ರಾಮಜನ್ಮಭೂಮಿ ವಿವಾದ ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥ| ದೇಶದ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದ ಬಳಿಕವೂ ಅದು ಹೇಗೆ ವಿವಾದಾತ್ಮಕವಾಗುತ್ತದೆ ಎಂದು ಸಿದ್ದರಾಮಯ್ಯಗೆ ಪ್ರಶ್ನಿಸಿದ ವಿಜಯೇಂದ್ರ|
ಕೊಪ್ಪಳ(ಫೆ.20): ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಮೇಲೆ ನಮಗೆ ಅಪಾರವಾದ ಪ್ರೀತಿ ಇದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಆರೋಪಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದು ಸಂತೋಷ ಸಂಗತಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗವಾಡಿದ್ದಾರೆ.
ಶುಕ್ರವಾರ ತಾಲೂಕಿನ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ರ ಬರೆದಿದ್ದರೂ ನಮಗೇನೂ ಬೇಜಾರಿಲ್ಲ. ಅದನ್ನು ರಾಷ್ಟ್ರೀಯ ನಾಯಕರು ನೋಡಿಕೊಳ್ಳುತ್ತಾರೆಯೇ ಹೊರತು ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.
ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ಯಾವುದೇ ಗುಂಪುಗಾರಿಕೆಯೂ ಇಲ್ಲ ಮತ್ತು ಯಾರ ಪ್ರಚೋದನೆಯೂ ಇಲ್ಲ. ಅವರವರು ತಮ್ಮ ಹಕ್ಕು ಕೇಳಲು ಹೋರಾಟ ಮಾಡುತ್ತಿದ್ದಾರೆಯೇ ಹೊರತು ಇದು ಸಿ.ಎಂ. ಯಡಿಯೂರಪ್ಪ ಅವರ ವಿರುದ್ಧವಂತೂ ಅಲ್ಲ. ಅದರ ಪೂರ್ವಾಪರ ಯೋಚನೆ ಮಾಡಿ, ಕಾನೂನು ರೀತಿಯಲ್ಲಿ ಕ್ರಮ ವಹಿಸುವುದಾಗಿ ಈಗಾಗಲೇ ಮುಖ್ಯಮಂತ್ರಿಗಳು ಹೇಳಿದ್ದಾರೆ. ಅವರು ಅದನ್ನು ನಿರ್ಧರಿಸುತ್ತಾರೆ ಎಂದರು.
ವಿಜಯೇಂದ್ರ 8 ದಿನ ದಿಲ್ಲಿಯಲ್ಲಿ ಯಾಕಿದ್ರು? ಹೊಸ ಬಾಂಬ್ ಸಿಡಿಸಿದ ಯತ್ನಾಳ್
ಕಾನೂನು ಗೊತ್ತಿಲ್ಲದವರು ಈ ರೀತಿ ಮಾತನಾಡಿದ್ದರೆ, ನಾನು ಖಂಡಿತವಾಗಿಯೂ ಉತ್ತರಿಸಬಹುದಿತ್ತು. ಆದರೆ, ಎಲ್ಲವೂ ಗೊತ್ತಿರುವವರು ಹೀಗೆ ಮಾತನಾಡಿದರೆ ಏನು ಹೇಳಲಾಗುತ್ತದೆ ಎಂದು ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರು ಶ್ರೀ ರಾಮಮಂದಿರ ಕುರಿತ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಈಗಾಗಲೇ ರಾಮಜನ್ಮಭೂಮಿ ವಿವಾದ ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥವಾಗಿದೆ. ಅಷ್ಟು ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಹೀಗಿರುವಾಗ ಅದು ವಿವಾದಿತ ಭೂಮಿ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳುತ್ತಾರೆ ಎಂದರೇ ಏನರ್ಥ ಎಂದು ಪ್ರಶ್ನೆ ಮಾಡಿದರು. ದೇಶದ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದ ಬಳಿಕವೂ ಅದು ಹೇಗೆ ವಿವಾದಾತ್ಮಕವಾಗುತ್ತದೆ ಎಂದು ಪ್ರಶ್ನೆ ಮಾಡಿದರು.