಖ್‌ ಅವರೊಂದಿಗೆ ಸಭೆ ನಡೆಸಿ ನಂತರ ಮಾತನಾಡಿದ ಎಂ.ಬಿ.ಪಾಟೀಲ್‌, ಕಾರ್ವರ್‌ ಏವಿಯೇಷನ್‌ ಸಂಸ್ಥೆ ವಿಜಯಪುರದಲ್ಲಿ ತನ್ನ ಯೋಜನೆ ಅನುಷ್ಠಾನಗೊಳಿಸಲು ವಿಮಾನನಿಲ್ದಾಣದ ಆವರಣಕ್ಕೆ ಹೊಂದಿಕೊಂಡಿರುವ 2.5 ಎಕರೆ ಭೂಮಿ ಕೇಳಿದೆ. ಯೋಜನೆ ಜಾರಿಗೊಂಡರೆ ವಿಮಾನ ಹಾರಾಟ ತರಬೇತಿ, ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಪೂರಕ ಚಟುವಟಿಕೆಗಳು, ಗ್ರೌಂಡ್‌ ಸಪೋರ್ಟ್‌ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದರು.

ಬಾರಾಮತಿಯಲ್ಲಿ ನೆಲೆಯೂರಿರುವ ಕಾರ್ವರ್ ಏವಿಯೇಷನ್ ಸಂಸ್ಥೆ

ವಿಜಯಪುರದಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ವಿಮಾನ ನಿಲ್ದಾಣವನ್ನು ಕೇವಲ ವೈಮಾನಿಕ ಸಂಪರ್ಕದ ಕೇಂದ್ರವನ್ನಾಗಿಸುವುದಷ್ಟೇ ಅಲ್ಲದೆ, ವೈಮಾನಿಕ ಶಿಕ್ಷಣ, ತರಬೇತಿ ಹಾಗೂ ಉದ್ಯೋಗದ ಹೊಸ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇರಿಸಿದ್ದೇವೆ. ಮಹಾರಾಷ್ಟ್ರದ ಬಾರಾಮತಿಯಲ್ಲಿ ನೆಲೆಯೂರಿರುವ ಕಾರ್ವರ್ ಏವಿಯೇಷನ್ ಸಂಸ್ಥೆಯು ವಿಜಯಪುರ ವಿಮಾನ ನಿಲ್ದಾಣದಲ್ಲಿ ಸ್ಯಾಟಲೈಟ್ ಫ್ಲೈಯಿಂಗ್ ಟ್ರೈನಿಂಗ್ ಅಕಾಡೆಮಿ ಸ್ಥಾಪಿಸಲು ಆಸಕ್ತಿ ವ್ಯಕ್ತಪಡಿಸಿದೆ. ಈ ಕುರಿತು ಸಂಸ್ಥೆಯ ನಿರ್ದೇಶಕ ಶ್ರೀ ನೆವಿಲ್ ಭರೂಚ ಹಾಗೂ ವ್ಯವಸ್ಥಾಪಕ ಶ್ರೀ ಪರಮೇಶ್ ಪಾರೀಖ್ ಅವರೊಂದಿಗೆ ಮಹತ್ವದ ಚರ್ಚೆ ನಡೆಸಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ಇಲ್ಲಿ ಪೈಲಟ್ ತರಬೇತಿಯ ಜೊತೆಗೆ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ನಿರ್ವಹಣಾ ಸೇವೆಗಳು (MRO), ಹ್ಯಾಂಗರ್‌ಗಳು ಹಾಗೂ ಗ್ರೌಂಡ್ ಸಪೋರ್ಟ್ ಸೌಲಭ್ಯಗಳು ಅಭಿವೃದ್ಧಿಯಾಗಲಿವೆ. ಇದರಿಂದ ಉತ್ತರ ಕರ್ನಾಟಕದಲ್ಲಿ ವೈಮಾನಿಕ ಕ್ಷೇತ್ರಕ್ಕೆ ಹೊಸ ಅವಕಾಶಗಳು ತೆರೆದುಕೊಳ್ಳುವುದರ ಜೊತೆಗೆ, ಸ್ಥಳೀಯ ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಪೈಲಟ್ ತರಬೇತಿ ಪಡೆಯಲು ಉತ್ತಮ ಅವಕಾಶಗಳು ಹಾಗೂ ನೂರಾರು ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ವಿಶೇಷವಾಗಿ, ಸ್ಥಳೀಯ ವಿದ್ಯಾರ್ಥಿಗಳಿಗೆ ತರಬೇತಿ ಶುಲ್ಕದಲ್ಲಿ ಆಕರ್ಷಕ ರಿಯಾಯಿತಿ ನೀಡುವುದಾಗಿ ಸಂಸ್ಥೆಯು ಭರವಸೆ ನೀಡಿರುವುದು ಸಂತಸದ ಸಂಗತಿ.

ಮುಂದಿನ ಹಂತದಲ್ಲಿ ಅಧಿಕಾರಿಗಳು ಹಾಗೂ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಮತ್ತೊಂದು ಸಭೆ ನಡೆಸಿ, ಅಕಾಡೆಮಿಯ ರೂಪುರೇಷೆ, ಮೂಲಸೌಕರ್ಯ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಶೀಘ್ರದಲ್ಲಿಯೇ ವಿಮಾನ ನಿಲ್ದಾಣ ಲೋಕಾರ್ಪಣೆ

ವಿಜಯಪುರ ವಿಮಾನ ನಿಲ್ದಾಣಕ್ಕೆ ಎದುರಾಗಿದ್ದ ಪರಿಸರ ಅನುಮತಿಯ ಕಾನೂನು ತೊಡಕು ಸುಪ್ರೀಂಕೋರ್ಟ್ ತೀರ್ಪಿನಿಂದ ಸಂಪೂರ್ಣವಾಗಿ ನಿವಾರಣೆಯಾಗಿದ್ದು, ಶೀಘ್ರದಲ್ಲಿಯೇ ಲೋಕಾರ್ಪಣೆಯಾಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

PREV
Read more Articles on
click me!

Recommended Stories

ಬಸವರಾಜ ರಾಯರೆಡ್ಡಿ ಹೇಳಿಕೆ ವಿವಾದ: ಅಪ್ಪ, ಅಜ್ಜನ ಧರ್ಮನಿಷ್ಠೆ' ನೆನಪಿಸಿದ ಹಾಲಪ್ಪ ಆಚಾರ್!
ರೇಷ್ಮೆಗೂಡಿಗೆ ಬಂಪರ್ ಬೆಲೆ: ಕೆಜಿಗೆ 1100 ರು. ಹೊಸ ದಾಖಲೆ; ಬೆಲೆ ಏರಿಕೆಗೆ ಕಾರಣ ಏನು?