
ಬೆಂಗಳೂರು: ನಗರದಲ್ಲಿ ಮತ್ತೊಂದು ಕಳವಳಕಾರಿ ಘಟನೆ ಬೆಳಕಿಗೆ ಬಂದಿದೆ. ಡೆಲಿವರಿ ಬಾಯ್ ಒಬ್ಬನು ಯುವತಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾ*ಚಾರಕ್ಕೆ ಯತ್ನಿಸಿದ ಆರೋಪ ಕೇಳಿಬಂದಿದೆ. ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯ ವಿಧಾನ ಸೌಧ ಲೇಔಟ್‌ನಲ್ಲಿ ನಡೆದಿದೆ. ಪೊಲೀಸರ ಮಾಹಿತಿಯಂತೆ, ಯುವತಿ ತನ್ನ ಮನೆಯ ಮುಂದೆ ಬಿದ್ದಿದ್ದ ಬಾಕ್ಸ್ ಅನ್ನು ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲೇ ಆರೋಪಿಯು ಆಕೆಯನ್ನು ಹಿಂಬಾಲಿಸಿದ್ದಾನೆ. ಬಳಿಕ ರಸ್ತೆಯ ಮಧ್ಯೆ ಬಟ್ಟೆ ಬಿಚ್ಚಿಕೊಂಡು ಅಸಭ್ಯವಾಗಿ ವರ್ತಿಸಿ, ಆಕೆಯನ್ನು ಕರೆಯುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೂ ಮೀರಿಸಿ, ಆರೋಪಿಯು ಯುವತಿಯನ್ನು ಹಿಂದಿನಿಂದ ತಬ್ಬಿಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಧೈರ್ಯ ಪ್ರದರ್ಶಿಸಿದ ಯುವತಿ ಜೋರಾಗಿ ಕಿರುಚಾಡಿದ್ದು, ಇದರಿಂದ ಗಾಬರಿಗೊಂಡ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಯುವತಿ ಕಿರುಚಾಡುತ್ತಿದ್ದಂತೆಯೇ ಆರೋಪಿಯು ಅಲ್ಲಿಂದ ಓಡಿ ಹೋಗಿದ್ದಾನೆ. ಆದರೆ ಕೆಲವೇ ಕ್ಷಣಗಳಲ್ಲಿ ಬೈಕ್ ಮೂಲಕ ಮತ್ತೆ ಸ್ಥಳಕ್ಕೆ ಬಂದಿರುವ ಆರೋಪಿ, ಯುವತಿಯೊಂದಿಗೆ ವಾಗ್ವಾದ ನಡೆಸಿದ್ದಾನೆ ಎನ್ನಲಾಗಿದೆ. ಈ ವೇಳೆ ಆರೋಪಿಯು ಯುವತಿಯ ಕೆನ್ನೆಗೆ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಘಟನೆಯಿಂದ ಭೀತಿಗೊಳಗಾದ ಯುವತಿ ತಕ್ಷಣವೇ ಕೊತ್ತನೂರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಲೈಂಗಿಕ ಕಿರುಕುಳ, ದೈಹಿಕ ಹಲ್ಲೆ ಹಾಗೂ ಅತ್ಯಾ*ಚಾರಕ್ಕೆ ಯತ್ನ ಸಂಬಂಧಿತ ಕಲಂ ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಕೊತ್ತನೂರು ಪೊಲೀಸರು, ಆರೋಪಿಯ ಗುರುತು ಪತ್ತೆ ಹಾಗೂ ಬಂಧನಕ್ಕಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುವ ಭರವಸೆ ನೀಡಿದ್ದಾರೆ. ನಗರದಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಮತ್ತೆ ಆತಂಕ ಮೂಡಿಸಿರುವ ಈ ಘಟನೆ, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.