ರಸ್ತೆ ಮೇಲೆ ಸುಮಾರು ಐದು ಅಡಿ ನೀರು ಹರಿಯುತ್ತಿದ್ದರೂ ಕಾರು ಚಾಲಕರು ಹುಚ್ಚು ಸಾಹಸ ಮಾಡಲು ಹೋಗಿ ಜೀವಕ್ಕೆ ಕಂಟಕ ತಂದುಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ನಡೆದಿದೆ.
ಚಿಕ್ಕಮಗಳೂರು : ರಸ್ತೆ ಮೇಲೆ ಸುಮಾರು ಐದು ಅಡಿ ನೀರು ಹರಿಯುತ್ತಿದ್ದರೂ ಕಾರು ಚಾಲಕರು ಹುಚ್ಚು ಸಾಹಸ ಮಾಡಲು ಹೋಗಿ ಜೀವಕ್ಕೆ ಕಂಟಕ ತಂದುಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ನಡೆದಿದೆ. ಆದರೆ ಸ್ಥಳೀಯರ ಸಮಯ ಪ್ರಜ್ಞೆಯಿಂದ ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಅಯ್ಯನಕೆರೆ, ತುಂಬಿ ಕೋಡಿ ಬಿದ್ದಿದೆ. ಕೋಡಿ ಬಿದ್ದ ನೀರು ಎಲ್ಲೆಂದರಲ್ಲಿ ನುಗ್ಗುತ್ತಿರುವುದರಿಂದ ಸಖರಾಯಪಟ್ಟಣದಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ರಸ್ತೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಕಾರನ್ನು ಚಲಾಯಿಸಲು ಹೋಗಿ ಕಾರು ಹಳ್ಳಕ್ಕೆ ಉರುಳಿ ಬಿದ್ದಿದೆ. ಕೂಡಲೇ ಕಾರನ್ನ ಜೆಸಿಬಿ ಮೂಲಕ ಮೇಲೆ ಎತ್ತುವ ಪ್ರಯತ್ನ ಮಾಡಿದರು ಸಾಧ್ಯವಾಗಿಲ್ಲ. ಅಲ್ಲೇ ಇದ್ದ ಸ್ಥಳೀಯರು ಕೂಡಲೇ ಕಾರಿನ ಮುಂಭಾಗದ ಗ್ಲಾಸನ್ನ ಒಡೆದು ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ.
ರಸ್ತೆ ಮೇಲೆ ಐದಕ್ಕೂ ಹೆಚ್ಚು ಅಡಿ ಎತ್ತರದಲ್ಲಿ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕಾರು ಚಲಾಯಿಸಿದ್ದಾರೆ. ಕೇತುಮಾರನಹಳ್ಳಿ ಗಿರೀಶ್ ಎಂಬುವರಿಗೆ ಸೇರಿದ ಕಾರು ಇದಾಗಿದೆ. ಪಿಳ್ಳೇನಹಳ್ಳಿ ಮಸಣದಹಳ್ಳದಲ್ಲಿನೀ ರಿನ ರಭಸಕ್ಕೆ ಕಾರು ಕೊಚ್ಚಿ ಹೋಗುತ್ತಿದ್ದನ್ನು ಗಮನಿಸಿದ ಸ್ಥಳೀಯರು ಸಿನಿಮಾ ಮಾದರಿಯಲ್ಲಿ ಕಾರಿನ ಗ್ಲಾಸ್ ಒಡೆದು ಹಗ್ಗ ಕಟ್ಟಿ ಜೆಸಿಬಿ ಮೂಲಕ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ನೀರಿನಲ್ಲಿ ಪ್ರಾಣ ಕಳೆದುಕೊಳ್ಳ ಬೇಕಿದ್ದ ಇಬ್ಬರ ಪ್ರಾಣ ಉಳಿದಿದೆ.ರಭಸವಾಗಿ ಹರಿಯುವ ನೀರಿನಲ್ಲಿ ಕಾರು ಚಲಾಯಿಸಿದ ಚಾಲಕನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಇಬ್ಬರ ಜೀವ ಉಳಿಸಿದ ಸ್ಥಳೀಯರನ್ನು ಶ್ಲಾಘಿಸಿದ್ದಾರೆ.
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ದಶ ದಿಕ್ಕುಗಳಲ್ಲೂ ಮಳೆಯ ಅಬ್ಬರ ಜೋರಾಗಿದೆ. ಕಳೆದ ಹದಿನೈದು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ರಸ್ತೆ, ಗದ್ದೆಗಳು ಜಲಾವೃತವಾಗಿ ಪ್ರವಾಹ ಭೀತಿಯಿಂದ ಜನ ಸಾಮಾನ್ಯರು ಜೀವ ಭಯದಲ್ಲಿ ಬದುಕುತ್ತಿದ್ದಾರೆ. ಪ್ರವಾಹದಲ್ಲಿ ಕೆಲವರು ಸಾವನ್ನಪ್ಪಿರುವ ಘಟನೆಗಳು ವರದಿಯಾಗಿವೆ.