
ಬೆಂಗಳೂರು: ಪೂಜೆ ನೆಪದಲ್ಲಿ ಮನೆಗೆ ಬಾಬಾನನ್ನು ಕರೆಸಿ ಅಪಹರಿಸಿ, ಹಣ ಸುಲಿಗೆ ಮಾಡಿದ್ದ ನಾಲ್ವರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ಆರಿಫ್, ಆದಿಲ್, ಚಿಕ್ಕಬಾಣವಾರದ ಇಮ್ರಾನ್, ಆರ್.ಟಿ.ನಗರದ ಖಾದಿರ್ ಬಂಧಿತರು. ಆರೋಪಿಗಳಿಂದ ಹಣ ವಶಪಡಿಸಿಕೊಳ್ಳಲಾಗಿದೆ. ಕೆಲ ದಿನಗಳ ಹಿಂದೆ ತುಮಕೂರಿಗೆ ಪೂಜೆ ನೆಪದಲ್ಲಿ ತಾರಿಕ್ ಹುಸೇನ್ ಎಂಬಾತನನ್ನು ಕರೆಸಿ ಆದಿಲ್ ಹಾಗೂ ಆತನ ಸಹಚರರು ಸುಲಿಗೆ ಮಾಡಿದ್ದರು. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.
ಹಲವು ವರ್ಷಗಳಿಂದ ದೇವರನ್ನು ಓಲೈಸಿಕೊಂಡಿರುವುದಾಗಿ ಹೇಳಿ ಮಾಂತ್ರಿಕನಂತೆ ತಾರೀಕ್ ಓಡಾಡುತ್ತಿದ್ದು, ತಾನು ಮಾಟ ಮಂತ್ರ ಹಾಗೂ ಪೂಜೆಯಿಂದ ಭೂತಪ್ರೇತ ಓಡಿಸುವುದಾಗಿ ಆತ ಹೇಳಿದ್ದ. ಈ ಮಾತು ನಂಬಿ ಆತನನ್ನು ಮನೆಗಳಿಗೆ ಕೆಲವರು ಕರೆದು ಮಾಡಿಸುತ್ತಿದ್ದರು. ಕೆಲ ದಿನಗಳ ಹಿಂದೆ ತನ್ನ ಪತ್ನಿಗೆ ದೆವ್ವ ಹಿಡಿದಿದೆ ಎಂದು ತಾರಿಕ್ ಬಳಿ ನೆರವು ಕೋರಿ ಆದಿಲ್ ಬಂದಿದ್ದ. ಆಗ ಆತನಿಂದ 1.5 ಲಕ್ಷ ರು ಪಡೆದ ತಾರೀಕ್, ವಿಶೇಷ ಪೂಜೆ ಸಲ್ಲಿಸಿ ಪತ್ನಿಗೆ ದೆವ್ವ ಬಿಡಿಸುವುದಾಗಿ ತಿಳಿಸಿದ್ದ. ಆದರೆ ಆದಿಲ್‌ನ ಪತ್ನಿ ಮೇಲೆ ಆತನ ತಂತ್ರ-ಮಂತ್ರ ಪರಿಣಾಮ ಬೀರಲಿಲ್ಲ. ಮನೆಯಲ್ಲಿ ಆಕೆಯ ದುಂಡಾವರ್ತನೆ ಮುಂದುವರಿದಿತ್ತು. ಆಗ ತಾರಿಕ್‌ನನ್ನು ಸಂಪರ್ಕಿಸಿದ ಆದಿಲ್, ನೀವು ಮಾಡಿದ ಪೂಜೆ ಫಲ ಕೊಟ್ಟಿಲ್ಲ. ಸುಳ್ಳು ಹೇಳಿ ಹಣ ವಸೂಲಿ ಮಾಡಿದ್ದೀಯಾ ಎಂದು ಜಗಳವಾಡಿದ್ದ. ಇದಕ್ಕೆ ಆ ಬಾಬಾ ಸಹ ಬೈದಿದ್ದ. ಈ ಬೆಳವಣಿಗೆಯಿಂದ ಕೆರಳಿದ ಆದಿಲ್, ತಾರೀಕ್‌ನಿಂದ ಹಣ ಸುಲಿಗೆ ಸಂಚು ರೂಪಿಸಿದ್ದ. ಈ ಕೃತ್ಯಕ್ಕೆ ಆತನ ಸ್ನೇಹಿತರು ಸಾಥ್ ನೀಡಿದ್ದಾರೆ.
ಅಂತೆಯೇ ತುಮಕೂರು ಸಮೀಪದ ಆರಿಫ್ ಮನೆಗೆ ಪೂಜೆ ನೆಪದಲ್ಲಿ ತಾರೀಕ್‌ನನ್ನು ಆರೋಪಿಗಳು ಆಹ್ವಾನಿಸಿದ್ದರು. ಈ ಕರೆಗೆ ಸಮ್ಮತಿಸಿ ತೆರಳಿದಾಗ ಆತನನ್ನು ಅಪಹರಿಸಿದ ಬಳಿಕ ಬೆದರಿಸಿ 4.5 ಲಕ್ಷ ರು. ಹಣವನ್ನು ಆದಿಲ್ ಹಾಗೂ ಆತನ ಸಹಚರರು ಸುಲಿಗೆ ಮಾಡಿದ್ದರು. ತುಮಕೂರಿನಿಂದ ದಾಬಸ್‌ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರಕ್ಕೆ ಕರೆದೊಯ್ದು ಆನ್‌ಲೈನ್ ಮೂಲಕ ಸಹ ಆರೋಪಿಗಳು ಹಣ ವಸೂಲಿ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.