ಬಾಗಲಕೋಟೆಯಲ್ಲಿ ಮಂತ್ರಿಗಿರಿಗೆ ಶುರುವಾಯ್ತು ಲಾಭಿ| ಸಿದ್ದರಾಮಯ್ಯ ಸ್ವಕ್ಷೇತ್ರ ಜಿಲ್ಲೆಗೆ ಸಚಿವ ಸ್ಥಾನ ನೀಡುತ್ತಾ ಬಿಜೆಪಿ?| ಕಾರಜೋಳರನ್ನು ಡಿಸಿಎಂ ಮಾಡಲು ದಲಿತರ ಒತ್ತಾಯ| ಜಿಲ್ಲೆಯ 7 ಶಾಸಕರ ಪೈಕಿ ಐವರು ಶಾಸಕರು| ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಕಾರಜೋಳ, ನಿರಾಣಿ ಮತ್ತು ಚರಂತಿಮಠ|
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ಜು.25): ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಿ ಇತ್ತ ನೂತನ ಬಿಜೆಪಿ ಸರ್ಕಾರ ರಚನೆಗೆ ಕಸರತ್ತು ನಡೆಯುತ್ತಿದೆ. ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಮಂತ್ರಿಗಿರಿಗೆ ಇನ್ನಿಲ್ಲದ ಲಾಭಿ ಶುರುವಾಗಿದೆ.
ಜಿಲ್ಲೆಯಿಂದ 5 ಜನ ಬಿಜೆಪಿ ಶಾಸಕರಿದ್ದು, ಪ್ರಭಾವಿಗಳು ಮಂತ್ರಿಗಿರಿಗೆ ಕಾದು ಕುಳಿತಿದ್ದಾರೆ. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ಜಿಲ್ಲೆಯಾಗಿರುವುದರಿಂದ ಅವರಿಗೆ ಸೆಡ್ಡು ಹೊಡೆಯಲು ಬಿಜೆಪಿಯಿಂದ ಹೆಚ್ಚುವರಿ ಸಚಿವ ಸ್ಥಾನ ನೀಡಬೇಕೆಂಬ ಕೂಗು ಕಾರ್ಯಕರ್ತರಿಂದ ಕೇಳಿ ಬರುತ್ತಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದರೆ ಬಾಗಲಕೋಟೆ ಜಿಲ್ಲೆಗೆ ಒಂದು ಅಥವಾ ಎರಡು ಮಂತ್ರಿಗಿರಿ ಸಿಗುವುದು ಪಕ್ಕಾ. ಹೀಗಾಗಿ ಈ ಬಾರಿಯೂ ರಾಜ್ಯದಲ್ಲಿ ನೂತನ ಬಿಜೆಪಿ ಸರ್ಕಾರ ರಚನೆಗೆ ಕಸರತ್ತು ನಡೆದ ಬೆನ್ನಲ್ಲೆ ಬಿಜೆಪಿ ಶಾಸಕರಿಗೆ ಮಂತ್ರಿಯಾಗುವ ಆಸೆ ಗರಿಗೆದರಿವೆ.
ಜಿಲ್ಲೆಯಿಂದ ಬಿಜೆಪಿ ಹಿರಿಯ ಮುಖಂಡ, ದಲಿತ ನಾಯಕ, ಮುಧೋಳ ಕ್ಷೇತ್ರದ ಶಾಸಕ ಗೋವಿಂದ ಕಾರಜೋಳ, ಬೀಳಗಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಮುರುಗೇಶ ನಿರಾಣಿ, ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ, ಹುನಗುಂದದಿಂದ ದೊಡ್ಡನಗೌಡ ಪಾಟೀಲ್ ಸೇರಿದಂತೆ ಹಲವರು ಮಂತ್ರಿಗಿರಿಯ ರೇಸ್’ನಲ್ಲಿದ್ದಾರೆ.
ಬಾದಾಮಿ ಮತಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಆಯ್ಕೆಯಾಗಿರುವುದರಿಂದ ಸಹಜವಾಗಿಯೇ ಬಾಗಲಕೋಟೆ ಜಿಲ್ಲೆಯ ಮೇಲೂ ಬಿಜೆಪಿ ಹೈಕಮಾಂಡ್ ಒಂದು ಕಣ್ಣಿಟ್ಟಿದೆ. ಜಿಲ್ಲೆಯಲ್ಲಿ ಹೆಚ್ಚೆಚ್ಚು ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೂಲಕ ಅವರಿಗೆ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಡಲೆಂದೇ ಹೆಚ್ಚುವರಿ ಸಚಿವ ಸ್ಥಾನಗಳನ್ನು ಜಿಲ್ಲೆಗೆ ನೀಡಬೇಕು ಎಂಬುದು ಕಾರ್ಯಕರ್ತರ ಹಾಗೂ ಮುಖಂಡರ ಬೇಡಿಕೆಯಾಗಿದೆ.
ಇದೇ ವೇಳೆ ಹಿರಿಯ ದಲಿತ ಮುಖಂಡರಾದ ಗೋವಿಂದ ಕಾರಜೋಳ ಅವರನ್ನು ಡಿಸಿಎಂ ಮಾಡಬೇಕು ಎಂದು ರಾಜ್ಯ ಮಾದಿಗ ಮಹಾಸಭಾ ಸೇರಿದಂತೆ ವಿವಿಧ ದಲಿತ ಸಂಘಟನೆಗಳು ಆಗ್ರಹಿಸಿವೆ. ಅಲ್ಲದೆ ಉತ್ತರ ಕರ್ನಾಟಕ ಭಾಗದಲ್ಲಿ ಎರಡು ಸಚಿವ ಸ್ಥಾನಗಳನ್ನು ದಲಿತರಿಗೆ ನೀಡಬೇಕೆನ್ನುವ ಕೂಗು ಸಹ ಕೇಳಿ ಬರುತ್ತಿದೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ನೂತನ ಸರ್ಕಾರ ಅಸ್ಥಿತ್ವಕ್ಕೆ ಬರಲು ಸಿದ್ಧತೆಗಳು ನಡೆಯುತ್ತಿರುವುದರ ಮಧ್ಯೆ, ಬಾಗಲಕೋಟೆ ಜಿಲ್ಲೆಯಿಂದ ಯಾರಿಗೆ ಮಂತ್ರಿಗಿರಿ ಪಟ್ಟ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.