
ಬೆಂಗಳೂರು (ಏ.02): ಮಾಡೋದಕ್ಕೆ ಕಾಂಟ್ರಾಕ್ಟರ್ ಕೆಲಸ, ಕೈತುಂಬಾ ಕಾಸು. ಕಾಸಿದ್ದವನೇ ಬಾಸು ಎಂದುಕೊಂಡು ಈತ ಮಾಡುತ್ತಿದ್ದ ಶೋಕಿಗೇನೂ ಕಡಿಮೆ ಇರಲಲಿಲ್ಲ. ಹಣ ತೋರಿಸಿ ಹೆಣ್ಣು ಮಕ್ಕಳನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ ದರಿಯಪ್ಪ ಈಗ ಹಣಕಾಸಿನ ವಿಚಾರಕ್ಕೆ ತನ್ನ ಹೆಂಡತಿ ಕುತ್ತಿಗೆ ಕಾಲಿಟ್ಟು ತುಳಿದು ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿದ್ದಾನೆ.
ಘಟನೆಯ ಹಿನ್ನೆಲೆ:
ಈ ಘಟನೆ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಸಂದ್ರದಲ್ಲಿ ನಡೆದಿದೆ. ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಮೃತಳನ್ನು ಕಾವ್ಯ (34) ಎಂದು ಗುರುತಿಸಲಾಗಿದೆ. ಮೂಲತಃ ಬೆಳಗಾವಿ ಜಿಲ್ಲೆಯವರಾದ ದರಿಯಪ್ಪ ಮತ್ತು ಕಾವ್ಯ (34) ದಂಪತಿಗಳು ನಾಗಸಂದ್ರದಲ್ಲಿ ವಾಸವಾಗಿದ್ದರು. ದರಿಯಪ್ಪ ನಗರದಲ್ಲಿ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದನು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ಕಳೆದ ಒಂದು ವಾರದಿಂದ ಇವರ ನಡುವೆ ಹಣಕಾಸಿನ ವಿಚಾರವಾಗಿ ತೀವ್ರ ಗಲಾಟೆ ನಡೆಯುತ್ತಿತ್ತು. ಇತ್ತೀಚೆಗಷ್ಟೇ ದರಿಯಪ್ಪ ಮನೆಗೆ 2 ಲಕ್ಷ ರೂಪಾಯಿ ಹಣವನ್ನು ತಂದಿಟ್ಟಿದ್ದನು. ಈ ಹಣವನ್ನು ತನ್ನ ಅಣ್ಣನಿಗೆ ನೀಡಬೇಕೆಂದು ಕಾವ್ಯ ಪಟ್ಟು ಹಿಡಿದಿದ್ದರು. ಇದೇ ವಿಷಯವಾಗಿ ಇಂದು ಮಧ್ಯಾಹ್ನ 12:30ರ ಸುಮಾರಿಗೆ ದಂಪತಿ ನಡುವೆ ದೊಡ್ಡ ಜಗಳ ನಡೆದಿದೆ.
ಹಣಕಾಸಿನ ಇಬ್ಬರ ಜಗಳದ ವೇಳೆ ಸಿಟ್ಟಿಗೆದ್ದ ದರಿಯಪ್ಪ, ಪತ್ನಿ ಕಾವ್ಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಅಷ್ಟಕ್ಕೇ ನಿಲ್ಲದ ಈತ, ಕಾವ್ಯ ಕೆಳಗೆ ಬಿದ್ದಾಗ ಆಕೆಯ ಕುತ್ತಿಗೆಯ ಮೇಲೆ ಕಾಲಿಟ್ಟು ಜೋರಾಗಿ ತುಳಿದಿದ್ದಾನೆ. ಉಸಿರುಗಟ್ಟಿ ಕಾವ್ಯ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಹಣದ ಹಪಾಹಪಿಗೆ ಇಬ್ಬರು ಮಕ್ಕಳ ತಾಯಿಯನ್ನೇ ದರಿಯಪ್ಪ ಬಲಿ ಪಡೆದಿದ್ದಾನೆ.
ಆರಂಭದಲ್ಲಿ ಇದು ಕೇವಲ ಹಣದ ವಿಚಾರಕ್ಕೆ ನಡೆದ ಕೊಲೆ ಎಂದು ಭಾವಿಸಲಾಗಿತ್ತು. ಆದರೆ ದರಿಯಪ್ಪನ ಸ್ನೇಹಿತ ವೆಂಕಟಾಚಲಯ್ಯ ನೀಡಿರುವ ಹೇಳಿಕೆ ಪ್ರಕರಣಕ್ಕೆ ಬೆಚ್ಚಿಬೀಳಿಸುವ ಟ್ವಿಸ್ಟ್ ನೀಡಿದೆ. ದರಿಯಪ್ಪನಿಗೆ ವಿಪರೀತ 'ಹೆಣ್ಣುಮಕ್ಕಳ ಶೋಕಿ' ಇತ್ತು ಎಂದು ವೆಂಕಟಾಚಲಯ್ಯ ಬಯಲು ಮಾಡಿದ್ದಾರೆ. 'ದರಿಯಪ್ಪ ಬೇರೆ ಹೆಣ್ಣುಮಕ್ಕಳ ಜೊತೆಗಿರುವ ಫೋಟೋಗಳನ್ನು ತನ್ನ ಪತ್ನಿ ಕಾವ್ಯಳಿಗೆ ತೋರಿಸಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ. ಈ ವಿಚಾರವಾಗಿ ನಾನು ಹಲವು ಬಾರಿ ರಾಜಿ ಮಾಡಿಸಿದ್ದೆ. ಇತ್ತೀಚೆಗೆ ಈತ ಮನೆ ಖಾಲಿ ಮಾಡಿ ಇಲ್ಲಿಗೆ ಬಂದ ಮೇಲೆ ನಮ್ಮ ಸಂಪರ್ಕವನ್ನೂ ತಪ್ಪಿಸಿದ್ದ' ಎಂದು ವೆಂಕಟಾಚಲಯ್ಯ ಹೇಳಿದ್ದಾರೆ.
ಇನ್ನು ದರಿಯಪ್ಪನ ಈ ಕೆಟ್ಟ ಚಟಗಳಿಂದಾಗಿ ಕಾವ್ಯ ಕಳೆದ ಹಲವು ವರ್ಷಗಳಿಂದ ನೊಂದು ಬೆಂದಿದ್ದರು. ಸದಾ ಆಸ್ತಿ ಮತ್ತು ಹಣದ ವಿಚಾರವಾಗಿ ದರಿಯಪ್ಪ ಮನೆಯಲ್ಲಿ ರಂಪಾಟ ಮಾಡುತ್ತಿದ್ದ ಎನ್ನಲಾಗಿದೆ. ಸದ್ಯ ಪೀಣ್ಯಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ದರಿಯಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರು ಪುಟ್ಟ ಮಕ್ಕಳು ಈಗ ತಾಯಿಯನ್ನು ಕಳೆದುಕೊಂಡು, ತಂದೆ ಜೈಲು ಪಾಲಾಗಿ ಅನಾಥರಾಗಿದ್ದಾರೆ.