
ಟಿ. ನರಸೀಪುರ (ಮಾ.03): ಬಿಜೆಪಿ ದಲಿತ ಸಮುದಾಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದು ಮುಂಬರುವ ಚುನಾವಣೆಯಲ್ಲಿ ದಲಿತ ಸಮುದಾಯದ ಶಕ್ತಿಯಿಂದ 150ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಪಕ್ಷ ಜಯಗಳಿಸಲಿದೆ ಎಂದು ರಾಜ್ಯ ಪ.ಜಾತಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಸ್ಥಳಿಯ ಬಿಜೆಪಿ ಮುಖಂಡರನ್ನು ಭೇಟಿಯಾಗಿ ಅಭಿನಂದನೆ ಸ್ವೀಕರಿಸಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಪಕ್ಷದ ಎಸ್‌ಸಿ ಮೋರ್ಚಾ ಅಧ್ಯಕ್ಷನಾಗಿ ಆಯ್ಕೆಗೊಂಡ ನಂತರ ಮೊದಲ ಹಂತದ ರಾಜ್ಯ ಪ್ರವಾಸ ಮುಗಿಸಿ 2ನೇ ಹಂತದ ಪ್ರವಾಸ ಕೈಗೊಂಡು ಕಾರ್ಯಕರ್ತರ ಅಹವಾಲು ಸ್ವೀಕರಿಸಿದ್ದೇನೆ. ಈ ವೇಳೆ ರಾಜ್ಯದ ದಲಿತ ಸಮುದಾಯ ಬಿಜೆಪಿ ಕಡೆ ವಾಲಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಬಿಜೆಪಿಯನ್ನು ಯಾರು ದಲಿತ ವಿರೋಧಿ ಪಕ್ಷ ಎಂದು ಬಿಂಬಿಸಲು ಹೊರಟಿದ್ದರೋ ಅವರು ಇಂದು ದಾರಿ ತಪ್ಪಿದ್ದಾರೆ. ಬಿಜೆಪಿ ರಾಜ್ಯದೆಲ್ಲೆಡೆ ಮತ್ತಷ್ಟುಸಧೃಡಗೊಳ್ಳುತ್ತಿದೆ. ರಾಜ್ಯದಲ್ಲಿನ ಶೇ. 24 ರಷ್ಟುದಲಿತ ಸಮುದಾಯ ಪೂರ್ಣ ಪ್ರಮಾಣದಲ್ಲಿ ಬಿಜೆಪಿಗೆ ಬೆಂಬಲವಾಗಿ ನಿಂತಿರುವುದರಿಂದಲೇ ಲೋಕಸಭೆಯಲ್ಲಿ 25 ಸ್ಥಾನ ಗೆಲ್ಲಲು ಸಾಧ್ಯವಾಯಿತು. ಹಾಗಾಗಿ ಬಿಜೆಪಿ ವರಿಷ್ಠರಿಗೂ ಸಮುದಾಯ ನಮ್ಮೊಂದಿಗಿದೆ ಎಂಬುದು ಮನವರಿಕೆಯಾಗಿದ್ದು, ಪಕ್ಷ ದಲಿತ ಸಮುದಾಯಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಿದೆ ಎಂದರು.
ಈಶ್ವರಪ್ಪ, ವಿಶ್ವನಾಥ್ ಮುಂದಿಟ್ಟು CT ರವಿ ಹೊಸ ದಾಳ
ಸಮುದಾಯದಲ್ಲಿ ಅತಿ ಹೆಚ್ವಿನ ಸಂಖ್ಯೆಯ ವಿದ್ಯಾವಂತರಿದ್ದು ಉದ್ಯೋಗದಿಂದ ವಂಚಿತರಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹರಿಯಾಣ ಮಾದರಿಯಲ್ಲಿ ನಿರುದ್ಯೋಗ ಭತ್ಯೆ ನೀಡಲು ಮುಂದಾಗಬೇಕು. ಸಮುದಾಯದ ಹೆಚ್ಚಿನ ಜನರು ಭೂಮಿ ಇಲ್ಲದೇ ಪರಿತಪಿಸುತ್ತಿದ್ದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಭೂ ವಂಚಿತರಿಗೆ ಜಮೀನು ನೀಡುವ ಕೆಲಸ ಆಗಬೇಕು. ವಿದ್ಯಾವಂತ ನಿರುದ್ಯೋಗಿಗಳಿಗೆ ವ್ಯಾಪಾರ ಮಾಡಲು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವಂತಾಗಬೇಕು ಎಂದು ಅವರು ತಿಳಿಸಿದರು.
ಪಕ್ಷಕ್ಕೆ ನಾವೆಷ್ಟುಶಕ್ತಿ ತುಂಬುತ್ತೀವೋ,ಸಮಾಜಕ್ಕೆ ಅಷ್ಟೇ ಶಕ್ತಿ ತುಂಬುವ ಕೆಲಸವನ್ನು ಬಿಜೆಪಿ ಮಾಡಲಿದೆ ಎಂದ ನಾರಾಯಣಸ್ವಾಮಿ ಯಾವ ಯಾವ ಪಕ್ಷಗಳವರು ದಲಿತರೇ ನಮ್ಮ ಮತ ಬ್ಯಾಂಕ್ ಎಂದು ದಲಿತರನ್ನು ವಂಚಿಸುತ್ತಿದ್ದರೋ ಅವರಿಗೆ ದಲಿತ ಮತಗಳ ಬಾಗಿಲು ಬಂದ್ ಆಗಿದೆ ಎಂದರು.