ಬೆಂಗಳೂರು ಪ್ರವಾಸಿಗರೇ ಎಚ್ಚರ: ನಂದಿ ಬೆಟ್ಟ, ಬನ್ನೇರುಘಟ್ಟ ಉದ್ಯಾನಕ್ಕೆ ಪ್ರವೇಶ ನಿಷೇಧ

By Sathish Kumar KH  |  First Published May 4, 2023, 4:52 PM IST

ವಿಧಾನಸಭಾ ಚುನಾವಣೆ 2023ರ ಮತದಾನ ದಿನವಾದ ಮೇ 10 ರಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲೂ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.


ಬೆಂಗಳೂರು (ಮೇ 4): ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಮತದಾನ ದಿನವಾದ ಮೇ 10 ರಂದು ಬೆಂಗಳೂರಿನ ನಿವಾಸಿಗಳು ಪ್ರವಾಸಕ್ಕೆ ಹೋಗಬಹುದಾದ ಎಲ್ಲ ಪ್ರವಾಸಿ ತಾಣಗಳನ್ನು ಬಂದ್‌ ಮಾಡಲಾಗುತ್ತಿದೆ. ಈಗಾಗಲೇ ನಂದಿ ಬೆಟ್ಟಕ್ಕೆ ಪ್ರವೇಶ ನಿಷೇಧ ಮಾಡಲಾಗಿದ್ದು, ಈಗ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲೂ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ 10 ರಂದು ಸಾರ್ವತ್ರಿ ಚುನಾವಣೆಯ ಮತದಾನ ನಡೆಯಲಿದೆ. ಬೆಂಗಳೂರಿನ ಹೊರ ವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಮತದಾನ ದಿನದಂದು ರಜೆ ಘೋಷಣೆ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮತದಾನ ಶೇಕಡಾವಾರು ಹೆಚ್ಚಿಸಲು ಮುಂದಾದ ಚುನಾವಣಾ ಆಯೋಗ ಬೆಂಗಳೂರಿನ ಸುತ್ತಲಿನ ಪ್ರದೇಶಗಳಲ್ಲಿ ಇರುವ ಎಲ್ಲ ಪ್ರವಾಸಿ ತಾಣಗಳನ್ನು ಬಂದ್‌ ಮಾಡಲು ಮುಂದಾಗಿದೆ. ಇನ್ನು ಮತದಾನ ದಿನದಂದು ಎಲ್ಲ ಉದ್ಯೋಗಿಗಳು ಹಾಗೂ ಕಾರ್ಖಾನೆಗಳಿಗೆ ರಜೆ ಘೋಷಣೆ ಮಾಡಲಾಗುತ್ತದೆ. 

Latest Videos

undefined

ಮೇ 10 ರಂದು ನಂದಿ ಗಿರಿಧಾಮಕ್ಕೆ ಪ್ರವೇಶ ನಿಷೇಧ

ಮತದಾನ ದಿನ ಪ್ರವಾಸಿ ತಾಣಗಳ ಬಂದ್: ಆದರೆ, ಈ ರಜಾ ದಿನದಂದು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೇ ಬೆಂಗಳೂರಿನ ಸುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರಮಾಣ ಹೆಚ್ಚಾಗಿರುತ್ತಿತ್ತು. ಆದರೆ, ಈ ಬಾರಿ ಕೇಂದ್ರ ಚುನಾವಣಾ ಆಯೋಗವು ಬೆಂಗಳೂರಿನ ಮತದಾನ ಪ್ರಮಾಣವನ್ನು ಹೆಚ್ಚಳ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮತದಾನ ನಡೆಯುವ ದಿನದಂದು ಪ್ರವಾಸಿ ತಾಣಗಳನ್ನು ಬಂದ್‌ ಮಾಡಲಾಗುತ್ತಿದೆ. 

ಸಫಾರಿ, ಮೃಗಾಲಯಗಳೂ ಬಂದ್‌: ಇನ್ನು ಬೆಂಗಳೂರಿನ ಹೊರ ವಲಯದಲ್ಲಿರುವ  ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದ ಮೃಗಾಲಯ, ಸಿಂಹ, ಹುಲಿ, ಕರಡಿ, ಸಸ್ಯಹಾರಿ ಸಫಾರಿಗಳು ಮತ್ತು ಚಿಟ್ಟೆ ಉದ್ಯಾನವನವನ್ನು ಕೂಡ ಬಂದ್‌ ಮಾಡಲಾಗುತ್ತದೆ. ಸಾರ್ವಜನಿಕರು ಬಂದರೂ ಕೂಡ ಅವರಿಗೆ ಯಾವುದೇ ವೀಕ್ಷಣೆಗೆ ಅವಕಾಶ ಇರುವುದಿಲ್ಲ. ಮಂಗಳವಾರ ರಜಾ ದಿನದ ನಂತರ ಎಂದಿನಂತೆ ಪ್ರವಾಸಿಗರಿಗೆ ಉದ್ಯಾನದ ಪ್ರವೇಶ ಮುಕ್ತಗೊಳ್ಳಲಿದೆ. 

ಮೇ 5 ರಂದು ಮಾಂಸ ಮಾರಾಟ ನಿಷೇಧ: ಮೇ 10ಕ್ಕೆ ನಂದಿ ಬೆಟ್ಟಕ್ಕೆ ಪ್ರವೇಶ ನಿಷೇಧ!

ನಂದಿ ಬೆಟ್ಟಕ್ಕೆ ಪ್ರವೇಶ ನಿಷೇಧ: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ಮೇ 10 ರಂದು ಮತದಾನ ನಡೆಯಲಿದೆ. ಈ ವೇಳೆ ಎಲ್ಲ ಮತದಾರರು ಕೂಡ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಾದ ಉದ್ದೇಶದಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮಕ್ಕೆ ಮೇ 10ರಂದು ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ. ಬೆಂಗಳೂರಿನ ನಿವಾಸಿಗಳು ಒಂದು ದಿನ ರಜೆ ಸಿಕ್ಕರೂ ಕೂಡ ಪಕ್ಕದಲ್ಲಿಯೇ ಇರುವ ನಂದಿ ಗಿರಿಧಾಮಕ್ಕೆ ಪ್ರವಾಸಕ್ಕೆ ಹೋಗುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಆದರೆ, ಮತದಾನ ಪ್ರಕ್ರಿಯೆ ದಿನವೂ ಕೂಡ ಜನರು ಮತದಾನದಲ್ಲಿ ಭಾಗವಹಿಸುವುದು ಬಿಟ್ಟು ನಂದಿ ಗಿರಿಧಾಮಕ್ಕೆ ಬರಬಹುದು ಎಂದು ನಿರೀಕ್ಷಿಸಿ, ಮತದಾನದ ದಿನದಂದು ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

click me!