ಸೌಪರ್ಣಿಕಾ ನದಿಯಲ್ಲಿ ಮುಳುಗಿ ಬೆಂಗಳೂರಿನ ಮಹಿಳೆ ಸಾವು; ಸಾವಿನ ಸುತ್ತ ಒಂದಿಷ್ಟು ಅನುಮಾನ

Published : Aug 31, 2025, 07:47 AM IST
Woman Death

ಸಾರಾಂಶ

ಬೆಂಗಳೂರಿನ ಮಹಿಳೆಯೊಬ್ಬರು ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ಮೃತಪಟ್ಟಿದ್ದಾರೆ.  ಎರಡು ದಿನಗಳ ಹುಡುಕಾಟದ ನಂತರ ಅವರ ಮೃತದೇಹ ಪತ್ತೆಯಾಗಿದೆ.

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದ ಬೆಂಗಳೂರಿನ ಮಹಿಳೆಯೊಬ್ಬರು ಇಲ್ಲಿನ ಸೌಪರ್ಣಿಕಾ ನದಿಗೆ ಬಿದ್ದು ಮೃತಪಟ್ಟಿದ್ದಾರೆ. ಅವರನ್ನು ಬೆಂಗಳೂರು ತ್ಯಾಗರಾಜನಗರ ನಿವಾಸಿ ಸಿ.ಆರ್.ಗೋವಿಂದರಾಜು-ವಿಮಲಾ ಎಂಬುವರ ಪುತ್ರಿ ವಸುಧಾ ಚಕ್ರವರ್ತಿ (46) ಎಂದು ಗುರುತಿಸಲಾಗಿದೆ. ಆ. 27ರಂದು ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದ ಅವರು ನಂತರ ಕಾಣೆಯಾಗಿದ್ದರು. ಪೊಲೀಸರು ಅಗ್ನಿಶಾಮಕ ದಳ ಮತ್ತು ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ 2 ದಿನ ನದಿಯಲ್ಲಿ ಹುಡುಕಾಡಿದ್ದರು. ಆದರೆ ನದಿಯಲ್ಲಿ ಮಳೆಯ ನೀರು ತುಂಬಿ ಹರಿಯುತ್ತಿದ್ದರಿಂದ ಹುಡುಕಾಟ ಫಲಪ್ರದವಾಗಿರಲಿಲ್ಲ. ಶನಿವಾರ ಮಧ್ಯಾಹ್ನ 3 ಗಂಟೆಗೆ ಕೊಲ್ಲೂರಿನಿಂದ ಸುಮಾರು 3 ಕಿ.ಮೀ. ದೂರದ ಮಾವಿನಕೆರೆ ಎಂಬಲ್ಲಿ ನದಿಯಲ್ಲಿ ಗಿಡಮರಗಳಿಗೆ ಸಿಲುಕಿದ್ದ ಕೊಳೆತ ಶವ ಪತ್ತೆಯಾಗಿದೆ.

ವಸುಧಾ ಚಕ್ರವರ್ತಿ ಅವರಿಗೆ ಚೆನ್ನಾಗಿ ಈಜು ಬರುತ್ತಿದ್ದು, ಅವರು ಈಜುವುದಕ್ಕೆಂದು ನದಿಗೆ ಇಳಿದು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿರಬಹುದೇ ಅಥವಾ ಅವರು ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬುದು ಖಚಿತವಾಗಿಲ್ಲ.

ಮಾನಸಿಕ ರೋಗಿಯಂತೆ ಓಡಾಡ್ತಿದ್ದ!

ಆ.27ರಂದು ವಸುಧಾ ಒಬ್ಬರೇ ಕೊಲ್ಲೂರಿಗೆ ಬಂದಿದ್ದು, ಖಾಸಗಿ ವಸತಿಗೃಹದ ಬಳಿ ಕಾರು ನಿಲ್ಲಿಸಿ, ದೇಗುಲಕ್ಕೆ ತೆರಳಿ ಆಂಜನೇಯ ಗುಡಿಯಲ್ಲಿ ಕೆಲಕಾಲ ಧ್ಯಾನ ಮಾಡಿದ್ದರು. ವಸುಧಾ ಚಕ್ರವರ್ತಿ ಅವರು ದೇವಾಲಯದ ಪ್ರಾಂಗಣದಲ್ಲಿ ಮಾನಸಿಕ ರೋಗಿಯಂತೆ, ಅಸಭ್ಯವಾಗಿ ವರ್ತಿಸಿ, ನಂತರ ನದಿಯತ್ತ ಓಡಿಹೋಗಿದ್ದಾರೆ ಎಂದು ದೇವಾಲಯದ ಕಾವಲುಗಾರರು ತಿಳಿಸಿದ್ದರು. ಆಕೆ ಸೌಪರ್ಣಿಕಾ ನದಿಯಲ್ಲಿ ಇಳಿದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಸ್ಥಳೀಯರ ಮಾಹಿತಿಯಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಆರಂಭಿಸಿದ್ದರು.

ಇದನ್ನೂ ಓದಿ: ದೂತ ಸಮೀರ್ ಯೂಟ್ಯೂಬ್‌ ಆದಾಯವೆಷ್ಟು? 45 ನಿಮಿಷದ ವಿಚಾರಣೆಯಲ್ಲಿ ಏನೆಲ್ಲಾ ಕೇಳಲಾಯ್ತು?

ಒಂಟಿಯಾಗಿ ತೆರಳಿ ಧ್ಯಾನಾಸಕ್ತ!

ಪೊಲೀಸರು ಆಕೆಯ ಕಾರಿನಲ್ಲಿದ್ದ ಮೊಬೈಲ್‌ನಿಂದ ವಿಳಾಸವನ್ನು ಪತ್ತೆ ಮಾಡಿ, ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ವಸುಧಾ ಅವರ ತಾಯಿ ಶುಕ್ರವಾರ ಬಂದು ಕೊಲ್ಲೂರು ಠಾಣೆಗೆ ದೂರು ನೀಡಿದ್ದರು. ವಸುಧಾ ಅವರ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಸುಧಾ ಅನೇಕ ಧಾರ್ಮಿಕ ಕ್ಷೇತ್ರಗಳಿಗೆ ಒಂಟಿಯಾಗಿ ತೆರಳಿ ಧ್ಯಾನಾಸಕ್ತರಾಗುತ್ತಿದ್ದರು. ಈ ಹಿಂದೆಯೂ ಆಕೆ ಕೊಲ್ಲೂರಿಗೆ ಬಂದಿದ್ದಳು ಎಂದು ಆಕೆಯ ಕುಟುಂಬದವರು ತಿಳಿಸಿದ್ದಾರೆ.

ಇದನ್ನೂ ಓದಿ: 29 ವರ್ಷಗಳಿಂದ ಎಂಜಿನ್ ಆಯಿಲ್ ಕುಡಿದು ಬದುಕುವ ಅಯ್ಯಪ್ಪ ಭಕ್ತ! ವೈದ್ಯಲೋಕಕ್ಕೇ ಸವಾಲಾದ ಮೈಸೂರಿನ ವ್ಯಕ್ತಿ ಯಾರು?

PREV
Read more Articles on
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ