ಸುರೇಶ ಅಂಗಡಿ ನಿಧನದನಂತರ ಮತ್ತೆ ಮುನ್ನೆಲೆಗೆ ಚರ್ಚೆ| ರಾಜ್ಯ ಹೈಕಮಾಂಡ್‌ನಿಂದಲೂ ಮನವಿ ಸಾಧ್ಯತೆ| 25 ವರ್ಷದ ರಾಜಕೀಯ ತಪಸ್ಸಿಗೆ ದಕ್ಕುತ್ತಾ ಯೋಗ?| ಜೆಡಿಎಸ್ ಪಕ್ಷ ತೊರೆದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದರೂ ಸಚಿವರಾಗುವ ಯೋಗ ಬರಲಿಲ್ಲ|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಸೆ.28): ಸಂಗಣ್ಣ ಕರಡಿ ಅವರಿಗೆ ಸಚಿವರಾಗುವ ಯೋಗ ಈ ಬಾರಿಯಾದರೂ ಸಿಕ್ಕೀತೆ ಎನ್ನುವ ಚರ್ಚೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬಹುತೇಕ ಪಕ್ಕಾ ಆಗುತ್ತಿದ್ದಂತೆ ಇವರ ಹೆಸರು ತೇಲಾಡಲು ಪ್ರಾರಂಭವಾಗಿದೆ. ಅದರಲ್ಲೂ ಕೊರೋನಾಗೆ ತುತ್ತಾದ ಸುರೇಶ ಅಂಗಡಿ ಅವರು ನಿರ್ವಹಿಸುತ್ತಿದ್ದ ಖಾತೆಯನ್ನೇ ನೀಡಬೇಕು ಎನ್ನುವ ಹಕ್ಕೊತ್ತಾಯವೂ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ.
ಸಂಸದ ಸಂಗಣ್ಣ ಕರಡಿ ಅವರು ಎರಡನೇ ಬಾರಿಗೆ ಸಂಸದರಾದ ವೇಳೆಯಲ್ಲಿಯೇ ಇವರು ಸಚಿವರಾಗುತ್ತಾರೆ ಎನ್ನುವ ಕುರಿತು ಚರ್ಚೆ ಪ್ರಾರಂಭವಾಗಿತ್ತು. ಅದರಲ್ಲೂ ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡಬೇಕು ಎನ್ನುವ ಕೂಗಿನ ಮಧ್ಯೆ ಇವರ ಹೆಸರು ಕೇಳಿ ಬಂದಿತ್ತು. ಆದರೆ, ಸುರೇಶ ಅಂಗಡಿಯವರಿಗೆ ಆ ಸ್ಥಾನ ದಕ್ಕಿತು.
ಸಂಸದ ಸಂಗಣ್ಣ ಕರಡಿ ಅವರು ಬಿಜೆಪಿಯ ದೆಹಲಿಯ ಹೈಕಮಾಂಡ್ ಹಾಗೂ ರಾಜ್ಯ ಹೈಕಮಾಂಡ್‌ನಲ್ಲಿ ಒಳ್ಳೆಯ ಪ್ರಭಾವ ಮತ್ತು ಪ್ರೀತಿಯನ್ನು ಗಳಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿಯೂ ಕೊಡುಗೆ ನೀಡಿದ್ದಾರೆ. ಇದೆಲ್ಲಕ್ಕಿಂತ ಮಿಗಿಲಾಗಿ ಅವರು ಸಂಸದರಾಗಿ ಮಾಡಿರುವ ಕೆಲಸ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದ್ದಾರೆ. ಇನ್ನು ನಿರಂತರ ಓಡಾಟ ಮತ್ತು ಪಕ್ಷ ಸಂಘಟನೆಗಾಗಿ ಅವರು ತೋರುತ್ತಿರುವ ಉತ್ಸಾಹದಿಂದಾಗಿ ಅವರಿಗೆ ಈ ಬಾರಿ ಕೇಂದ್ರ ಸಚಿವ ಸ್ಥಾನ ಪಕ್ಕಾ ಎನ್ನಲಾಗುತ್ತಿದೆ.
ಮಂತ್ರಾಲಯ ಮಠದಿಂದ ಎಸ್‌ಪಿಗೆ ಶ್ರೀರಾಘವೇಂದ್ರ ಅನುಗ್ರಹ ಪ್ರಶಸ್ತಿ ಸಿಕ್ಕಿತ್ತು
ಕಾಲ ಕೂಡಿ ಬರುತ್ತಿಲ್ಲ:
ಸಂಗಣ್ಣ ಕರಡಿ ಅವರು ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿದ್ದರೂ ಅವರಿಗೆ ಸಚಿವ ಸ್ಥಾನದ ಯೋಗ ಕೂಡಿ ಬರುತ್ತಲೇ ಇಲ್ಲ. ಜೆಡಿಎಸ್ ಪಕ್ಷದಲ್ಲಿದ್ದ ಅವರು ಪಕ್ಷ ತೊರೆದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದರೂ ಸಚಿವರಾಗುವ ಯೋಗ ಬರಲಿಲ್ಲ. ಮೊದಲು ಪಕ್ಷಕ್ಕೆ ಬಂದ ಶಾಸಕರೆಲ್ಲರೂ ಸಚಿವರಾದರೂ ಇವರಿಗೆ ಮಾತ್ರ ಈ ಭಾಗ್ಯ ಒಲಿಯಲಿಲ್ಲ.
ರಾಜಕೀಯದಲ್ಲಿಯೇ ಸುಮಾರು 30-35 ವರ್ಷಗಳ ಸುದೀರ್ಘ ಅನುಭವ ಇದೆ. ಸುಮಾರು 25 ವರ್ಷಗಳ ಕಾಲ ನಿರಂತರ ವಿಧಾನಸಭೆ ಇಲ್ಲವೇ ಲೋಕಸಭೆ ಪ್ರವೇಶಿಸುತ್ತಲೇ ಬಂದಿದ್ದಾರೆ. ಆದರೂ ಅವರಿಗೆ ಸಚಿವ ಸ್ಥಾನದ ಯೋಗ ಕೂಡಿಬರುತ್ತಿಲ್ಲ ಎನ್ನುವ ಕೊರಗು ಇದ್ದೆ ಇದೆ. ಈ ಸ್ಥಾನಮಾನಕ್ಕಾಗಿ ಅವರು ಎಂದೂ ಲಾಭಿ ಮಾಡುವುದಾಗಲಿ, ಪಕ್ಷಕ್ಕೆ ಬೆದರಿಕೆ ಹಾಕುವುದಾಗಲಿ ಮಾಡಿಲ್ಲ. ಹೀಗಾಗಿ, ಈ ಬಾರಿ ಬಿಜೆಪಿ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನುವುದು ರಾಜಕೀಯ ವಿಶ್ಲೇಷಣೆಯಲ್ಲಿ ಕೇಳಿ ಬರುತ್ತಿರುವ ಮಾತು.
ಈಗಿರುವ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಇವರೇ ಮುಂಚೂಣಿಯಲ್ಲಿದ್ದಾರೆ. ಅಲ್ಲದೆ ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ ನೀಡುವುದು ಹಾಗೂ ಲಿಂಗಾಯತ ಸಮುದಾಯಕ್ಕೆ ಒತ್ತು ನೀಡುವುದಕ್ಕಾಗಿ ಇವರಿಗೆ ಸಚಿವ ಸ್ಥಾನ ನೀಡಿಯೇ ನೀಡುತ್ತಾರೆ ಎನ್ನುತ್ತಾರೆ ಜಿಲ್ಲೆಯ ಬಿಜೆಪಿ ನಾಯಕರು. ಆದರೆ, ಇದ್ಯಾವುದರ ಕುರಿತು ಸಂಸದ ಸಂಗಣ್ಣ ಕರಡಿ ಅವರು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಅಲ್ಲದೆ ಈ ಕುರಿತು ಅವರು ನೇರವಾಗಿ ಎಲ್ಲಿಯೂ ಮಾತನಾಡಿಲ್ಲ. ಪಕ್ಷದ ಹೈಕಮಾಂಡ್‌ಗೆ ಬಿಟ್ಟವಿಷಯ. ಪಕ್ಷ ಅವಕಾಶ ನೀಡಿದರೆ ಖಂಡಿತವಾಗಿಯೂ ಹಗಲಿರಳು ಕೆಲಸ ಮಾಡಿ, ಸೇವೆ ಮಾಡುವ ಹೆಬ್ಬಯಕೆ ಇದೆ ಎಂದಷ್ಟೇ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯೇ ನೀಡಲು ಅವರು ನಿರಾಕರಿಸಿದ್ದಾರೆ.