ದುರ್ಬಳಕೆಯಾದ ಬಿಪಿಎಲ್ ಕಾರ್ಡ್ ಮರಳಿಸಿ| ಕಾರ್ಡ್ ಮರಳಿಸದಿದ್ದರೆ ದಂಡ ಭರಣಾ ಮಾಡಬೇಕಾಗುತ್ತದೆ: ತಹಸೀಲ್ದಾರ್ ಖಡಕ್ ಎಚ್ಚರಿಕೆ| ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಅರ್ಹ ಇರುವ ಫಲಾನುಭವಿಗಳ ಕಾರ್ಡ್ ಗುರುತಿಸುವ ಕಾರ್ಯ ನಡೆಯುತ್ತಿದೆ|
ಬೀಳಗಿ(ಮಾ.05): ಈಗಾಗಲೇ ಲೋಕ ಅದಾಲತ್ ಮೂಲಕ ನೈಜ ಫಲಾನುಭವಿಗಳಿಗೆ ಪಿಂಚಣಿ, ವೃದ್ಯಾಪ್ಯ ವೇತನ, ಅಂಗವಿಕಲ, ವಿಧವಾವೇತನ, ರಾಷ್ಟ್ರೀಯು ಕುಟುಂಬ ಯೋಜನೆ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಪ್ರತಿಯೊಂದು ಗ್ರಾಪಂ ಮೂಲಕ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಅರ್ಹ ಇರುವ ಫಲಾನುಭವಿಗಳ ಕಾರ್ಡ್ ಗುರುತಿಸುವ ಕಾರ್ಯ ನಡೆಯುತ್ತಿದೆ. ಬಿಪಿಎಲ್ ಕಾರ್ಡ್ ದುರ್ಬಳಕೆಯಾದ ಮಾಹಿತಿ ಬಂದಿದ್ದು, ಕೂಡಲೇ ಅವುಗಳನ್ನು ಮರಳಿ ನೀಡಬೇಕು. ಇದನ್ನು ತಪ್ಪಿದ್ದಲ್ಲಿ ದಂಡ ಭರಣಾ ಮಾಡಬೇಕಾಗುತ್ತದೆ ಎಂದು ತಹಸೀಲ್ದಾರ್ ಭೀಮಪ್ಪ ಅಜೂರ ಎಚ್ಚರಿಕೆ ನೀಡಿದ್ದಾರೆ.
ತಾಪಂ ಸಭಾಭವನದಲ್ಲಿ ಬುಧವಾರ ತಾಪಂ ಅಧ್ಯಕ್ಷೆ ನೂರಜಹಾನ್ ನದಾಫ ಅಧ್ಯಕ್ಷತೆಯಲ್ಲಿ 22ನೇ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ವೇಳೆ ಮಾತನಾಡಿದ ತಾಪಂ ಇಇಒ ಎಂ.ಕೆ.ತೋದಲಬಾಗಿ, ಬಿಪಿಎಲ್ ಕಾರ್ಡ್ ಪಡೆಯುವ ಫಲಾನುಭವಿಗಳು ಮೂಲ ಹೆಸರು ಮಹಿಳೆಯರಿದ್ದು ಅವರ ಆಸ್ತಿಯ ಮಾಹಿತಿ ದೊರೆಯುವುದಿಲ್ಲ. ಕೆಲವು ಕಡೆ ಪತಿ ಹೆಸರಿನಲ್ಲಿ ಜಮೀನುಗಳು ಹೊಂದಿರುತ್ತಾರೆ. ಇದರಿಂದ ಬಿಪಿಎಲ್ ಕಾರ್ಡ್ ದುರ್ಬಳಿಕೆಯಾಗಲಿದ್ದು. ಅವರ ಕುಟುಂಬಸ್ಥರ ಮಾಹಿತಿ ಪಡೆದು ಬಿಪಿಎಲ್ ಕಾರ್ಡ್ ನೀಡಿದರೆ ಸೂಕ್ತವಾಗಲಿದೆ ಎಂದು ಸಭೆಯ ಗಮನಕ್ಕೆ ತಂದರು.
ಆಯುಷ್ ಇಲಾಖೆ ಡಾ.ಶಿವಾನಂದ ಬ್ಯಾಕೋಡ ಮಾತನಾಡಿ, ಮನ್ನಿಕೇರಿ ಆಯುಷ್ ಆಸ್ಪತ್ರೆ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ 5 ಲಕ್ಷ ಅನುದಾನ ಬಿಡಗಡೆಯಾಗಿದೆ. ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದಾಗ ತಾಪಂ ಸದಸ್ಯ ಶ್ರೀಶೈಲ ಸೂಳಿಕೇರಿ ಮರು ಪ್ರಶ್ನಿಸಿ ತಾಲೂಕು ಪಂಚಾಯತ ಸಭೆಯಲ್ಲಿ ಅನುದಾನ ಮಂಜೂರಾದ ಬಗ್ಗೆ ಗಮನಕ್ಕೆ ತರದೇ ನಿಮ್ಮಿಷ್ಟಕ್ಕೆ ನೀವೇ ಮಾಡಿಕೊಳ್ಳುವುದಾರೆ ತಾಪಂ ಸಭೆಯ ಠರಾವು ಏಕೆ ಬೇಕು ಎಂದು ಹೇಳಿ ಅಲ್ಲಿಯ ಇದ್ದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಾಗ. ಅಧಿಕಾರಿಗಳು ಇದು ನಾವು ಮಾಡಿದ್ದಲ್ಲ ನಮ್ಮ ಮೇಲಿನ ಅಧಿಕಾರಿಗಳು ಮಾಡಿದ್ದಾರೆ ಎಂದು ಹೇಳಿ ಜಾರಿಕೊಂಡರು.
ಈ ವೇಳೆ ತಾಪಂ ಅಧ್ಯಕ್ಷೆ ನೂರಜಹಾನ್ ನದಾಫ್, ಉಪಾಧ್ಯಕ್ಷೆ ಸುನಂದಾ ಪವಾರ, ತಹಸೀಲ್ದಾರ್ ಭೀಮಪ್ಪ ಅಜೂರ, ತಾಪಂ ಇಇಒ ಎಂ.ಕೆ.ತೋದಲಬಾಗಿ, ಜಿಪಂ ಸದಸ್ಯ ಹನಮಂತ ಕಾಖಂಡಕಿ, ಮಗಿಯಪ್ಪ ದೇವನಾಳ, ಕಸ್ತೂರಿ ಲಿಂಗಣ್ಣವರ, ತಾಪಂ ಸದಸ್ಯ ಮಿಥುನ್ ನಾಯಕ, ಡೊಂಗ್ರೆಪ್ಪ ಕುದರಿ, ಸಮಾಜ ಕಲ್ಯಾಣ ಅಧಿಕಾರಿ ಎಚ್.ಎಂ.ಪಾಟೀಲ, ವಿಕಾಶ ರಾಠೋಡ, ವಿಜಯಕುಮಾರ ಚವ್ಹಾಣ, ಲೋಕೋಪಯೋಗಿ ಇಲಾಖೆ ಅಧಿಕಾರಿ ಸುರೇಶ, ಜಿಪಂ ಅಧಿಕಾರಿ ಜಿ.ಎಚ್.ಅರಳಿಕಟ್ಟಿ, ಸಾವಿತ್ರಿ ಹೊಸಮನಿ, ಗೋಪಾಲ ರಜಪೂತ, ದ್ಯಾವಣಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.
ಕೊರೋನಾ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ
ದಿನದಿನಕ್ಕೆ ಕೊರೋನಾ ವೈರಸ್ ಎಲ್ಲೆಡೆ ಹಬ್ಬುತ್ತಿದೆ. ಹೀಗಾಗಿ ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಜಿಪಂ ಸದಸ್ಯ ಹನಮಂತ ಕಾಖಂಡಕಿ ತಿಳಿಸಿದರು. ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಜನರಿಗೆ ಹೊಸದಾಗಿ ಬರುವ ರೋಗ ಮತ್ತು ಅದಕ್ಕಾಗಿ ಮಾಡಬೇಕಾದ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡಬೇಕು ಎಂದು ಪ್ರಸ್ತಾಪ ಮಾಡಿದರು. ಉತ್ತರ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ದಯಾನಂದ ಕರೆಣ್ಣವರ ಈಗಾಗಲೇ ಮೇಲಧಿಕಾರಿಗಳ ಸೂಚನೆಯಂತೆ ಬೀಳಗಿಯ ಸರ್ಕಾರಿ ಆರೋಗ್ಯ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ಪರೀಕ್ಷೆಗಾಗಿ 5 ಬೆಡ್‌ಗಳ ವ್ಯವಸ್ಥೆ ಮತ್ತು ಪ್ರಾಥಮಿಕ ಕೇಂದ್ರಗಳಲ್ಲಿ 2 ಬೆಡ್‌ಗಳಂತೆ ಪ್ರಥಮ ಚಿಕಿತ್ಯೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.