ಕಾಂಗ್ರೆಸ್‌ ತೆಕ್ಕೆಯಲ್ಲಿರುವ ಬಿಜೆಪಿ ಸದಸ್ಯರ ನಡೆ ನಿಗೂಢ..!

By Kannadaprabha News  |  First Published Oct 22, 2020, 2:21 PM IST

ಜಿಪಂ 6 ಸದ​ಸ್ಯ​ರು ಬಿಜೆಪಿಯಲ್ಲಿಯೇ ಉಳಿಯುತ್ತಾರಾ?| ಕಾಂಗ್ರೆಸ್‌ ಪಕ್ಷವನ್ನೇ ಸೇರುತ್ತಾರಾ?|ಬಿಜೆಪಿ ನಾಯಕರ ಮೌನದಿಂದ ಹಲವಾರು ಪುಕಾರುಗಳಿಗೆ ರೆಕ್ಕೆಪುಕ್ಕ| 


ಸೋಮರಡ್ಡಿ ಅಳವಂಡಿ

ಕೊಪ್ಪಳ(ಅ.22): ಕೇವಲ ಉಳಿದ 8 ತಿಂಗಳ ಅವಧಿಗಾಗಿ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆ ಜಿಲ್ಲೆಯ ರಾಜಕೀಯದ ಮೇಲೆ ನಾನಾ ರೀತಿಯ ಪ್ರಭಾವ ಬೀರಿದೆ. ಅದರಲ್ಲೂ ಬಿಜೆಪಿಯ 6 ಸದಸ್ಯರು ಪಕ್ಷದ ವಿಪ್‌ ಉಲ್ಲಂಘನೆ ಮಾಡಿ ಕಾಂಗ್ರೆಸ್ಸಿಗೆ ಬೆಂಬಲ ನೀಡಿರುವುದು ತೇವ್ರ ಸಂಚಲನಕ್ಕೆ ಕಾರಣವಾಗಿದೆ.

Tap to resize

Latest Videos

ಕಾಂಗ್ರೆಸ್ಸಿಗೆ ನಿಚ್ಚಳ ಬಹುಮತ ಇದ್ದರೂ ಬಿಜೆಪಿಯ ಸದಸ್ಯರ ಬೆಂಬಲ ಪಡೆದಿದ್ದು ಯಾಕೆ? ಎನ್ನುವುದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ. ತಮ್ಮದೇ ಪಕ್ಷದ ಅಧ್ಯಕ್ಷನನ್ನು ಕೆಳಗಿಳಿಸಲು ಕಾಂಗ್ರೆಸ್‌, ಬಿಜೆಪಿ ಸದಸ್ಯರ ಬೆಂಬಲ ಪಡೆಯಲು ಮುಂದಾಯಿತು. ಇದಾದ ಮೇಲೆಯೂ ಅವರು ಕಾಂಗ್ರೆಸ್‌ ಜತೆಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಈಗಾಗಲೇ ಅವರೆಲ್ಲರೂ ಕಾಂಗ್ರೆಸ್‌ ತೆಕ್ಕೆಯಲ್ಲಿಯೇ ಇದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿದಿಂದಲೇ ಅಖಾಡಕ್ಕೆ ಇಳಿಯುತ್ತಾರೆ ಎನ್ನುವ ಸಂಗತಿ ಈಗ ಗುಟ್ಟಾಗಿ ಉಳಿದಿಲ್ಲ. ಈ ಮಾತುಕತೆಯೂ ಸಹ ಆಗಿದೆ ಎನ್ನಲಾಗುತ್ತಿದ್ದು, ಈ ವಿಷಯದಲ್ಲಿ ಕಾಂಗ್ರೆಸ್‌ ಸಹ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಿದೆ.

ಬಿಜೆಪಿ ಸದಸ್ಯರ ನಡೆ

ಕಾಂಗ್ರೆಸ್‌ ತೆಕ್ಕೆಯಲ್ಲಿರುವ ಬಿಜೆಪಿ ಸದಸ್ಯರು ಪಕ್ಷಾಂತರ ಕಾಯ್ದೆಯ ಸಮಸ್ಯೆ ಎದುರಿಸಬೇಕಾಗಿದ್ದರೂ ಇದಕ್ಕೆ ಬಿಜೆಪಿ ನಾಯಕರು ಮನಸ್ಸು ಮಾಡಿದಂತೆ ಕಾಣುತ್ತಿಲ್ಲ. ಅಲ್ಲದೆ ಹೋದವರು ಹೋಗಲಿ ಬಿಡಿ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದರೂ ಬಿಜೆಪಿ ಪಾಳಯದಿಂದಲೂ ಇದಕ್ಕೆ ಸಾಥ್‌ ಸಿಕ್ಕಿದೆ ಎನ್ನಲಾಗಿದೆ. ಕಾಂಗ್ರೆಸ್‌ನ ವಿಶ್ವನಾಥ ರೆಡ್ಡಿ ಅವರಿಗೆ ಪಾಠ ಕಲಿಸುವುದಕ್ಕಾಗಿಯೇ ಇವರೆಲ್ಲರೂ ಬಿಜೆಪಿಯಲ್ಲಿದ್ದರೂ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ ಎನ್ನಲಾಗುತ್ತಿದೆ.
ಈಗಿರುವ ಮಾಹಿತಿಯ ಪ್ರಕಾರ ಕಾಂಗ್ರೆಸ್‌ಗೆ ಬೆಂಬಲ ನೀಡಿರುವ ಜಿಪಂ ಸದಸ್ಯರು ಮೇಲ್ನೋಟಕ್ಕಷ್ಟೇ, ವಾಸ್ತವವಾಗಿ ಕಾಂಗ್ರೆಸ್‌ ಸೇರಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿ ಇದ್ದರು. ಆದರೆ, ಇದನ್ನು ತಳ್ಳಿ ಹಾಕಿರುವ ಕಾಂಗ್ರೆಸ್‌ ನಾಯಕರು, ಅವರು ಈಗಾಗಲೇ ಕಾಂಗ್ರೆಸ್‌ ಸೇರಿದ್ದು, ಅಧಿಕೃತ ಪ್ರಕ್ರಿಯೆ ನಡೆಯಬೇಕಾಗಿದೆ ಎನ್ನುತ್ತಾರೆ. ಕಾನೂನು ತೊಡಕು ಉಂಟಾಗಬಹುದಾಗಿರುವುದರಿಂದ ಜಿಪಂ ಅವಧಿ ಮುಗಿಯುತ್ತಿದ್ದಂತೆ ಅವರೆಲ್ಲರೂ ಕಾಂಗ್ರೆಸ್‌ ಸೇರ್ಪಡೆಯಾಗುತ್ತಾರೆ.

ಬಿಜೆಪಿ ಮೌನ, ಕಾಂಗ್ರೆಸ್‌ ಚೆಲ್ಲಾಟ: ಅಧಿಕಾರದಲ್ಲಿದ್ದರೂ ಕಮಲ ನಾಯಕರ ನಡೆ ಮಾತ್ರ ನಿಗೂಢ..!

ಹಿಂದೆ ಸರಿದಿದ್ದು ಯಾಕೆ?

ಕಾಂಗ್ರೆಸ್‌ನಲ್ಲಿನ ಒಳಒಪ್ಪಂದದಂತೆ ಸದಸ್ಯ ಅಮರೇಶ ಗೋನಾಳ ಅವರು ಅಧ್ಯಕ್ಷರಾಗಬೇಕಾಗಿತ್ತು. ಆದರೆ, ಅವರು ಸ್ವಯಂಪ್ರೇರಣೆಯಿಂದ ಹಿಂದೆ ಸರಿದಿದ್ದರಿಂದ ಸದಸ್ಯರೆಲ್ಲರೂ ಒಗ್ಗೂಡಿಯೇ ಸದಸ್ಯ ರಾಜಶೇಖರ ಹಿಟ್ನಾಳ ಅವರನ್ನು ಒಮ್ಮತದಿಂದ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಇದು ಹಾಗೆ ಆಗಿಯೇ ಇಲ್ಲ. ಇದರ ಹಿಂದೆ ಕುದುರೆ ವ್ಯಾಪಾರ ನಡೆದಿರುವುದು ಪಕ್ಕಾ. ಹೀಗಾಗಿ, ಅಮರೇಶ ಗೋನಾಳ ಅವರು ಹಿಂದೆ ಸರಿದಿದ್ದು ಮತ್ತು ರಾಜಶೇಖರ ಹಿಟ್ನಾಳ ಅವರು ಅಖಾಡಕ್ಕೆ ಇಳಿದಿದ್ದು ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಈ ಹಿಂದೆ ರಾಜಶೇಖರ ಹಿಟ್ನಾಳ ಅವರ ಅಧ್ಯಕ್ಷ ಸ್ಥಾನದ ಅವಧಿ (ಆಂತರಿಕ ಒಪ್ಪಂದದಂತೆ) ಮುಗಿದಿದ್ದು, ಸದಸ್ಯ ಎಸ್‌.ಬಿ. ನಾಗರಳ್ಳಿ ಅಧ್ಯಕ್ಷರಾಗಬೇಕಾಗಿತ್ತು. ಆದರೆ, ಆಗಲೂ ರಾಜಶೇಖರ ಹಿಟ್ನಾಳ ಅವರು ಮುಂದುವರಿಯುವ ಕಸರತ್ತು ನಡೆಸಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಇವರು ರಾಜೀನಾಮೆ ನೀಡಿದರು. ಆಗ ಹಠಕ್ಕೆ ಬಿದ್ದು, ರಾಜಶೇಖರ ಹಿಟ್ನಾಳ ಅವರ ರಾಜೀನಾಮೆ ಕೊಡಿಸಲಾಗಿತ್ತು. ಆದರೆ, ಈ ಬಾರಿ ನಡೆದ ಬೆಳವಣಿಗೆಯಲ್ಲಿ ಸದಸ್ಯರೇ ಕಾಂಗ್ರೆಸ್‌ ನಾಯಕರ ಹೈಕಮಾಂಡ್‌ ಮುಂದೆ ವಿಷಯ ಪ್ರಸ್ತಾಪ ಮಾಡಿ, ರಾಜಶೇಖರ ಹಿಟ್ನಾಳ ಆಯ್ಕೆಗೆ ಒಲವು ತೋರಿದರು. ಇದರಿಂದ ಕಾಂಗ್ರೆಸ್‌ ನಾಯಕರಿಗೆ ಸಮಸ್ಯೆಯಾಗದೆ ಸುಸೂತ್ರವಾಗಿ ಎಲ್ಲವೂ ಸಾಗಿದವು.

ಬಿಜೆಪಿ ಸದಸ್ಯರು ಕಾಂಗ್ರೆಸ್‌ ಸೇರುವ ಕುರಿತು ಇನ್ನು ಫೈನಲ್‌ ಆಗಿಲ್ಲ. ಈ ಬಗ್ಗೆ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದ್ದಾರೆ.

ಬಿಜೆಪಿ ಸದಸ್ಯರು ನಮಗೆ ಬೆಂಬಲ ನೀಡಿದ್ದಾರೆ. ನಮ್ಮ ಪಕ್ಷದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಾಡಲು ಹಾಗೂ ನಮ್ಮ ಪಕ್ಷದವರನ್ನೇ ಅಧ್ಯಕ್ಷರನ್ನು ಮಾಡಲು ಅವರು ಸಾಥ್‌ ನೀಡಿದ್ದಾರೆ. ಅವರು ಪಕ್ಷ ಸೇರುವ ಕುರಿತು ಯಾವುದೇ ಚರ್ಚೆಯಾಗಿಲ್ಲ ಎಂದು ಕೊಪ್ಪಳ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದ್ದಾರೆ. 
 

click me!