ಬ್ಯಾಡಗಿ ಮೆಣಸಿನ ಕಾಯಿಯ ಬೆಲೆಯು ಡಬಲ್ ಆಗಿದೆ. ಅತಿಯಾದ ಮಳೆ ಸುರಿದ ಕಾರಣ ಪೂರೈಕೆ ಕಡಿಮೆ ಆಗಿರುವುದೇ ಬೆಲೆ ಏರಿಕೆಗೆ ಕಾರಣವಾಗಿದೆ.
ಬ್ಯಾಡಗಿ (ಜ.14): ಕಳೆದ ವಾರವಷ್ಟೇ ಕ್ವಿಂಟಲ್‌ಗೆ 30 ಸಾವಿರ ರು. ಗಡಿ ದಾಟಿ ಹೊಸ ದಾಖಲೆ ಬರೆದಿದ್ದ ಬ್ಯಾಡಗಿ ಮೆಣಸಿನಕಾಯಿ ಬೆಲೆ ಸೋಮವಾರ ಮತ್ತೆ ಏರುಗತಿಯಲ್ಲಿ ಸಾಗಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ಎಪಿಎಂಸಿಯಲ್ಲಿ ನಾಲ್ಕು ದಿನಗಳ ಹಿಂದಷ್ಟೇ ರೈತ ಸಂಗರಡ್ಡೆಪ್ಪ ಭೂಸರೆಡ್ಡಿ ಬೆಳೆದು ತಂದಿದ್ದ ಒಣಮೆಣಸಿನಕಾಯಿ ಕ್ವಿಂಟಲ್‌ಗೆ 33329 ರು.ನಂತೆ ಮಾರಾಟವಾಗಿತ್ತು. ಇದೀಗ ಮತ್ತೆ ಹೆಚ್ಚಳವಾಗಿದ್ದು ಗದಗ ತಾಲೂಕು ಕುರ್ತಕೋಟಿ ಗ್ರಾಮದ ರೈತ ಮಂಜುನಾಥ ಗಾಡರೆಡ್ಡಿ ಬೆಳೆದ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ 33,333 ರು. ಗಳಿಗೆ ಮಾರಾಟವಾಗಿದೆ.
ಸೋಮವಾರ ಮಾರುಕಟ್ಟೆಗೆ 50 ಸಾವಿರಕ್ಕೂ ಹೆಚ್ಚು ಚೀಲ ಮೆಣಸಿನಕಾಯಿ ಆವಕವಾಗಿತ್ತು. ವರ್ತಕ ಕಲಕಟ್ಟಿ ಏಜೆನ್ಸಿ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಮೆಣಸಿನಕಾಯಿಗೆ ಎಪಿಎಂಸಿ ವರ್ತಕ ಎಸ್.ಜಿ.ಚಂದ್ರಾಪಟ್ಟಣ ನಿರೀಕ್ಷೆಗೂ ಮೀರಿದ ದರ ನೀಡಿ ಖರೀದಿಸಿದ್ದು ರೈತನ ಸಂತಸಕ್ಕೆ ಕಾರಣವಾಗಿದೆ.
ಮೆಣಸಿನಕಾಯಿಯನ್ನೂ ಬಿಡ್ತಿಲ್ಲ ಕಳ್ಳರು: ಕಂಗಾಲಾದ ರೈತ...
ಈ ಬಾರಿ ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದಿಂದಾಗಿ ಮೆಣಸಿನಕಾಯಿ ಬೆಳೆ ಹಾನಿಗೀಡಾಗಿರುವ ಪರಿಣಾಮ ಆವಕದ ಕೊರತೆಯುಂಟಾಗಿತ್ತು. ಸಾಮಾನ್ಯವಾಗಿ ಉತ್ತಮ ದರ್ಜೆಯ ಬ್ಯಾಡಗಿ ಮೆಣಸಿನಕಾಯಿಗೆ ಕ್ವಿಂಟಲ್‌ಗೆ 14ರಿಂದ 15 ಸಾವಿರ ಬೆಲೆಯಿರುತ್ತದೆ. ಈ ಬಾರಿ ಆವಕದ ಕೊರತೆಯಿಂದಾಗಿ ಕಳೆದ ಕೆಲವು ವಾರಗಳಿಂದ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಬೆಲೆ ಏರುತ್ತಲೇ ಸಾಗಿದೆ.
ನವೆಂಬರ್‌ನಲ್ಲಿ ಕ್ವಿಂಟಲ್‌ಗೆ 16 ಸಾವಿರವಿದ್ದ ಬೆಲೆ ಏರುಗತಿಯಲ್ಲಿ ಸಾಗಿ ಎರಡು ತಿಂಗಳು ಕಳೆಯುವಷ್ಟರದ್ದು ದುಪ್ಪಟ್ಟಾಗಿದೆ. ಮೆಣಸಿನಕಾಯಿ ಮಾರುಕಟ್ಟೆಯ ಇತಿಹಾಸದಲ್ಲೇ ಬೆಲೆ 30 ಸಾವಿರ ಗಡಿ ಮುನ್ನುಗ್ಗಿರುವುದು ಇದೇ ಮೊದಲಾಗಿದ್ದು ಮುಂದಿನ ದಿನಗಳಲ್ಲಿ ಈ ದಾಖಲೆಯೂ ಮುರಿಯುವ ಲಕ್ಷಣಗಳಿವೆ ಎಂದು ಮಾರುಕಟ್ಟೆತಜ್ಞರು ತಿಳಿಸಿದ್ದಾರೆ.