ಬೋರ್‌ವೆಲ್‌ ಏಜೆನ್ಸಿಗಳ ಚೆಲ್ಲಾಟ, ರೈತರಿಗೆ ಸಂಕಟ

By Kannadaprabha News  |  First Published Apr 17, 2024, 11:20 AM IST

 ಅಂತರ್ಜಲ ಮಟ್ಟ ಕುಸಿಯುತ್ತಿರುವ ಕಾರಣ ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆಯಾಗುತ್ತಿದ್ದು, ಅಡಿಕೆ, ತೆಂಗನ್ನು ಉಳಿಸಿಕೊಳ್ಳ ಬೇಕೆಂಬ ನಿಟ್ಟಿನಲ್ಲಿ ರೈತರು ಹೊಸ ಬೋರ್‌ವೆಲ್‌ಗಳನ್ನು ಕೊರೆಸಲು ಮುಂದಾಗಿದ್ದಾರೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಬೋರ್‌ವೆಲ್ ಏಜೆನ್ಸಿಗಳು ದುಪ್ಪಟ್ಟು ಹಣ ಪೀಕುತ್ತಿದ್ದು,ರೈತರು ಹೈರಾಣಾಗುತ್ತಿದ್ದಾರೆ.


 .ರಂಗಸ್ವಾಮಿ

 ತಿಪಟೂರು : ಅಂತರ್ಜಲ ಮಟ್ಟ ಕುಸಿಯುತ್ತಿರುವ ಕಾರಣ ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆಯಾಗುತ್ತಿದ್ದು, ಅಡಿಕೆ, ತೆಂಗನ್ನು ಉಳಿಸಿಕೊಳ್ಳ ಬೇಕೆಂಬ ನಿಟ್ಟಿನಲ್ಲಿ ರೈತರು ಹೊಸ ಬೋರ್‌ವೆಲ್‌ಗಳನ್ನು ಕೊರೆಸಲು ಮುಂದಾಗಿದ್ದಾರೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಬೋರ್‌ವೆಲ್ ಏಜೆನ್ಸಿಗಳು ದುಪ್ಪಟ್ಟು ಹಣ ಪೀಕುತ್ತಿದ್ದು,ರೈತರು ಹೈರಾಣಾಗುತ್ತಿದ್ದಾರೆ.

Tap to resize

Latest Videos

undefined

ನೀರಿನ ಕೊರತೆ ಹೆಚ್ಚಾಗಿರುವ ಕಾರಣ ರೈತರು ಹೊಸ ಬೋರ್‌ವೆಲ್‌ಗಳ ಮೊರೆ ಹೋಗುತ್ತಿದ್ದಾರೆ. ಕೆಲ ಖಾಸಗಿ ಬೋರ್‌ವೆಲ್ ಏಜೆನ್ಸಿಯವರು ರೈತರಿಂದ ಅಡಿ ಅಡಿಗೆ ದುಪ್ಪಟ್ಟು ಹಣ ಪೀಕುತ್ತಿದ್ದಾರೆ. ಸರ್ಕಾರ ಹೊಸ ಕೊಳವೆ ಬಾವಿ ಕೊರೆಸಲು ದರ ನಿಗದಿ ಮಾಡಿದರೂ ಏಜೆನ್ಸಿಯವರು ರೈತರನ್ನು ಸುಲಿಗೆ ಮಾಡುವುದು ನಿಲ್ಲುತ್ತಿಲ್ಲ. ಬರಗಾಲ ಹಾಗೂ ಬೇಸಿಗೆ ಪರಿಣಾಮ ಕೊಳವೆಬಾವಿಗಳು ಬತ್ತುತ್ತಿವೆ. ನೀರಿಲ್ಲದೆ ರೈತರು ನೀರಿಗಾಗಿ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

\Bಚಿನ್ನ, ಆಸ್ತಿ ಪತ್ರ ಅಡವಿಟ್ಟು ಕೊಳವೆ ಬಾವಿ ತೆಗೆಸುತ್ತಿರುವ ರೈತರು :\B

ರೈತರು ಚಿನ್ನಾಭರಣ, ಆಸ್ತಿ ಪತ್ರಗಳನ್ನು ಅಡವಿಟ್ಟು ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸುತ್ತಿದ್ದಾರೆ. ಬೋರ್‌ವೆಲ್ ಕಮಿಷನ್ ಏಜೆಂಟ್‌ಗಳು ಬಾರಿ ಶುಲ್ಕ ವಸೂಲಿ ಮಾಡುತ್ತಿದ್ದು, ರೈತರ ಅಸಹಾಯಕ ಪರಿಸ್ಥಿತಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಈ ಹಿಂದೆ ಕೊಳವೆ ಬಾವಿ ಕೊರೆಸಲು ಪ್ರತಿ ಅಡಿಗೆ 90ರಿಂದ 95 ರು. ಇತ್ತು ಆದರೆ ಈಗ 125 ರು.ಗಳಿಗಿಂತ ಹೆಚ್ಚು ಏರಿಸಿದ್ದಾರೆ. ಏಜೆನ್ಸಿಯವರ ದರ ಏರಿಕೆ ರೈತರಿಗೆ ನುಂಗಲಾರದ ತುತ್ತಾಗಿದೆ. ಎರೆಕ್ಷನ್, ಹೋಲ್ಸ್, ಮೀಲ್ಸ್, ವೆಲ್ಡಿಂಗ್, ಸಾಗಾಣೆ ಎಂದು 20ರಿಂದ 30 ಸಾವಿರ ಎಕ್ಸ್‌ಟ್ರಾ ಚಾರ್ಜ್‌ಗಳನ್ನು ರಿಗ್ ಮಾಲೀಕರು ಮತ್ತು ಕಮೀಷನ್ ಏಜೆಂಟ್‌ಗಳು ಹೇರುತ್ತಿದ್ದಾರೆ. ಕೊಬ್ಬರಿ ಬೆಲೆ ಕುಸಿತದಿಂದ ಜರ್ಜರಿತರಾಗಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಜಿಲ್ಲಾಧಿಕಾರಿಗಳು ಈ ಕುರಿತು ಗಮನ ವಹಿಸಿ, ಏಕ ದರ ಪಾಲಿಸುವಂತೆ ಕ್ರಮ ಕೈಗೊಳ್ಳಬೇಕಿದೆ. ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡಿರುವ ಕಮಿಷನ್ ಏಜೆಂಟರ ವಿರುದ್ಧ ಕ್ರಮ ಕೈಗೊಂಡು ಹಣವನ್ನು ವಾಪಸ್ ರೈತರಿಗೆ ಕೊಡಿಸಬೇಕೆಂಬುದು ರೈತರ ಬೇಡಿಕೆಯಾಗಿದೆ.

ಒಂದು ತಿಂಗಳ ಹಿಂದೆ ೩೦೦ ಅಡಿ ವರೆಗೆ ೧೦೨ರು.ಇತ್ತು. ಏಜೆನ್ಸಿಗಳು ಇದನ್ನೇ ದಂದೆ ಮಾಡಿಕೊಂಡು 300 ಅಡಿಗೆ 130, 400 ಅಡಿಗೆ 150, 700 ಅಡಿಗೆ 220, ಸಾವಿರ ಅಡಿಗೆ 400 ರು. ತೆಗೆದುಕೊಳ್ಳುತ್ತಿದ್ದಾರೆ. ಕೇಸಿಂಗ್, ಕಾಲರ್ ಅಳವಡಿಸಲು ಪ್ರತ್ಯೇಕ ಹಣ ಪೀಕುತ್ತಿದ್ದಾರೆ. ನೀರು ಬಂದರೆ ಮೋಟಾರ್, ಸ್ಟಾರ್ಟರ್, ಕೇಬಲ್‌ಗೂ ಹಣ ಹೊಂದಿಸಬೇಕು. ಹಾಗಾಗಿ ನೀರು ಬಂದರೂ ಕಷ್ಟ, ಬಾರದಿದ್ದರೂ ಕಷ್ಟ ಎಂಬ ಸ್ಥಿತಿ ಉಂಟಾಗಿದೆ.

- ಸಿದ್ದಯ್ಯ, ರೈತ, ಬಳುವನೇರಲು.

ಸರ್ಕಾರ ಹೊಸ ಕೊಳವೆ ಬಾವಿ ಕೊರೆಸಲು ನಿರ್ದಿಷ್ಟ ದರ ನಿಗದಿ ಮಾಡಿದರೂ ಕೆಲ ಏಜೆನ್ಸಿಯವರು ಹೆಚ್ಚು ಹಣ ನಿಗದಿ ಮಾಡಿದ್ದಾರೆ. ಹಿಂದೆ ಕೇಸಿಂಗ್, ಕಾಲರ್ ಉಚಿತವಾಗಿ ಕೊಡುತ್ತಿದ್ದರು. ಆದರೆ ಈಗ ಇದಕ್ಕೂ ಹಣ ವಸೂಲಿ ಮಾಡುತ್ತಿದ್ದಾರೆ. ಕೆಲ ಏಜೆನ್ಸಿಯವರ ಬಳಿ ಪರವಾನಗಿ ಇಲ್ಲ. ಜಿಎಸ್‌ಟಿ ಬಿಲ್ ಕೊಡದೆ ಬಿಳಿ ಚೀಟಿಯಲ್ಲಿ ವ್ಯವಹಾರ ಮುಗಿಸುತ್ತಿದ್ದಾರೆ. ಸಾವಿರ ಅಡಿ ಕೊರೆಸಿದರೆ ಏಜೆಂಟ್‌ಗಳಿಗೆ 50 ಸಾವಿರ ರು.ಉಳಿಯುತ್ತಿದೆ. ಸರ್ಕಾರದ ನಿಯಮ ಪಾಲನೆ ಮಾಡುತ್ತಿಲ್ಲ. ಈ ಬಗ್ಗೆ ತಾಲೂಕು ಆಡಳಿತಕ್ಕೆ ಮನವಿ ಕೊಟ್ಟಿದ್ದು, ಅಂತಹವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕು.

- ಚನ್ನಬಸವಣ್ಣ, ಜಿಲ್ಲಾಧ್ಯಕ್ಷರು ಪ್ರಾಂತ್ಯ ರೈತ ಸಂಘ, ತಿಪಟೂರು.

ಖಾಸಗಿ ಬೋರ್‌ವೆಲ್ ಏಜೆನ್ಸಿಯವರು ಸರ್ಕಾರಕ್ಕೆ ಲೆಕ್ಕ ಕೊಡುತ್ತಿಲ್ಲ. ವೈಜ್ಞಾನಿಕ ದಾಖಲಾತಿ ಇಲ್ಲ. ಜಿಎಸ್ಟಿ ಹಾಕಲ್ಲ, ಯಾವುದೇ ಲೆಕ್ಕಾಚಾರ ಇಲ್ಲ. ರೈತರಿಗೆ ನೀರು ಬರುತ್ತದೆ ಎಂಬ ನಂಬಿಕೆ ಇಲ್ಲದಿದ್ದರೂ ವಿಧಿಯಿಲ್ಲದೆ ಕೊರೆಸುತ್ತಾರೆ. ಕೊಬ್ಬರಿ ಗೆ ಬೆಲೆ ಇಲ್ಲ, ರೈತರ ಬಳಿ ಹಣವಿಲ್ಲ. ಬರ ನಿರ್ವಣೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರ ಎಲ್ಲಾ ರೈತರಿಗೂ ಬೋರ್‌ವೆಲ್ ಕೊರೆಸಲು ಸಬ್ಸಿಡಿಯನ್ನು ಕೊಡಬೇಕು.

- ಜಯಚಂದ್ರಶರ್ಮ, ಅಧ್ಯಕ್ಷರು, ರೈತ ಸಂಘ, ತಿಪಟೂರು.

ಕೊಳವೆ ಬಾವಿ ಕೊರೆಸಲು ಸರ್ಕಾರ ನಿಗದಿ ಮಾಡಿರುವ ದರದಂತೆ ಖಾಸಗಿ ಬೋರ್‌ವೆಲ್ ಏಜೆನ್ಸಿಯವರು ಪಡೆಯಬೇಕು. ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು. ನಮಗೆ ಈಗಾಗಲೇ ರೈತರಿಂದ ದೂರುಗಳು ಕೇಳಿ ಬಂದಿದ್ದು, ಏಜೆನ್ಸಿಯವರು ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡಿದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತದೆ.

- ಸಪ್ತಶ್ರೀ, ಉಪವಿಭಾಗಾಧಿಕಾರಿಗಳು, ತಿಪಟೂರು.

ಬೋರ್‌ವೆಲ್ ಕೊರೆಸುತ್ತಿರುವ ರೈತ.

click me!