ಬೆಂಗಳೂರು ನಮ್ಮ ಮೆಟ್ರೋ ದರ ಶೇ.20ರಷ್ಟು ಏರಿಕೆ; ಸರ್ಕಾರದಿಂದ ಶೀಘ್ರವೇ ಆದೇಶ!

By Kannadaprabha News  |  First Published Jan 8, 2025, 6:15 PM IST

ಬೆಂಗಳೂರು ಮೆಟ್ರೋ ಪ್ರಯಾಣ ದರ ಶೇ.15-20ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಜ.17ರಂದು ಬಿಎಂಆರ್‌ಸಿಎಲ್‌ ಮಂಡಳಿ ಸಭೆಯಲ್ಲಿ ದರ ಪರಿಷ್ಕರಣೆ ಕುರಿತು ಚರ್ಚೆ ನಡೆಯಲಿದ್ದು, ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.


ಬೆಂಗಳೂರು (ಜ.08): ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಟಿಕೆಟ್‌ ದರ ಶೇ.15ರಷ್ಟು ಏರಿಕೆಯಾದ ಬೆನ್ನಲ್ಲೇ ಇದೀಗ ನಮ್ಮ ಮೆಟ್ರೋ ಪ್ರಯಾಣ ದರವೂ ಶೇ.15-20ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಜ.17ಕ್ಕೆ ನಿಗದಿಯಾದ ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಲ್‌) ಮಂಡಳಿ ಸಭೆಯಲ್ಲಿ ದರ ಪರಿಷ್ಕರಣೆ ಸಮಿತಿ ಸಲ್ಲಿಸಿರುವ ಅಂತಿಮ ವರದಿ ಕುರಿತು ಸಮಾಲೋಚನೆ ಆಗಲಿದ್ದು, ಅಂತಿಮವಾಗಿ ಸರ್ಕಾರ ನಿರ್ಧರಿಸಲಿದೆ.

2017ರ ಜೂನ್‌ 18ರಂದು ಕೊನೆಯ ಬಾರಿಗೆ ನಮ್ಮ ಮೆಟ್ರೋ ಪ್ರಯಾಣ ದರವನ್ನು (ಶೇ.10-15ರಷ್ಟು) ಏರಿಸಿತ್ತು. ಪ್ರಸ್ತುತ ರಾಜಧಾನಿಯಲ್ಲಿ 76.95 ಕಿಮೀ ಸೇವೆ ಸಲ್ಲಿಸುತ್ತಿರುವ ನಮ್ಮ ಮೆಟ್ರೋ ಪ್ರಯಾಣಿಕರ ದರವನ್ನು ಏಳೂವರೆ ವರ್ಷಗಳಿಂದ ಏರಿಕೆ ಮಾಡಿಲ್ಲ. ದರ ಪರಿಷ್ಕರಣೆ ಸಮಿತಿಯು ಈಚೆಗೆ ಬಿಎಂಆರ್‌ಸಿಲ್‌ಗೆ ನೀಡಿರುವ ತನ್ನ ಅಂತಿಮ ವರದಿ ಬಗ್ಗೆ ಮಂಡಳಿ ಸಭೆಯಲ್ಲಿ ಸಮಾಲೋಚಿಸಲಿದ್ದೇವೆ. ಬಳಿಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು. ಅಲ್ಲಿಯೂ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದರು.

Tap to resize

Latest Videos

ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್.ಥಾರಣಿ, ರಾಜ್ಯದ ಗೃಹ, ನಗರ ವ್ಯವಹಾರ ಇಲಾಖೆ ಸತ್ಯೇಂದ್ರ ಪಾಲ್ ಸಿಂಗ್ ಹಾಗೂ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ ಅವರ ತಂಡವನ್ನು ದರ ಪರಿಷ್ಕರಣೆಗಾಗಿ ಬಿಎಂಆರ್‌ಸಿಎಲ್ ರಚಿಸಿತ್ತು. ಸಮಿತಿ ಸದಸ್ಯರು ಸಿಂಗಾಪುರ, ಹಾಂಕಾಂಗ್, ದೆಹಲಿಗೆ ತೆರಳಿ ಅಲ್ಲಿನ ಮೆಟ್ರೋದರ ಪರಿಷ್ಕರಣೆ ಕ್ರಮ, ದರ ಹೆಚ್ಚಳವನ್ನು ಅಧ್ಯಯನ ಮಾಡಿಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಟಾಪ್-5 ಜನದಟ್ಟಣೆ ಮೆಟ್ರೋ ನಿಲ್ದಾಣಗಳು ಯಾವುವು?

ಸಿಂಗಾಪುರದಲ್ಲಿ ಮೆಟ್ರೋ ಸರ್ಕಾರದ್ದೇ ಆದರೂ ಅದನ್ನು ಖಾಸಗೀಯವರು ನಿರ್ವಹಣೆ ಮಾಡುತ್ತಿದ್ದು, ಆಟೋಮೆಟಿಕ್ ವಾರ್ಷಿಕ ದರ ಪರಿಷ್ಕರಣೆ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಆದರೆ, ಇದನ್ನು ನಮ್ಮಲ್ಲಿ ಅನುಷ್ಠಾನಕ್ಕೆ ತರುವುದು ಕಷ್ಟ, ದೆಹಲಿ ಮೆಟ್ರೋದಲ್ಲಿ ಅನುಸರಿಸಲಾಗುತ್ತಿರುವ ದರ ಪರಿಷ್ಕರಣೆಯನ್ನು ನಾವು ಇಲ್ಲಿ ಜಾರಿಗೊಳಿಸಿಕೊಳ್ಳಬಹುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೋ ದರ ಪರಿಷ್ಕರಣೆಯನ್ನು ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002ರ, ಸೆಕ್ಷನ್ 33 ಮತ್ತು 34ರ ಅಡಿಯಲ್ಲಿ ಕೇಂದ್ರ ಸರ್ಕಾರವು ರಚಿಸಿದ ದರ ನಿಗದಿ ಸಮಿತಿಯು ನಿರ್ವಹಿಸುತ್ತಿದೆ. ಪ್ರಸ್ತುತ, ದರಗಳು ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಕನಿಷ್ಠ ದರ ₹ 10, ಗರಿಷ್ಠ ದರ ₹ 60 ವರೆಗೆ ಇದೆ. ಜತೆಗೆ, ಸ್ಮಾರ್ಟ್ ಕಾರ್ಡ್‌ಗಳು ಮತ್ತು ಕ್ಯೂಆರ್ ಕೋಡ್ ಟಿಕೆಟ್‌ ಬಳಸುವ ಪ್ರಯಾಣಿಕರಿಗೆ ಶೇ.5 ರಿಯಾಯಿತಿ ನೀಡಲಾಗುತ್ತದೆ.

ಇದನ್ನೂ ಓದಿ: 15 ದಿನದಲ್ಲಿ ಮೇಕ್‌ ಇನ್‌ ಇಂಡಿಯಾ ಚಾಲಕರಹಿತ ಮೆಟ್ರೋ ರೈಲು ಬೆಂಗ್ಳೂರಿಗೆ!

ದರ ಏರಿಕೆ ಅನಿವಾರ್ಯ: ನಮ್ಮ ಮೆಟ್ರೋ ರೈಲು ಮುಂದಿನ ಐದು ವರ್ಷದಲ್ಲಿ 220 ಕಿಮೀ ನಷ್ಟು ವಿಸ್ತರಣೆ ಮಾಡಲು ಈಗಾಗಲೇ ಯೋಜನೆ ಸಿದ್ಧವಾಗಿದೆ. ಕಾಮಗಾರಿಯೂ ನಡೆಯುತ್ತಿದೆ. ಮೆಟ್ರೋ ಕಾಮಗಾರಿಗಾಗಿ ವಿವಿಧ ಬ್ಯಾಂಕ್‌, ಏಜೆನ್ಸಿಗಳಿಗೆ ಪಾವತಿಸಬೇಕಾದ ಸಾಲದ ಮೇಲಿನ ಬಡ್ಡಿ, ಪ್ರಸ್ತುತ ರೈಲುಗಳ ಕಾರ್ಯಾಚರಣೆ ವೆಚ್ಚ, ನಿರ್ವಹಣೆ ಮತ್ತು ಸಿಬ್ಬಂದಿ ವೇತನ ಮತ್ತಿತರ ವಿವಿಧ ವೆಚ್ಚ ಪ್ರತಿ ವರ್ಷ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಶೇ. 15-20ರಷ್ಟು ದರ ಏರಿಕೆ ಅನಿವಾರ್ಯವಾಗಿದೆ. ಆದರೆ, ಈಗಲೇ ಎಷ್ಟು ಏರಿಕೆಯಾಗಲಿದೆ ಎಂದು ಹೇಳುವುದು ಕಷ್ಟವೆಂದು ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ.

ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಮಿತಿ ತನ್ನ ವರದಿ ನೀಡಿದೆ. ಜ. 17ರಂದು ಬಿಎಂಆರ್‌ಸಿಎಲ್‌ ಬೋರ್ಡ್‌ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಲಿದೆ. ಎಷ್ಟು ಶೇ. ದರ ಹೆಚ್ಚಿಸಬೇಕು, ಸಾಧಕ, ಬಾಧಕಗಳೇನು ಎಂಬ ಸಮಾಲೋಚನೆ ಆಗಲಿದೆ.
-ಯಶವಂತ ಚೌಹಾಣ್‌, ಬಿಎಂಆರ್‌ಸಿಎಲ್‌ , ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ 

click me!