
ಬೆಂಗಳೂರು (ಏ.09): ಬೆಂಗಳೂರಿನ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಯುವಕನ ಆತ್ಮ*ಹತ್ಯೆ ಪ್ರಕರಣ ಈಗ ಇಡೀ ನಗರವನ್ನೇ ರೋಚಕ ತಿರುವು ಪಡೆದುಕೊಂಡಿದೆ. ಪ್ರೀತಿಸಿದ ಯುವತಿ ಮದುವೆಗೆ ಒಪ್ಪದ ಕಾರಣಕ್ಕೆ ಯುವಕ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ, ಮೃತ ಯುವಕ ಬರೆದಿಟ್ಟಿರುವ ಡೆತ್ ನೋಟ್ ಈಗ ಪೊಲೀಸರ ತನಿಖೆಯ ದಿಕ್ಕನ್ನೇ ಬದಲಿಸಿದ್ದು, ಹೊಸ ಹೊಸ ರಹಸ್ಯಗಳು ಹೊರಬರುತ್ತಿವೆ.
ಬೆಂಗಳೂರಿನ ನಿವಾಸಿ ಅಭಿಷೇಕ್ (23) ಎಂಬ ಯುವಕ ಇತ್ತೀಚೆಗೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದ. ಇತ್ತೀಚೆಗಷ್ಟೇ ಬಿ.ಕಾಂ ಪದವಿ ಮುಗಿಸಿದ್ದ ಈತ, ಕಳೆದ ಏಳೆಂಟು ವರ್ಷಗಳಿಂದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದನು. ಇವರಿಬ್ಬರ ಸ್ನೇಹ ಶಾಲಾ ದಿನಗಳಿಂದ ಅಂದರೆ 8ನೇ ತರಗತಿಯಿಂದಲೇ ಶುರುವಾಗಿತ್ತು. ಹರೆಯದ ಈ ಪ್ರೀತಿ ಕಾಲೇಜು ದಿನಗಳವರೆಗೂ ಮುಂದುವರಿದಿತ್ತು. ಇತ್ತೀಚೆಗೆ ಇವರ ಪ್ರೀತಿಯ ವಿಷಯ ಯುವತಿಯ ಮನೆಯವರಿಗೆ ತಿಳಿದಿತ್ತು. ಯುವತಿಯ ಪೋಷಕರು ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಪೋಷಕರ ಒತ್ತಡಕ್ಕೋ ಅಥವಾ ವೈಯಕ್ತಿಕ ಕಾರಣಕ್ಕೋ ಗೊತ್ತಿಲ್ಲ, ಆದರೆ ಕಳೆದ ಕೆಲವು ದಿನಗಳಿಂದ ಯುವತಿ ಅಭಿಷೇಕ್‌ನನ್ನು ಉದ್ದೇಶಪೂರ್ವಕವಾಗಿ ಅವೈಡ್ (Avoid) ಮಾಡಲು ಶುರು ಮಾಡಿದ್ದಳು. ಫೋನ್ ಕರೆಗಳನ್ನು ಸ್ವೀಕರಿಸದೆ ಮತ್ತು ಮಾತನಾಡದೆ ದೂರ ಉಳಿಯಲು ಯತ್ನಿಸಿದ್ದಳು. ಇದರಿಂದ ತೀವ್ರವಾಗಿ ಮನನೊಂದಿದ್ದ ಅಭಿಷೇಕ್, ತನ್ನ ಮನೆಯಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದನು.
ಪೊಲೀಸರು ಅಭಿಷೇಕ್‌ನ ಮೃತದೇಹವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾಗ ಮರಣಪತ್ರ (Death Note) ಪತ್ತೆಯಾಗಿದೆ. ಈ ಡೆತ್ ನೋಟ್ ಈಗ ಪ್ರಕರಣಕ್ಕೆ ದೊಡ್ಡ ತಿರುವು ನೀಡಿದೆ. ಮೃತ ಅಭಿಷೇಕ್ ಅದರಲ್ಲಿ ಬರೆದಿರುವ ವಿಷಯಗಳು ಪೊಲೀಸರನ್ನೇ ದಂಗಾಗಿಸಿವೆ.
'ನಾವಿಬ್ಬರೂ 8ನೇ ತರಗತಿಯಿಂದ ಪ್ರೀತಿಸುತ್ತಿದ್ದೆವು. ಕಾಲೇಜು ಸೇರಿದ ಮೇಲೆ ನಾವಿಬ್ಬರೂ ರಹಸ್ಯವಾಗಿ ಮದುವೆಯಾಗಿದ್ದೆವು' ಎಂದು ಅಭಿಷೇಕ್ ಬರೆದಿದ್ದಾನೆ. ಅಷ್ಟೇ ಅಲ್ಲದೆ, ಡೆತ್ ನೋಟ್‌ನಲ್ಲಿ 'ಮಗುವಿನ' ಬಗ್ಗೆಯೂ ಪ್ರಸ್ತಾಪ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. 'ಕೆಲವು ತಿಂಗಳ ಹಿಂದಷ್ಟೇ ನಮಗೆ ಮದುವೆಯಾಗಿತ್ತು, ಆದರೆ ಈಗ ಅವಳು ಮನೆಯವರ ಮಾತಿಗೆ ಮಣಿದು ನನ್ನನ್ನು ದೂರ ಮಾಡುತ್ತಿದ್ದಾಳೆ' ಎಂಬ ಅರ್ಥದಲ್ಲಿ ಅಭಿಷೇಕ್ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.
ಮದುವೆ ಅಧಿಕೃತತೆ: ಅಭಿಷೇಕ್ ಮತ್ತು ಯುವತಿ ನಿಜವಾಗಿಯೂ ಗುಟ್ಟಾಗಿ ಮದುವೆಯಾಗಿದ್ದರೇ? ಎಲ್ಲಿ ಮದುವೆ ನಡೆದಿತ್ತು? ಎಂಬ ಬಗ್ಗೆ ದಾಖಲೆಗಳಿಲ್ಲ.
ಮಗುವಿನ ರಹಸ್ಯ: ಡೆತ್ ನೋಟ್‌ನಲ್ಲಿ ಉಲ್ಲೇಖಿಸಿರುವ ಮಗುವಿನ ವಿಚಾರ ನಿಜವೇ? ಅಥವಾ ಬೇರೆ ಯಾವುದಾದರೂ ಅರ್ಥವನ್ನು ಹೊಂದಿದೆಯೇ? ಎಂಬುದು ನಿಗೂಢವಾಗಿದೆ.
ಹ್ಯಾಂಡ್ ರೈಟಿಂಗ್ ಪರಿಶೀಲನೆ: ಇದು ಅಭಿಷೇಕ್ ಬರೆದಿರುವ ಡೆತ್ ನೋಟ್ ಹೌದೇ ಅಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಅದನ್ನು ಎಫ್‌ಎಸ್‌ಎಲ್ (FSL) ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.
ಯಲಹಂಕ ನ್ಯೂ ಟೌನ್ ಪೊಲೀಸರು ಈಗ ಅಭಿಷೇಕ್‌ನ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿದ್ದು, ಕಾಲ್ ರೆಕಾರ್ಡ್ಸ್ ಮತ್ತು ವಾಟ್ಸಾಪ್ ಚಾಟ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ಯುವತಿಯನ್ನು ಕೂಡ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಯುವತಿ ಮನೆಯವರ ಬೆದರಿಕೆಯಿಂದ ಅಭಿಷೇಕ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆಯೇ ಅಥವಾ ಮದುವೆಯಾದ ನಂತರ ವಂಚನೆಗೊಳಗಾದ ಭಾವನೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದಾನೆಯೇ ಎಂಬ ಸತ್ಯಾಸತ್ಯತೆ ಹೊರಬರಬೇಕಿದೆ. ಪ್ರಸ್ತುತ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಡೆತ್ ನೋಟ್ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.