ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಬೆಳೆ ವಿಮೆ ಮಾಡಿಸುವ ಕಾರ್ಯವನ್ನು ಗ್ರಾಪಂ ಮಟ್ಟದಿಂದ ಅಭಿಯಾನದ ರೂಪದಲ್ಲಿ ಕೈಗೊಳ್ಳಲು ಜಿಲ್ಲಾಡಳಿತ ಕ್ರಮವಹಿಸಬೇಕು ಎಂದು ಸಂಸದ ಡಾ. ಕೆ. ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ (ಸೆ.08): ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಬೆಳೆ ವಿಮೆ ಮಾಡಿಸುವ ಕಾರ್ಯವನ್ನು ಗ್ರಾಪಂ ಮಟ್ಟದಿಂದ ಅಭಿಯಾನದ ರೂಪದಲ್ಲಿ ಕೈಗೊಳ್ಳಲು ಜಿಲ್ಲಾಡಳಿತ ಕ್ರಮವಹಿಸಬೇಕು ಎಂದು ಸಂಸದ ಡಾ. ಕೆ. ಸುಧಾಕರ್ ತಿಳಿಸಿದರು. ನಗರ ಹೊರವಲಯದ ಜಿಲ್ಲಾಡಳಿತ ಭವನದ ಜಿಪಂ ಸರ್. ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಗುರುವಾರ ನಡೆದ 2024- 25ನೇ ಸಾಲಿನ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ನಿವೇಶನ ರಹಿತರ ಪಟ್ಟಿ ಮಾಡಿ: ಒಂದು ಹೆಕ್ಟೇರ್ ದ್ರಾಕ್ಷಿ ಬೆಳೆಗೆ 14 ಸಾವಿರ ರು. ಬೆಳೆ ವಿಮೆ ಮಾಡಿಸಿದರೆ ಬೆಳೆ ನಷ್ಟವಾದಲ್ಲಿ 2.80 ಲಕ್ಷ ರು. ಬೆಳೆ ಪರಿಹಾರ ರೈತರಿಗೆ ಸಿಗಲಿದೆ. ಅದೇ ರೀತಿ ಕೃಷಿ ಬೆಳೆಗಳಿಗೆ 500- 600 ರು.ಗಳ ಒಳಗೆ ಬೆಳೆ ವಿಮೆ ಇರುತ್ತದೆ. ಇಂತಹ ಮಹತ್ವಾಕಾಂಕ್ಷಿ ಉಪಯುಕ್ತ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಜನತೆಗೆ ಅರಿವು ಮೂಡಿಸಬೇಕು. ಜಿಲ್ಲೆಯಲ್ಲಿ ನಿವೇಶನ ಇಲ್ಲದವರಿಗೆ ನಿವೇಶನ ಒದಗಿಸಿ ಮನೆಯನ್ನೂ ನಿರ್ಮಿಸಿಕೊಡಲಾಗುವುದು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಜನ ನಿವೇಶನ ರಹಿತರಿದ್ದಾರೆ, ಸಮೀಕ್ಷೆ ಮಾಡಿ ಪಟ್ಟಿ ನೀಡುವಂತೆ ಜಿಲ್ಲಾಡಳಿತಕ್ಕೆ ತಿಳಿಸಿದರು.
2025ರಲ್ಲೇ ಬರಬಹುದಾದ ಚುನಾವಣೆಗೆ ಸಿದ್ಧರಾಗಿ: ಅಚ್ಚರಿ ಮೂಡಿಸಿದ ಕುಮಾರಸ್ವಾಮಿ ಹೇಳಿಕೆ
ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಬಳಿ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶೈಕ್ಷಣಿಕ ತರಗತಿಗಳು ಈಗಾಗಲೇ ನಡೆಯುತ್ತಿವೆ. ಅವರ ಕಲಿಕೆಗೆ ಪೂರಕವಾಗಿ ಹಾಗೂ ಈ ಭಾಗದ ಸಾರ್ವಜನಿಕರಿಗೆ ಪೂರಕವಾಗುವಂತೆ ಜಿಲ್ಲಾ ಆಸ್ಪತ್ರೆಯನ್ನು ಮೆಡಿಕಲ್ ಕಾಲೇಜಿನಲ್ಲಿ ಸ್ಥಾಪಿಸಲು ಕ್ರಮವಹಿಸಬೇಕು. ಜಿಲ್ಲಾ ಕೇಂದ್ರದಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ಜಿಲ್ಲಾ ಆಯುಷ್ ಆಸ್ಪತ್ರೆಯನ್ನು ನಿರ್ಮಿಸಲು ಕ್ರಮವಹಿಸಬೇಕು ಎಂದರು.
ಅಗೆದ ರಸ್ತೆ ಸರಿಪಡಿಸಿ: ಜಲಜೀವನ್ ಮಿಷನ್ ಯೋಜನೆಯಡಿ ಇಲ್ಲಿಯವರೆಗೆ ಒಂದು ಸಾವಿರ ಕೋಟಿ ರು. ಅನುದಾನ ಚಿಕ್ಕಬಳ್ಳಾಪುರ ಜಿಲ್ಲೆಗೆ ದೊರೆತಿದೆ. ಆದರೆ ಕೆಲವೆಡೆ ಕಾಮಗಾರಿಗಳು ಕಳಪೆ ಆಗುತ್ತಿವೆ. ಪೈಪ್ ಲೈನ್ ಗಳನ್ನು ತೆಗೆಯಲು ರಸ್ತೆಗಳನ್ನು ಕಟ್ ಮಾಡಿ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿ ಬಳಿಕ ರಸ್ತೆಗಳ ದುರಸ್ತಿ ಮಾಡುತ್ತಿಲ್ಲ, ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದರು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳೂ ಸೇರಿ ವಿವಿಧ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸಲು ಉದ್ದೇಶಿಸಿ, ಜಾರಿ ಮಾಡಿರುವ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ನೀರೆತ್ತುವ ಕಾರ್ಯಕ್ಕೆ ಚಾಲನೆ ಸ್ವಾಗತಾರ್ಹ ಎಂದು ಸಂಸದರು ಹೇಳಿದರು.
ಜನರ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಹಣ ಲೂಟಿ ಹೊಡೆಯುತ್ತಿದೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಜಿಲ್ಲೆಗೆ ಕೃಷ್ಣಾನದಿ ನೀರು: ಆಂಧ್ರದ ಗಡಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಗೆ ಸರ್ಕಾರ ಕೃಷ್ಣಾ ನದಿ ಪಾತ್ರದ ನೀರನ್ನು ಹರಿಸುವ ನಿಟ್ಡಿನಲ್ಲಿ ಆಂಧ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು. ನಾರಾಯಣಪುರ ಜಲಾಶಯದಿಂದ ಆಂಧ್ರಕ್ಕೆ 10 ಟಿಎಂಸಿ ನೀರನ್ನು ಕೊಟ್ಟು ಆಂಧ್ರದ ಕೃಷ್ಣಾ ನದಿ ಪಾತ್ರದಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ತರಲು ಸಾಧ್ಯವಿದೆ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದರು. ಡೀಸಿ ಪಿ.ಎನ್. ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಎಸ್ಪಿ ಕುಶಲ್ ಚೌಕ್ಸೆ, ಎಡೀಸಿ ಡಾ. ಎನ್. ಭಾಸ್ಕರ್, ದಿಶಾ ಸಮಿತಿ ಸದಸ್ಯರಾದ ಶಿವಪ್ಪ, ಗಣೇಶ ರೆಡ್ಡಿ, ಲಲಿತಮ್ಮ, ಮಮತಾ, ಶಿವಕುಮಾರ್, ಬಿ.ವಿ ಕೃಷ್ಣ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.