
ಬೆಂಗಳೂರು: 2027 ಮಾರ್ಚ್ ವೇಳೆಗೆ ಮೆಟ್ರೋ ಪಿಂಕ್ ಲೈನ್ ಮಾರ್ಗ ಉದ್ಘಾಟನೆಗೆ ಸಿದ್ಧಗೊಂಡು, ಜನರ ಸೇವೆಗೆ ಲಭ್ಯವಾಗಲಿದೆ. ಎಂಜಿ ರೋಡ್‌ನಿಂದ ಶಿವಾಜಿ ನಗರಕ್ಕೆ ತೆರಳುವ ಸುರಂಗ ಮಾರ್ಗದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ, ಸಚಿವ ರಿಜ್ವಾನ್ ಅರ್ಷದ್, ಸಂಸದ ಪಿಸಿ ಮೋಹನ್ ಸಾಥ್ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಎಂಜಿ ರೋಡ್ ನಿಂದ ಶಿವಾಜಿನಗರ ಮೆಟ್ರೋ ಸ್ಟೇಷನ್ ವರೆಗೆ ನಡೆದುಕೊಂಡು ಬಂದ ಸಚಿವರು, ಮೆಟ್ರೋ ಕಾಮಗಾರಿ ವೀಕ್ಷಣೆ ಮಾಡಿದರು. ಆ ಬಳಿಕ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ, ಒಟ್ಟು 21 ಕಿಲೋ ಮೀಟರ್ ಉದ್ದದ ಪಿಂಕ್ ಲೈನ್ ಮಾರ್ಗ ಇದಾಗಿದೆ. ಇದರಲ್ಲಿ ಎರಡು ಪೋರ್ಷನ್ ಇದೆ, ಎಲಿವೇಟೆಡ್ ಮತ್ತು ಅಂಡರ್ ಗ್ರೌಂಡ್. ತಾವರೆಕೆರೆಯಿಂದ ಕಾಲೇನ ಅಗ್ರಹಾರ ವರೆಗಿನ ಎಲಿವೇಟೆಡ್ ಮಾರ್ಗ ಸಿದ್ದ ಆಗಿದೆ, ಅದು 7.5 ಕಿಲೋ ಮೀಟರ್. ರೈಲ್ವೆ ಅವರಿಂದ ಅಂತಿಮ ಪ್ರಮಾಣಪತ್ರ ಬರಬೇಕು, ಇನ್ನೊಂದು ವಾರ-ಹತ್ತು ದಿನದಲ್ಲಿ ಬರಬಹುದು. ಅದು ಬಂದು ಬಿಟ್ಟರೆ ಎಲಿವೇಟೆಡ್ ಮಾರ್ಗದ ಎಲ್ಲಾ ಕೆಲಸಗಳು ಪೂರ್ತಿ ಆಗುತ್ತವೆ. ಆಗಸ್ಟ್ ಅಥವ ಸೆಪ್ಟೆಂಬರ್ ತಿಂಗಳಲ್ಲಿ ಉದ್ಘಾಟನೆ ಮಾಡುವ ಹಂತಕ್ಕೆ ಬಂದಿದೆ ಎಂದು ಹೇಳಿದರು.
ಆದರೆ, ಅಂಡರ್ ಗ್ರೌಂಡ್ ಪೋರ್ಷನ್ ನಲ್ಲಿ ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಇವೆ. ಇದು ಮುಂದಿನ ವರ್ಷ ಮಾರ್ಚ್ ವೇಳೆಗೆ ಆಗಬೇಕು ಅಂತ ಡೆಡ್ ಲೈನ್ ಇದೆ. ಜಯದೇವ ಹತ್ತಿರ ಎಂಜಿನ್ ಇಳಿಸಿ ಟ್ರಯಲ್ ರನ್ ಆರಂಭ ಮಾಡಿ ಅಂತ ಸೂಚನೆ ಕೊಟ್ಟಿದ್ದೇನೆ. ಸೆಪ್ಟೆಂಬರ್ ನಲ್ಲಿ ಪಿಂಕ್ ಲೈನ್ ಮಾರ್ಗದ ಎಲಿವೇಟೆಡ್ ಮಾರ್ಗ ಉದ್ಘಾಟನೆಗೆ ಸಿದ್ದ ಇದೆ. ಸಿಎಂ ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಸಮಯ ನಿಗದಿ ಮಾಡಬೇಕಿದೆ. ಅಂಡರ್ ಗ್ರೌಂಡ್ ಪೋರ್ಷನ್ ಮಾರ್ಚ್ ವರೆಗೂ ಕಾಮಗಾರಿ ನಡೆಯುತ್ತೆ. ಅಂಡರ್ ಗ್ರೌಂಡ್ ಪೋರ್ಷನ್ ಮುಗಿದಿಲ್ಲ ಅಂತ ಎಲಿವೇಟೆಡ್ ನಿಲ್ಲಿಸೋಕೆ ಆಗಲ್ಲ. ಬನ್ನೇರುಘಟ್ಟ ರಸ್ತೆಯಿಂದ ಜಯದೇವ, MG ರಸ್ತೆ ಮೂಲಕ ನಾಗವಾರಕ್ಕೆ ಸಂಪರ್ಕ ಕಲ್ಪಿಸುತ್ತೆ. ಬೆಂಗಳೂರಿನ ಹೃದಯ ಭಾಗದ ಮೂಲಕ ಪಿಂಕ್ ಲೈನ್ ಹಾದು ಹೋಗುತ್ತೆ, ಇದೇ ಲೈನ್ ಮುಂದೆ ಏರ್ಪೋರ್ಟ್ ಮಾರ್ಗಕ್ಕೂ ಕನೆಕ್ಟ್ ಆಗುತ್ತೆ ಎಂದು ಹೇಳಿದರು.
ಉಳಿದಂತೆ ನಾಗವಾರದಲ್ಲಿ ಟ್ರೈನ್ ಚೇಂಜ್ ಮಾಡಿದರೆ ಹೆಬ್ಬಾಳ ಮೂಲಕ ಏರ್ಪೋರ್ಟ್ ತಲುಪಬಹುದು. ಹೀಗಾಗಿ ಸಂಪೂರ್ಣವಾಗಿ ಈ ಮಾರ್ಗ ಉದ್ಘಾಟನೆ ಆಗಬೇಕು ಅನ್ನೋದು ನಮ್ಮ ಇಚ್ಚೆ. ಒಟ್ಟು 12 ಸಾವಿರ ಕೋಟಿ ರೂಪಾಯಿ ಈ ಯೋಜನೆಗೆ ಖರ್ಚು ಆಗ್ತಾ ಇದೆ. ಎಲ್ಲಾ ತನ್ನ ಪಾಲಿನ ಹಣವನ್ನು ನಮ್ಮ ಸರ್ಕಾರ ಒದಗಿಸಿ ಕೊಟ್ಟಿದೆ. ನಿಗದಿತ ಕಾಲಮಿತಿಯಲ್ಲಿ ಯೋಜನೆ ಆಗದೆ, ವಿಳಂಬ ಆಯ್ತು. ಕೋವಿಡ್ ಬಂತು, 1.5 ವರ್ಷಗಳ ಕಾಲ ವಿಳಂಬ ಆಯ್ತು. ಆದರೂ ಬಳಿಕ ಮತ್ತೆ ವಿಳಂಬ ಆಗದೆ ಒಂದು ಪೋರ್ಷನ್ ಸೆಪ್ಟೆಂಬರ್ ಗೆ ಸಿದ್ಧವಾಗಿದೆ. ಕೆಲವು ಸವಾಲುಗಳ ನಡುವೆಯೂ ನಮ್ಮ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಮೆಟ್ರೋ ಅಧಿಕಾರಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಜನರಿಗೆ ಇದನ್ನು ಸಮರ್ಪಣೆ ಮಾಡಿದಾಗ ಮಾತ್ರ ಕೆಲಸ ಸಾರ್ಥಕ ಆಗುತ್ತೆ ಅಂತ ತಿಳಿಸಿದರು.
From MG Road to Shivajinagar - walked through the Pink Line tunnel with Minister Shri Rizwan Arshad to inspect progress on Bengaluru’s next big leap in connectivity.#BengaluruMetro#MetroConnectivity pic.twitter.com/pqRBHBpp2t
— Krishna Byre Gowda (@krishnabgowda) August 22, 2026
ಏರ್ಪೋರ್ಟ್ ಮಾರ್ಗದ ಬಗ್ಗೆ ಸಚಿವರು ಪ್ರತಿಕ್ರಿಯೆ ನೀಡಿ, ಏರ್ಪೋರ್ಟ್ ಲೈನ್ ಅಂದರೆ ಅದು 2A ಮತ್ತು 2B ಆಗಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೃಷ್ಣರಾಜಪುರಕ್ಕೆ ಬಂದು ನಾಗವಾರ-ಹೆಬ್ಬಾಳ ಮೂಲಕ ಏರ್ಪೋರ್ಟ್ ಹೋಗುತ್ತದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೆಆರ್‌ಪುರಕ್ಕೆ ಕೆಲಸ ಅಡ್ವಾನ್ಸ್ ಸ್ಟೇಜ್ ನಲ್ಲಿ ಇದೆ. ಕೆಆರ್ ಪುರದಿಂದ ಇಬ್ಬಲೂರು ಸ್ಟೇಷನ್ ಗೆ ಅಕ್ಟೋಬರ್ ನಲ್ಲಿ ಟ್ರಯಲ್ ಮಾಡಲು ಹೇಳಿದ್ದೇನೆ. ಇಬ್ಬಲೂರಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ ಡಿಸೆಂಬರ್ ಅಥವಾ ಜನವರಿಯಲ್ಲಿ ಟ್ರಯಲ್ ರನ್ ಮಾಡಲು ಹೇಳಿದ್ದೇನೆ. ಕೆಆರ್ ಪುರದಿಂದ ನಾಗವಾರ ಮುಂದಿನ ವರ್ಷದ ಮಧ್ಯದ ವೇಳೆಗೆ ಎಲ್ಲಾ ಸಿದ್ಧ ಆಗುತ್ತೆ ಎಂದರು.
ನಾಗವಾರದಿಂದ ಹೆಬ್ಬಾಳ ವರೆಗೆ ಸ್ವಲ್ಪ ಸಮಸ್ಯೆಗಳಿದೆ. ಔಟರ್ ರಿಂಗ್ ರಸ್ತೆ ಇರುವುದರಿಂದ ಹಲವು ಸವಾಲುಗಳು ಇವೆ. ಅಲ್ಲಿ ಎಲಿವೇಟೆಡ್ ನಲ್ಲೇ ಎರಡು ಸೆಪೆರೆಟ್ ಟ್ರ್ಯಾಕ್ ಬರ್ತಾ ಇದೆ. ಭವಿಷ್ಯದಲ್ಲಿ ಅಂದರೆ 5 ವರ್ಷ ಆದ ಮೇಲೆ ಅಲ್ಲಿ ಆರೆಂಜ್ ಲೈನ್ ಬರುತ್ತೆ. ಅದಕ್ಕೂ ಕೂಡ ಈಗಲೇ ಟ್ರ್ಯಾಕ್ ಆಗಬೇಕಾಗುತ್ತೆ, ಮತ್ತೆ ಮತ್ತೆ ಕಾಮಗಾರಿ ಮಾಡೋಕೆ ಆಗಲ್ಲ. ಕೆಂಪಾಪುರದಿಂದ ಹೆಬ್ಬಾಳ ವರೆಗೆ ಒಟ್ಟು ನಾಲ್ಕು ಟ್ರ್ಯಾಕ್ ಬರುತ್ತೆ. ಎಲ್ಲ ಮಾರ್ಗಗಳು ಇಲ್ಲಿ ಮರ್ಜ್ ಆಗುತ್ತೆ, ಸ್ಪ್ಲಿಟ್ ಆಗುತ್ತೆ, ಇಂಟರ್ ಚೇಂಜ್ ಕೂಡ ಮಾಡಿಕೊಳ್ಳಬಹುದು. ಇವೆಲ್ಲ ಸವಾಲು ಇರುವುದರಿಂದ ಕೆಂಪಾಪುರ ದಿಂದ ಹೆಬ್ಬಾಳ ವಿಳಂಬ ಆಗುತ್ತೆ. ಹೆಬ್ಬಾಳದಿಂದ ಏರ್ಪೋರ್ಟ್ ವರೆಗಿನ ಲೈನ್ ಮುಂದಿನ ವರ್ಷ ಸೆಪ್ಟೆಂಬರ್ ಅಕ್ಟೋಬರ್ ವೇಳೆಗೆ ಕಾರ್ಯಾಚರಣೆ ಆಗಬಹುದು. 2027 ಡಿಸೆಂಬರ್ ಅಥವಾ 2028 ಮಾರ್ಚ್ ವೇಳೆಗೆ ಈ ಎಲ್ಲಾ ಮಾರ್ಗಗಳು ಪೂರ್ತಿ ಆಗುತ್ತೆ ಎಂಬ ಭರವಸೆ ನೀಡಿದರು.
ಯಲ್ಲೋ ಲೈನ್ ವಿಸ್ತರಣೆ ವಿಚಾರವಾಗಿ ಸ್ಪಷ್ಟನೆ ನೀಡಿದ ಸಚಿವರು, ಬೊಮ್ಮಸಂದ್ರ ದಿಂದ ಅತ್ತಿಬೆಲೆಗೆ ವಿಸ್ತರಣೆ ವಿಚಾರವಾಗಿ ಯಾವುದೋ ರಾಜ್ಯದವರು ಹೇಳಿದರೆ ಅದಕ್ಕೆ ನಾವು ಉತ್ತರ ಕೊಡಲ್ಲ. ಅವರು ಹೇಳಿದ್ದಕ್ಕೆ ಅವರೇ ಪ್ರತಿಕ್ರಿಯೆ ಕೊಡಬೇಕು, ನಾನು ಹೇಳಿದ್ದಕ್ಕೆ ಎಲ್ಲಾ ಅವರು ಉತ್ತರ ಕೊಡುತ್ತಾರಾ? ಸದ್ಯಕ್ಕೆ ಅಧ್ಯಯನಕ್ಕೆ ಕೆಲವು ಪೋರ್ಷನ್ ಕೊಟ್ಟಿದ್ದೇವೆ. ಫಿಸೆಬಲಿಟಿ ಬರುತ್ತೆ ಅನ್ನೋದನ್ನ ಸರ್ವೇ ಮಾಡುತ್ತಿದ್ದೇವೆ. ಸರ್ವೇ ರಿಪೋರ್ಟ್ ಬಂದ ಮೇಲೆ ನಾನು ಮಾತಾಡುತ್ತೇನೆ. ಮೆಟ್ರೋ ಅಲ್ಲಿಗೆ ಬೇಕು, ಇಲ್ಲಿಗೆ ಬೇಕು ನಮಗೂ ಬೇಕು ಅಂತ ಸಿಎಂ ಅವರ ಮೇಲೆ ತುಂಬಾ ಒತ್ತಡಗಳು ಇವೆ. ಯಾರು ಯಾವ ಊರು ಅಂತ ಹೆಸರು ಹೇಳಲ್ಲ. ಅವರವರ ಹಕ್ಕು ಅವರು ಕೇಳುತ್ತಿದ್ದಾರೆ, ಅದು ತಪ್ಪು ಅಂತ ಹೇಳಲ್ಲ. ಆದರೆ ಎಲ್ಲದಕ್ಕೂ ಮೆಟ್ರೋ ಒಂದೇ ಪರಿಹಾರ ಅಲ್ಲ. ಮೆಟ್ರೋ ಜೊತೆಗೆ ಸಬ್ ಅರ್ಬನ್, RRTS ರೈಲು ಸಂಪರ್ಕ ಕೂಡ ಆಗಬೇಕು. ಮೆಟ್ರೋಗೂ ಕೂಡ ಸಾಧಕ ಬಾಧಕ, ಖರ್ಚು ವೆಚ್ಚ ಇರುತ್ತೆ ಎಂದು ವಿವರಿಸಿದರು.