Mangalore University: ಕಾಲೇಜು ಕ್ಯಾಂಪಸ್‌ನಲ್ಲಿ 'ಭಾರತ್ ಮಾತಾ ಪೂಜನಾ' ಕಾರ್ಯಕ್ರಮ ನಡೆಸಲು ಮುಂದಾದ ಮಂಗಳೂರು ವಿವಿ ಕಾಲೇಜು ವಿದ್ಯಾರ್ಥಿ ಸಂಘದ ನಡೆ ಭಾರೀ ವಿವಾದಕ್ಕೆ ಕಾರಣವಾಗಿದೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ಆ. 10): ಭಾರತ ಮಾತೆಯ ಕೈಯಲ್ಲಿ ಕೇಸರಿ ಧ್ವಜ ಹಿಡಿದ ಫೋಟೋ ಬಳಸಿ, ಕಾಲೇಜು ಕ್ಯಾಂಪಸ್‌ನಲ್ಲಿ 'ಭಾರತ್ ಮಾತಾ ಪೂಜನಾ' ಕಾರ್ಯಕ್ರಮ ನಡೆಸಲು ಮುಂದಾದ ಮಂಗಳೂರು ವಿವಿ (Mangalore University) ಕಾಲೇಜು ವಿದ್ಯಾರ್ಥಿ ಸಂಘದ ನಡೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಹಿಜಾಬ್ ವಿಚಾರದಲ್ಲಿ ಸುದ್ದಿಯಾಗಿದ್ದ ಕಾಲೇಜು ಇದೀಗ ಮತ್ತೊಂದು ವಿವಾದದ ಮೂಲಕ ಚರ್ಚೆಗೆ ಬಂದಿದೆ. ಮಂಗಳೂರು ವಿವಿ ಕಾಲೇಜಿನ ವಿದ್ಯಾರ್ಥಿ ಸಂಘದ ಈ ನಡೆಯ ವಿರುದ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸೇರಿದಂತೆ ಹಲವು ಸಂಘಟನೆಗಳು ಭಾರೀ ಆಕ್ಷೇಪ ವ್ಯಕ್ತಪಡಿಸಿದ್ದು, ಸಾಮಾಜಿಕ ತಾಣಗಳಲ್ಲೂ ಭಾರೀ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ಈ ಕಾರ್ಯಕ್ರಮದ ವಿರುದ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಕಾರ್ಯಕ್ರಮ ರದ್ದು ಪಡಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರರಿಗೆ ಮನವಿ ಮಾಡಿದೆ. ಭಾರತ ಮಾತೆ ಕೇಸರಿ ಧ್ವಜ ಹಿಡಿದ ಫೋಟೋ ಬಳಸಿದ್ದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿರುವ ಕ್ಯಾಂಪಸ್ ಫ್ರಂಟ್, ಮಂಗಳೂರು ವಿವಿ ಘಟಕ ಕಾಲೇಜಿನಲ್ಲಿ 'ಭಾರತ ಮಾತಾ ಪೂಜನಾ' ಕಾರ್ಯಕ್ರಮ ಆಯೋಜನೆ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದೆ.
ಹಿಬಾಬ್ ವಿವಾದ: ಮಂಗಳೂರು ವಿವಿ ಕಾಲೇಜು 'ಬಾಹ್ಯ ಶಕ್ತಿಗಳು' ಅಂದಿದ್ದು ಯಾರಿಗೆ?
ವಿವಿ ಕಾಲೇಜು ಕಾರ್ಯಕ್ರಮದ ಪೋಸ್ಟರ್‌ನಲ್ಲಿ ಭಾರತ ಮಾತೆ ಕೇಸರಿ ಧ್ವಜ ಹಿಡಿದ ಚಿತ್ರವಿದ್ದು, ಅಗಸ್ಟ್ 11ರಂದು ಕಾಲೇಜಿನ ವಿದ್ಯಾರ್ಥಿ ಸಂಘದಿಂದ ಭಾರತ ಮಾತಾ ಪೂಜನಾ ಕಾರ್ಯಕ್ರಮ ಅಯೋಜನೆ ಮಾಡಲಾಗಿದೆ. ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ಆಯೋಜಿಸಿದ್ದು, ವಿದ್ಯಾರ್ಥಿಗಳ ಮಧ್ಯೆ ಬಿರುಕು ಮೂಡಿಸುವ ಕಾರ್ಯಕ್ರಮ ರದ್ದುಪಡಿಸುವಂತೆ ಆಗ್ರಹ ವ್ಯಕ್ತವಾಗಿದೆ. ಭಾರತ ಮಾತೆಯ ಕೈಯ್ಯಲ್ಲಿ ರಾಷ್ಟ್ರಧ್ವಜದ ಬದಲು ಭಗವಾಧ್ವಜ ಹಿಡಿದಿರುವ ಚಿತ್ರ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದೆ.
'ಪೂಜೆಗೆ ನಮ್ಮ ಅಭ್ಯಂತರ ಇಲ್ಲ, ಆದರೆ ಭಾರತ ಮಾತೆಯಲ್ಲಿ ತ್ರಿವರ್ಣ ಧ್ವಜ ಇರಲಿ': ಮಂಗಳೂರು ವಿವಿ ಕಾಲೇಜಿನಲ್ಲಿ 'ಭಾರತ್ ಮಾತಾ ಪೂಜನ' ಕಾರ್ಯಕ್ರಮ ವಿವಾದ ವಿಚಾರ ಸಂಬಂಧಿಸಿ ಡಿಸಿಗೆ ಮನವಿ ಬಳಿಕ ಕ್ಯಾಂಪಸ್ ಫ್ರಂಟ್ ಜಿಲ್ಲಾಧ್ಯಕ್ಷ ತಾಜುದ್ದೀನ್ ಹೇಳಿಕೆ ನೀಡಿದ್ದಾರೆ. ಭಾರತ ಮಾತೆಯ ಹೆಸರಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮ ಇದು. ಭಾರತ ಮಾತೆಯ ಕೈಯ್ಯಲ್ಲಿ ತ್ರಿವರ್ಣ ಧ್ವಜದ ಬದಲು ಕೇಸರಿ ಧ್ವಜ ಕೊಟ್ಟಿದ್ದಾರೆ. ಭಾರತದ ಭೂಪಟವನ್ನು ಕೂಡ ಬೇರೆ ರೀತಿಯಲ್ಲಿ ಪೋಸ್ಟರ್ ನಲ್ಲಿ ತೋರಿಸಿದ್ದಾರೆ ಎಂದಿದ್ದಾರೆ.
ಮಂಗಳೂರು ವಿವಿ ಕಾಲೇಜಲ್ಲಿ ವಿದ್ಯಾರ್ಥಿಗಳ ಹೊಡೆದಾಟ
ಹಿಂದೆ ಹಿಜಾಬ್ ಧರಿಸಿದ ಕಾರಣಕ್ಕೆ ಇಲ್ಲಿ ಆರು ಹೆಣ್ಣು ಮಕ್ಕಳಿಗೆ ಪ್ರವೇಶ ನಿರಾಕರಿಸಲಾಗಿತ್ತು. ಹೈಕೋರ್ಟ್ ಆದೇಶದಂತೆ ಧಾರ್ಮಿಕ ಚಿಹ್ನೆ ಬಳಸಬಾರದು ಎಂದು ಹೇಳಲಾಗಿತ್ತು. ಆದರೆ ಇದೀಗ ಇದೇ ಕಾಲೇಜಿನಲ್ಲಿ ಒಂದು ಸಮುದಾಯದ ಧಾರ್ಮಿಕ ಆಚರಣೆ ನಡೀತಾ ಇದೆ. ಈ ಬಗ್ಗೆ ಇಲ್ಲಿನ ಪ್ರಾಂಶುಪಾಲರು ಯಾಕೆ ಮಾತನಾಡ್ತಿಲ್ಲ? ಸಮಾನತೆ ಹೆಸರಿನಲ್ಲಿ ವಿದ್ಯಾರ್ಥಿಗಳನ್ನ ಹೊರಹಾಕಿದ ಇವರಿಗೆ ಇದು ಸಮಾನತೆಯಾ? ಒಂದೇ ಧರ್ಮದವರಿಗೆ ಇಲ್ಲಿ ಯಾಕೆ ಅವಕಾಶ ಕೊಡ್ತಾರೆ? ಎಂದು ತಾಜುದ್ದೀನ್ ಪ್ರಶ್ನಿಸಿದ್ದಾರೆ.
ಪೂಜೆಗೆ ನಮ್ಮ ಅಭ್ಯಂತರ ಇಲ್ಲ, ಆದರೆ ಭಾರತ ಮಾತೆಯಲ್ಲಿ ತ್ರಿವರ್ಣ ಧ್ವಜ ಇರಲಿ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆ ತ್ರಿವರ್ಣ ಧ್ವಜ ಇರಲಿ, ಭಗವಾಧ್ವಜ ಯಾಕೆ? ಡಿಸಿಗೆ ಮನವಿ ಕೊಟ್ಟು ಅನುಮತಿ ಕೊಡದಂತೆ ವಿನಂತಿಸಿದ್ದೇವೆ. ಕಾರ್ಯಕ್ರಮ ಕಾಲೇಜು ಕ್ಯಾಂಪಸ್ ನ ಶಿವರಾಮ ಕಾರಂತ ಸಭಾಂಗಣದಲ್ಲಿ ನಡೆಯಲಿದೆ. ಯಾವುದೇ ಕಾರಣಕ್ಕೂ ಒಂದು ಸಮುದಾಯದ ಆಚರಣೆಗೆ ಅವಕಾಶ ಬೇಡ. ಜಿಲ್ಲೆ ಸರಿದಾರಿಗೆ ಬರುವ ಹೊತ್ತಲ್ಲಿ ಇಂಥದ್ದಕ್ಕೆ ಅವಕಾಶ ಯಾಕೆ? ನಾಳೆ ಮತ್ತೊಂದು ಸಮುದಾಯದವರು ಕೇಳಿದ್ರೆ ಸುಮ್ಮನೆ ಶಾಂತಿ ಸುವ್ಯವಸ್ಥೆ ಸಮಸ್ಯೆ ಎಂದು ತಾಜುದ್ದೀನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.