
ಬೆಂಗಳೂನಲ್ಲಿ ಬಾಡಿಗೆದಾರೊಬ್ಬರಿಂದ ಮನೆ ಬಿಡುವಾಗ ಅವರ ₹ 1 ಲಕ್ಷ ಭದ್ರತಾ ಠೇವಣಿಯಲ್ಲಿ 60% ಕ್ಕಿಂತ ಹೆಚ್ಚು ಹಣವನ್ನು ಮನೆಮಾಲೀಕರು ಅನಾವಶ್ಯಕ ಹಾಗೂ ಹೆಚ್ಚಿನ ಶುಲ್ಕಗಳಿಗಾಗಿ ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿದ್ದು, ಸಾಮಾಜಿಕ ಮಾಧ್ಯಮ ವೇದಿಕೆ ರೆಡ್ಡಿಟ್‌ನಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ. ಈ ಶುಲ್ಕಗಳ ಪಟ್ಟಿಯಲ್ಲಿ ಮನೆಗೆ ಮತ್ತೆ ಪೇಯಿಂಟಿಂಗ್ ವೆಚ್ಚ, ದಲ್ಲಾಳಿ ಶುಲ್ಕ, ಮತ್ತು ತುಕ್ಕು ಹಿಡಿದ ಅಡುಗೆಮನೆ ರ್ಯಾಕ್ ಬದಲಾವಣೆ ಸೇರಿದಂತೆ ಹಲವು ಅಂಶಗಳು ಸೇರಿವೆ.
ಕೆ.ಆರ್.ಪುರಂ ಬಳಿಯ ಬಸವನಪುರ ಮುಖ್ಯರಸ್ತೆಯಲ್ಲಿರುವ ಫ್ಲಾಟ್‌ನಲ್ಲಿ ಬಾಡಿಗೆಗೆ ಇದ್ದ ಈ ವ್ಯಕ್ತಿ, ತಿಂಗಳಿಗೆ ₹ 15,000 ಬಾಡಿಗೆ ಪಾವತಿಸುತ್ತಿದ್ದ ಮತ್ತು ₹ 1 ಲಕ್ಷ ಮೊತ್ತವನ್ನು ಮುಂಗಡ ಠೇವಣಿಯಾಗಿ ನೀಡಿದ್ದನು. 12 ತಿಂಗಳ ಕಾಲ ಫ್ಲಾಟ್‌ನಲ್ಲಿ ಉಳಿದು, ಎರಡು ತಿಂಗಳ ನೋಟಿಸ್ ನೀಡಿದ ನಂತರ, ಉದ್ಯೋಗ ವರ್ಗಾವಣೆಯ ಕಾರಣಕ್ಕೆ ಮನೆ ಖಾಲಿ ಮಾಡಿದ್ದಾನೆ. ಆದರೆ ಮನೆ ಮಾಲೀಕರ ಡೆಪಾಸಿಟ್ ಕಡಿತ ನೋಡಿ ಶಾಕ್ ಆಗಿದ್ದಾನೆ.
ಮನೆಮಾಲೀಕರು ₹ 1 ಲಕ್ಷ ಠೇವಣಿಯಿಂದ ಕಡಿತಗೊಳಿಸಿದ ವೆಚ್ಚಗಳ ವಿವರವನ್ನು ಅವರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಮೇ ಮತ್ತು ಜೂನ್ ತಿಂಗಳ ಬಾಡಿಗೆ: ₹ 30,000
ಜುಲೈ ತಿಂಗಳಲ್ಲಿ 20 ದಿನಗಳ ಬಾಡಿಗೆ: ₹ 10,000
ಮತ್ತೆ ಪೈಂಟಿಂಗ್ ಗೆ: ₹ 15,000
ಮನೆ ಶುಚಿಗೊಳಿಸಲು: ₹ 5,200
ದಲ್ಲಾಳಿ ಯೋಜನೆ ಶುಲ್ಕ: ₹ 4,000
ಅಡುಗೆಮನೆ ಸರಿಪಡಿಸಲು (ಲೇಪನ): ₹ 2,500
ಪಾವತಿಸದ ವಿದ್ಯುತ್ ಬಿಲ್ಲಿಗೆ: ₹ 1,000
ಇಷ್ಟು ಮಾತ್ರವಲ್ಲ ಇದಕ್ಕೂ ಹೊರತಾಗಿ “ಅಡುಗೆಮನೆಯ ರ್ಯಾಕ್ ತುಕ್ಕು ಹಿಡಿದಿರುವುದರಿಂದ ಅದನ್ನು ಬದಲಾಯಿಸಲು ಮನೆ ಮಾಲೀಕರ ಪತ್ನಿ ₹ 10,000 ಹೆಚ್ಚುವರಿ ಕೇಳುತ್ತಿದ್ದಾರೆ. ಮತ್ತೆ ಅದೇ ಮನೆಗೆ ಬೇರೆ ಬಾಡಿಗೆದಾರರನ್ನು ಹುಡುಕಲು ದಲ್ಲಾಳಿಯ ಸಹಾಯ ಪಡೆದಿದ್ದಕ್ಕೆ ಅವರು ಬೇರೆ ವೆಚ್ಚವನ್ನು ಹಾಕುತ್ತಿದ್ದಾರೆ,” ಎಂದು ರೆಡ್ಡಿಟ್ ನಲ್ಲಿ ಬಳಕೆದಾರರು ಬರೆದಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಬೇಗನೆ ವ್ಯಾಪಕವಾಗಿ ವೈರಲ್ ಆಗಿದೆ. ಹಲವಾರು ಬಳಕೆದಾರರು ತಮ್ಮದೇ ಆದ ವಿವಿಧ ಅನುಭವವನ್ನು ಹಂಚಿಕೊಂಡಿದ್ದಾರೆ. ಅನೇಕರು ಅಸ್ಪಷ್ಟ ಅಥವಾ ಹೆಚ್ಚು ಉಳಿಸಬೇಕೆಂಬ ಕಾರಣಗಳಿಗಾಗಿ ಮನೆಮಾಲೀಕರು ಠೇವಣಿಯ ಬಹುಪಾಲನ್ನು ತಡೆಹಿಡಿಯುತ್ತಿರುವುದಾಗಿ ದೂರಿದ್ದಾರೆ.
“ಮನೆಗೆ ಪೈಂಟಿಂಗ್ ಶುಲ್ಕ ಹಾಕಿದ ಮೇಲೆ ಮತ್ತೆ ಸ್ವಚ್ಛಗೊಳಿಸಲು ಏಕೆ ಹಣ ಕೊಡಬೇಕು? ಬಣ್ಣ ಹಾಕುತ್ತಿದ್ದರೆ, ಅದು ಸ್ವಚ್ಛವಾಗುತ್ತಲೇ ಇರುತ್ತದೆ ಅಲ್ಲವೇ?” ಇನ್ನು ಅಡುಗೆಮನೆ ರ್ಯಾಕ್ ತುಕ್ಕು ಹಿಡಿಯುವುದನ್ನು ಸಾಮಾನ್ಯ ಸವೆತ ಮತ್ತು ನಷ್ಟ ಎಂದು ಪರಿಗಣಿಸಬೇಕು. ಇದು ಬೇಸಿಕ್ ಪ್ರಜ್ಞೆ. ಅವರು ಉತ್ತಮ ಸಾಮರ್ಥ್ಯದ ಮೆಟಿರಿಯಲ್ ಬಳಕೆ ಮಾಡದೆ ಅಗ್ಗದ ಮೆಟೀರಿಯಲ್ ಬಳಕೆಯಿಂದಾಗಿ ರ್ಯಾಕ್ ತುಕ್ಕು ಹಿಡಿದಿದೆ. ಅದು ಬಾಡಿಗೆದಾರನ ತಪ್ಪಲ್ಲ ಎಂದಿದ್ದಾರೆ.
ನಾನು ರಿಯಲ್ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತೇನೆ. ಈಗ ‘ಅಡುಗೆಮನೆ ಲೇಪನ’ ಎಂದರೆ ಏನೆಂದು ನನಗೆ ತಿಳಿದಿಲ್ಲ ಎಂದಿದ್ದಾರೆ.
ಇನ್ನೊಬ್ಬರು ತಮ್ಮ ಆಕ್ರೋಶ ವ್ಯಕ್ತಪಡಿಸಿ, ದಲ್ಲಾಳಿಗೆ ಶುಲ್ಕ ವಿಧಿಸುತ್ತೀರಾ? ಅದು ಮನೆಮಾಲೀಕರ ವೆಚ್ಚ. ಬಾಡಿಗೆದಾರರ ಹೊಣೆಯಲ್ಲ ಎಂದಿದ್ದಾರೆ.
ಇನ್ನೊಬ್ಬರು , “ಇದಕ್ಕಾಗಿಯೇ ಬಹಳಷ್ಟು ಬಾಡಿಗೆದಾರರು ಈಗ ಗುತ್ತಿಗೆಗೆ ಸಹಿ ಹಾಕುವಾಗ ವಿವರವಾದ ಹಸ್ತಾಂತರ ಪರಿಶೀಲನೆ ಪಟ್ಟಿ (handover checklist) ಒತ್ತಾಯಿಸುತ್ತಿದ್ದಾರೆ. ಏಕೆಂದರೆ ಕೆಲವು ಮನೆಮಾಲೀಕರು ಕೊನೆಗೆ ಅಸಂಬದ್ಧ, ಲೆಕ್ಕವಿಲ್ಲದ ಶುಲ್ಕಗಳನ್ನು ವಿಧಿಸುತ್ತಾರೆ ಎಂದಿದ್ದಾರೆ.
ಕರ್ನಾಟಕದಲ್ಲಿ ಠೇವಣಿ ಕಡಿತಗಳನ್ನು ನಿಯಂತ್ರಿಸುವ ಸ್ಪಷ್ಟ ಬಾಡಿಗೆ ನಿಯಂತ್ರಣ ಕಾನೂನು ಇಲ್ಲದಿದ್ದರೂ, ಬಾಡಿಗೆದಾರರು ನೋಟಿಸ್ ಅವಧಿ ಪೂರೈಸಿ ಆವರಣವನ್ನು ಸಮರ್ಪಕ ಸ್ಥಿತಿಯಲ್ಲಿ ಬಿಟ್ಟುಹೋದರೆ, ಅನಾವಶ್ಯಕ ಕಡಿತಗಳನ್ನು ಕಾನೂನುಬದ್ಧವಾಗಿ ಪ್ರಶ್ನಿಸಬಹುದು ಎಂದು ತಜ್ಞರು ಹೇಳಿದ್ದಾರೆ.
ಕರ್ನಾಟಕ ಹೈಕೋರ್ಟ್‌ನ ವಕೀಲೆ ಪ್ರಿಯಾಂಕಾ ಕ್ವಾತ್ರಾ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಮನೆಮಾಲೀಕರೂ, ಬಾಡಿಗೆದಾರರೂ ಒಪ್ಪಿಕೊಳ್ಳುವ ಹಲವು ಮುಖ್ಯ ಷರತ್ತುಗಳು ಗುತ್ತಿಗೆಯಲ್ಲಿ ಇರುತ್ತವೆ. ಮನೆಮಾಲೀಕರು ಬೃಹತ್ ಠೇವಣಿಗಳನ್ನು ಕೇಳುವುದನ್ನು ನಾನು ನೋಡಿದ್ದೇನೆ. ಮತ್ತು ಬಹಳಷ್ಟು ಸಂದರ್ಭಗಳಲ್ಲಿ, ಕೊನೆಗೆ ಅದನ್ನು ಸಂಪೂರ್ಣವಾಗಿ ಹಿಂತಿರುಗಿಸಲಾಗುವುದಿಲ್ಲ ಎಂದಿದ್ದಾರೆ.
ಮತ್ತೊಬ್ಬ ವಕೀಲರಾದ ಶ್ರೀನಿವಾಸ್ ಜಿ ಬಾಡಿಗೆದಾರರಿಗೆ ಸಲಹೆ ನೀಡಿ, ಬಾಡಿಗೆ ಪ್ರಾರಂಭವಾಗುತ್ತಿದ್ದಂತೆ ಆಸ್ತಿಯ ಫೋಟೋ ಅಥವಾ ವೀಡಿಯೋ evidence ಸಂಗ್ರಹಿಸಿಕೊಳ್ಳುವುದು ಅತ್ಯಂತ ಮುಖ್ಯ. ಮನೆಮಾಲೀಕರು ನಂತರ ಹಾನಿ ಅಥವಾ ದುರಸ್ತಿ ಹೆಸರಿನಲ್ಲಿ ಠೇವಣಿಯಿಂದ ಹಣ ಕಡಿತ ಮಾಡಲು ಯತ್ನಿಸಿದರೆ, ಇವು ಬಾಡಿಗೆದಾರರನ್ನು ರಕ್ಷಿಸಲು ಸಹಾಯ ಮಾಡುತ್ತವೆ ಎಂದಿದ್ದಾರೆ.