
ಬೆಂಗಳೂರು (ಜೂ.03): ನಗರದ ಮೈಸೂರು ರಸ್ತೆಯ ಮಾರ್ಕೆಟ್ ಫ್ಲೈ ಓವರ್ ನಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ದುರ್ಮರಣ ಹೊಂದಿದ್ದಾರೆ. ಈ ದುರ್ಘಟನೆ ಮಂಗಳವಾರ ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ನಡೆದಿದೆ.
ಈ ಅಪಘಾತದಲ್ಲಿ ಸಾವನ್ನಪ್ಪಿದವರನ್ನು ಕೆ.ಪಿ. ಅಗ್ರಹಾರದ ನಿವಾಸಿ ಆಕಾಶ್ ಮತ್ತು ಮಂಗಳೂರಿನಿಂದ ಬಂದಿದ್ದ ವಿಜಯನಗರ ನಿವಾಸಿ ಅಫ್ಜಲ್ (25) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಕಾಸಿಮ್ ಮತ್ತು ಮಣಿ ಎಂಬ ಇಬ್ಬರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಸಿಟಿ ಮಾರ್ಕೆಟ್ ಫ್ಲೈ ಓವರ್‌ನಲ್ಲಿ ಎಲೆಕ್ಟ್ರಿಕ್ ಬೈಕ್ ಮುಂಚೆ ಸಾಗುತ್ತಿತ್ತು. ಈ ವೇಳೆ ಹಿಂಬದಿಯಿಂದ ಮತ್ತೊಂದು ಬೈಕ್ ಬಂದು ಬಲವಾಗಿ ಗುದ್ದಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಆಕಾಶ್ ತನ್ನ ಸ್ನೇಹಿತ ಮಣಿಯೊಂದಿಗೆ ರಾತ್ರಿ ಊಟ ಮಾಡಲು ಹೋಗುತ್ತಿದ್ದರೆಂದು ತಿಳಿದು ಬಂದಿದೆ. ಆಕಾಶ್ ಸ್ಥಳೀಯವಾಗಿ ಗ್ರೈಂಡರ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದನು. ಮಂಗಳೂರಿನ ಮೂಲದ ಅಫ್ಜಲ್ ವಿಜಯನಗರದಲ್ಲಿ ವಾಸವಾಗಿದ್ದನು ಹಾಗೂ ಸ್ಥಳೀಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅವನು ತನ್ನ ಸ್ನೇಹಿತ ಆಶಿಮ್ ಜೊತೆ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.ಈ ಘಟನೆಯ ಕುರಿತು ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸುತ್ತಿದ್ದಾರೆ.