ಬೆಂಗಳೂರಿನ ಜೆ.ಪಿ. ನಗರದಲ್ಲಿ ಚಾಲಕನೊಬ್ಬ ನಾಯಿ ಮೇಲೆ ಕಾರನ್ನು ಹರಿಸಿ ಪರಾರಿಯಾಗಿದ್ದಾನೆ. ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಾಣಿ ಪ್ರಿಯರು ಆರೋಪಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ. ಕಾರಿನ ಚಾಲಕ ನಾಯಿಗೆ ಏನಾಯಿತು ಎಂದು ನೋಡದೆಯೇ ಹೊರಟು ಹೋಗಿರುವುದು ಖಂಡನೀಯ.
ಬೆಂಗಳೂರು (ಜ.09): ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಜೆ.ಪಿ. ನಗರದ ರಸ್ತೆಯೊಂದಲ್ಲಿ ಬೀದಿ ನಾಯಿ ಯಾರಿಗೂ ಸಮಸ್ಯೆ ಆಗದಂತೆ ತನ್ನ ಪಾಡಿಗೆ ತಾನು ಮಲಗಿದೆ. ಆದರೆ, ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ರಸ್ತೆ ಒಂದು ಬದಿಯಲ್ಲಿ ಮಲಗಿದ್ದ ನಾಯಿ ಮೇಲೆ ಕಾರನ್ನು ಹತ್ತಿಸಿ ವಿಕೃತಿ ಮೆರೆದಿದ್ದಾನೆ. ಒಂದು ಬಾರಿ ಜೋರಾಗಿ ಕಿರುಚಿದ ನಾಯಿಯ ಜೀವ ಕ್ಷಣಾರ್ಧದಲ್ಲಿಯೇ ಹಾರಿ ಹೋಗಿದೆ. ಕನಿಷ್ಠ ಮಾನವೀಯತೆಗೂ ಕಾರಿನ ಚಾಲಕ ನಾಯಿಗೆ ಏನಾಯಿತು ಎಂದು ಬಂದು ನೋಡದೇ ಹೊರಟು ಹೋಗಿದ್ದಾರೆ.
ಮನುಷ್ಯನಿಗಿಂತ ಮಾತ್ರವಲ್ಲ, ಇಡೀ ಜೀವರಾಶಿಗಳಲ್ಲಿ ನಿಯತ್ತಿಗೆ ಹೆಸರುವಾಸಿ ಆಗಿರುವ ಮೂಕ ಪ್ರಾಣಿ ನಾಯಿಯ ಮೇಲೆ ಅಮಾನವೀಯ ಕೃತ್ಯ ನಡೆದಿರುವ ಘಟನೆ ಜೆ.ಪಿ.ನಗರದ 8ನೇ ಹಂತ ಶೇಖರ್ ನಗರದಲ್ಲಿ ನಡೆದಿದೆ. ಕೆಂಪು ಬಣ್ಣದ ಥಾರ್ ಕಾರನ್ನು (ಸಂಖ್ಯೆ KA 02 MS 2781) ನಾಯಿಯ ಮೇಲೆ ಸುಖಾ ಸುಮ್ಮನೇ ಹರಿಸಿ ಕೊಲೆ ಮಾಡಲಾಗಿದೆ. ಇನ್ನು ಈ ವಿಡಿಯೋ ನೋಡಿದರೆ ಉದ್ದೇಶಪೂರ್ವಕವಾಗಿಯೇ ಕಾರಿನ ಮಾಲೀಕ ಈ ಕೃತ್ಯವನ್ನು ಎಸಗಿದ್ದಾನೆ ಎಂದು ಪ್ರಾಣಿ ಪ್ರಿಯರು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಆಟೋ ಕಿರಿಕ್; ಸಾಯಿಸಿಬಿಡ್ತೀನಿ ಎಂದ ಚಾಲಕ, ಬೆದರಿದ ಪ್ರಯಾಣಿಕ!
ಜೆಪಿ ನಗರದ ರಸ್ತೆಯಲ್ಲಿ ಬೆಳಗ್ಗೆ ವೇಳೆ ತನ್ನ ಪಾಡಿಗೆ ರಸ್ತೆಯ ಮೇಲೆ ಬಿದ್ದ ಮರದ ನೆರಳಿನಲ್ಲಿ ನಾಯಿ ಮಲಗಿದೆ. ಈ ನಾಯಿ ರಸ್ತೆಯ ಒಂದು ಬದಿಯಲ್ಲಿ ಮಲಗಿದ್ದು, ಸ್ಪಷ್ಟವಾಗಿ ಎಲ್ಲರಿಗೂ ಕಾಣಿಸುತ್ತದೆ. ಆದರೆ, ಕಾರನ್ನು ಚಲಾಯಿಸಿಕೊಂಡು ಬಂದ ವ್ಯಕ್ತಿ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದವನು ನಾಯಿ ಇನ್ನೊಂದು ಬದಿಯಲ್ಲಿ ಮಲಗಿದ್ದನ್ನು ನೋಡಿ, ಸ್ವಲ್ಲ ನಿಧಾನವಾಗಿ ಬಂದು ನಾಯಿಯ ಮೇಲೆ ಹತ್ತಿಸಿದ್ದಾನೆ. ಆಗ ನಾಯಿ ಒಮ್ಮೆಲೇ ಜೋರಾಗಿ ಕಿರುಚಿದೆ. ಕಾರು ಹತ್ತಿ ಇಳಿದ ಬಳಿಕ ನಾಯಿ ಒದ್ದಾಡಿ, ಬಾಲ ಅಲ್ಲಾಡಿಸುತ್ತಲೇ ತನ್ನ ಜೀವವನ್ನು ಬಿಟ್ಟಿದೆ.
ಈ ವಿಡಿಯೋ ನಾಯಿ ಹರಿಸಿದ ಮನೆಯ ಮುಂದಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಸ್ಥಳೀಯ ಪ್ರಾಣಿ ಪ್ರಿಯರಿಗೆ ಹಂಚಿಕೊಂಡಿದ್ದು, ನಾಯಿ ಮೇಲೆ ಕಾರು ಹತ್ತಿಸಿದವನಿಗೆ ಸರಿಯಾಗಿ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಕಣ್ತಪ್ಪಿನಿಂದ ಕಾರು ಹರಿದಿದ್ದರೂ, ಕಾರಿನ ಚಾಲಕ ಬಂದು ನಾಯಿಗೆ ಏನಾಗಿದೆ ಎಂಬುದನ್ನಾದರೂ ನೋಡಬೇಕಿತ್ತು. ಆದರೆ, ಇಲ್ಲಿ ಬೇಕಂತಲೇ ಕಾರನ್ನು ಹರಿಸಿ, ಶ್ವಾನದ ಕಡೆಗೆ ತಿರುಗಿಯೂ ನೋಡದೇ ಹೋಗಿದ್ದಾರೆ. ಈ ವಿಡಿಯೋ ನೋಡಿದ ಪ್ರಾಣಿಪ್ರಿಯರು ಕಾರಿನ ಮಾನವೀಯತೆ ಸತ್ತೇ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಿಎಂಟಿಸಿ ಬಸ್ ಪಾಸ್ ದರ ಏರಿಕೆ; ಪರಿಷ್ಕೃತ ದರಪಟ್ಟಿ ನಾಳೆಯಿಂದ ಜಾರಿ!