ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದ್ದು, ಆದರೆ ಕಾಂಗ್ರೆಸಿಗೆ ಅಧಿಕಾರ ದೊರೆಯುವುದು ಪಕ್ಕಾ ಎಂದು ಮುಖಂಡರೋರ್ವರು ಹೇಳಿದ್ದಾರೆ.
ದಾವಣಗೆರೆ [ನ.16]: ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರವನ್ನು ಹಿಡಿಯಲು ಬಿಜೆಪಿಯವರು ಪಕ್ಷೇತರರ ಬಳಿ ಕುದುರೆ ವ್ಯಾಪಾರಕ್ಕೆ ಮುಂದಾಗಿದ್ದಾರೆ. ಆ ಪಕ್ಷ ಏನೇ ಹರಸಾಹಸ ಮಾಡಿದರೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಫಲಿತಾಂಶ ಬರುತ್ತಿದ್ದಂತೆಯೇ ಪಕ್ಷೇತರ, ಬಂಡಾಯ ಎದ್ದು, ಗೆದ್ದ ಸದಸ್ಯರನ್ನು ಸೆಳೆಯಲು ಬಿಜೆಪಿಯವರು ಕುದುರೆ ವ್ಯಾಪಾರಕ್ಕೆ ಪ್ರಯತ್ನ ನಡೆಸಿದ್ದು, ನಾವು ಕುದುರೆ ವ್ಯಾಪಾರ ನಡೆಸಲ್ಲ ಎಂದರು.
ಸೌಮ್ಯ ನರೇಂದ್ರಕುಮಾರ, ಉದಯಕುಮಾರ ಪಕ್ಷೇತರ ಅಭ್ಯರ್ಥಿಗಳಾಗಿ ಜಯ ಸಾಧಿಸಿದ್ದಾರೆ. ಈ ಇಬ್ಬರ ಜೊತೆಗೆ ಜೆಡಿಎಸ್ ಪಕ್ಷದ ಸದಸ್ಯರಾದ ನೂರ್ ಜಹಾನ್ ಬೀ ಬೆಂಬಲದೊಂದಿಗೆ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದರು.
ಈಗಾಗಲೇ ಪಕ್ಷೇತರರು, ಜೆಡಿಎಸ್ ಸದಸ್ಯರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದೇವೆ. ಪಕ್ಷೇತರರು, ಜೆಡಿಎಸ್ ಸದಸ್ಯೆ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಒಂದೆರೆಡು ದಿನಗಳಲ್ಲೇ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರವನ್ನು ಹಿಡಿಯುವ ಬಗ್ಗೆ ಸ್ಪಷ್ಟಚಿತ್ರಣವೂ ಸಿಗಲಿದೆ ಎಂದು ತಿಳಿಸಿದರು.
ಪಾಲಿಕೆಯಲ್ಲಿ 22 ಸದಸ್ಯ ಬಲದ ಕಾಂಗ್ರೆಸ್ ಪಕ್ಷಕ್ಕೆ ಪಕ್ಷೇತರರು, ಜೆಡಿಎಸ್ ಸದಸ್ಯೆ ಸೇರಿದಂತೆ ಮೂವರ ಬೆಂಬಲವಿದೆ. ಓರ್ವ ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರ ಬೆಂಬಲದೊಂದಿಗೆ ನಮ್ಮ ಪಕ್ಷದ ಸದಸ್ಯ ಬಲ 27ಕ್ಕೇರಲಿದೆ. ಈ ಸಂಖ್ಯಾಬಲದೊಂದಿಗೆ ನಾವೇ ಮತ್ತೆ ಪಾಲಿಕೆಯಲ್ಲಿ ಅಧಿಕಾರಕ್ಕೇರಲಿದ್ದೇವೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಅವರು ವಿವರಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕಡಿಮೆ ಸ್ಥಾನ ಗಳಿಸಿದ್ದು ನಿಜ. ಇದಕ್ಕೆಲ್ಲಾ ಬಿಜೆಪಿಯವರು ಹಣ, ಹೆಂಡ ಹಂಚಿರುವುದು ಒಂದು ಕಾರಣವಾದರೇ, ಟಿಕೆಟ್ ಹಂಚಿಕೆಯಲ್ಲಿ ಆಗ ಗೊಂದಲ, ಕೆಲ ಅಭ್ಯರ್ಥಿಗಳ ಅತಿಯಾದ ಆತ್ಮವಿಶ್ವಾಸ, ಸ್ಥಳೀಯ ಅಭ್ಯರ್ಥಿಗಳ ವರ್ಚಸ್ಸು ಸಹ ಕಾರಣವಾಗಿದೆ ಎಂದು ವಿವರಿಸಿದರು.
ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ದಾವಣಗೆರೆ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ನೋಡಿ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, 22 ವಾರ್ಡ್‌ಗಳಲ್ಲಿ ಗೆಲ್ಲಿಸಿದ್ದಾರೆ. ಮೇಯರ್ ಸ್ಥಾನದ ಬಗ್ಗೆ ಈವರೆಗೆ ಪಕ್ಷದೊಳಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಾಣೇಬೆನ್ನೂರು ಬಿಜೆಪಿ ಅಭ್ಯರ್ಥಿ ಮೇಲೆ ದಾಖಲಾದ FIR ಸಂಕಷ್ಟ ತರುತ್ತಾ?...
ಬಿಜೆಪಿ ಸರ್ಕಾರ ಮೇಯರ್ ಹುದ್ದೆಗೆ ಯಾವುದೇ ಮೀಸಲಾತಿ ನೀಡಿದರೂ ಆ ವರ್ಗದ ಅಭ್ಯರ್ಥಿಗಳು ನಮ್ಮ ಪಕ್ಷದಲ್ಲಿದ್ದಾರೆ. ಮೇಯರ್ ಆಯ್ಕೆಯನ್ನು ನಮ್ಮ ಪಕ್ಷದ ವರಿಷ್ಠರು ತೀರ್ಮಾನಿಸುವರು. ಬಿಜೆಪಿ ಈಗಾಗಲೇ ಪಕ್ಷೇತರ ಸದಸ್ಯರಿಗೆ ಹಣ, ಅಧಿಕಾರದ ಆಸೆ ತೋರಿಸಿ, ಕುದುರೆ ವ್ಯಾಪಾರಕ್ಕೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಪಕ್ಷೇತರರು ತಮ್ಮ ಭಾಗದ ಜನರು, ಕಾರ್ಯಕರ್ತರ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಹೇಳುತ್ತ, ಬಿಜೆಪಿ ಆಮಿಷಗಳಿಗೆ ಸೊಪ್ಪು ಹಾಕುತ್ತಿಲ್ಲ. ತಲೆ ಬಾಗಿಲ್ಲ ಎಂದು ಎಚ್.ಬಿ.ಮಂಜಪ್ಪ ಟೀಕಿಸಿದರು.
ಪಾಲಿಕೆ ನೂತನ ಸದಸ್ಯ ಎ.ನಾಗರಾಜ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಮುಖಂಡರಾದ ಡೋಲಿ ಚಂದ್ರು, ಮಾಗಾನಹಳ್ಳಿ ಬಿ.ಕೆ.ಪರಶುರಾಮ, ಎಲ್.ಎಚ್. ಸಾಗರ್ ಇತರರು ಇದ್ದರು.