ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ ಸೇವೆಗೆ ಒಪ್ಪಿಗೆ!

By Suvarna NewsFirst Published Dec 5, 2019, 12:56 PM IST
Highlights

ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ ಸೇವೆಗೆ ಒಪ್ಪಿಗೆ| ಆಟೋ, ಟ್ಯಾಕ್ಸಿಗಳ ಹಾವಳಿ ಹೆಚ್ಚಳ ಹಿನ್ನೆಲೆ, 3ನೇ ದ್ವಾರದಿಂದ ಬಸ್‌ ಪ್ರವೇಶ| ರೈಲ್ವೆ ನಿಲ್ದಾಣಕ್ಕೆ ಹೋಗುವ ಬಸ್‌ಗಳ ಬಗ್ಗೆ ಬಿಎಂಟಿಸಿ ಚರ್ಚೆ

ಬೆಂಗಳೂರು[ಡಿ.05]: ಬೆಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣವಾದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಆಟೋ, ಟ್ಯಾಕ್ಸಿಗಳ ಹಾವಳಿ ತಪ್ಪಿಸಲು ಬಿಎಂಟಿಸಿ ಬಸ್‌ ಸೇವೆ ಆರಂಭಿಸುವುದಕ್ಕೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲಿ ಬಸ್‌ ಸಂಚಾರ ಆರಂಭವಾಗಲಿದೆ.

ರೈಲು ನಿಲ್ದಾಣದ ಮುಂಭಾಗದಲ್ಲಿ ಬಿಎಂಟಿಸಿ ಬಸ್‌ ನಿಲ್ದಾಣವಿದ್ದರೂ ರೈಲು ನಿಲ್ದಾಣಕ್ಕೆ ಬಿಎಂಟಿಸಿ ಬಸ್‌ಗಳ ನೇರ ಆಗಮನ ಸಾಧ್ಯವಿಲ್ಲದ ಕಾರಣ, ಪ್ರಯಾಣಿಕರು ಆಟೋ, ಟ್ಯಾಕ್ಸಿಗಳ ಮೊರೆ ಹೋಗಬೇಕಾಗಿದೆ. ಇದರಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ. ಅದನ್ನು ತಪ್ಪಿಸುವ ಸಲುವಾಗಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದೊಳಗೆ ಬಿಎಂಟಿಸಿ ಬಸ್‌ ಸಂಚರಿಸಲು ನೈಋುತ್ಯ ರೈಲ್ವೆ ಬೆಂಗಳೂರು ವಿಭಾಗ ಅನುಮತಿ ನೀಡಿದೆ.

ಕಳೆದ ಜೂನ್‌ನಲ್ಲಿ ಉದ್ಘಾಟನೆಗೊಂಡ ರೈಲು ನಿಲ್ದಾಣದ 3ನೇ ದ್ವಾರದಿಂದ ಬಸ್‌ಗಳು ಒಳ ಬರುವುದಕ್ಕೆ ಅವಕಾಶ ನೀಡಲಾಗುತ್ತಿದೆ. 3ನೇ ದ್ವಾರದಿಂದ ಬರುವ ಪ್ರಯಾಣಿಕರು ನೇರವಾಗಿ 1ನೇ ದ್ವಾರ ಪ್ರವೇಶಿಸಬಹುದಾಗಿದೆ. ರೈಲ್ವೆ ನಿಲ್ದಾಣಕ್ಕೆ ನಗರದ ಯಾವ ಯಾವ ಮಾರ್ಗದ ಬಸ್‌ಗಳು ಸಂಚರಿಸುವ ಅವಕಾಶ ಮಾಡಿಕೊಡಬೇಕು ಎಂಬುದರ ಬಗ್ಗೆ ಬಿಎಂಟಿಸಿ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಅಂತಿಮಗೊಂಡ ಬಳಿಕ ರೈಲ್ವೆ ನಿಲ್ದಾಣಕ್ಕೆ ಬಿಎಂಟಿಸಿ ಬಸ್‌ ಸೇವೆ ಆರಂಭವಾಗಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

click me!