ನಮ್ಮ ಬೆಂಗಳೂರು ಮೆಟ್ರೋ ರೈಲು ನಿಲ್ದಾಣಗಳು ಮಕ್ಕಳಿಗೆ ಮಾರಕವಾಗಿ ಮಾರ್ಪಡುತ್ತಿವೆ. ಮೆಟ್ರೋ ನಿಲ್ದಾಣಕ್ಕೂ ಹಾಗೂ ಟ್ರ್ಯಾಕ್‌ಗೂ ಯಾವುದೇ ರಕ್ಷಣೆ ಇಲ್ಲದ ಹಿನ್ನೆಲೆಯಲ್ಲಿ 4 ವರ್ಷದ ಮಗು ಆಟವಾಡುತ್ತಲೇ ಟ್ರ್ಯಾಕ್‌ಗೆ ಬಿದ್ದಿರುವ ಘಟನೆ ನಡೆಡಿದೆ.
ಬೆಂಗಳೂರು (ಆ.02): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಮುಕ್ತ ಸಂಚಾರಕ್ಕೆ ಅನುಕೂಲ ಆಗಿರುವ ಸಾರ್ವಜನಿಕ ಸಾರಿಗೆ ನಮ್ಮ ಮೆಟ್ರೋ ರೈಲು ನಿಲ್ದಾಣಗಳು ಈನ ಮಕ್ಕಳಿಗೆ ಮಾರಕವಾಗಿವೆ. ಮೆಟ್ರೋ ನಿಲ್ದಾಣಗಳಲ್ಲಿ ರಕ್ಷಣೆ ಇಲ್ಲದೇ ಮಕ್ಕಳು ಹಾಗೂ ಪ್ರಯಾಣಿಕರು ಆಗಿಂದಾಗ್ಗೆ ಟ್ರ್ಯಾಕ್‌ಗೆ ಬೀಳುವ ಘಟನೆಗಳು ವರದು ಆಗುತ್ತಲಿವೆ.
ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣಗಳು ಸೇಫ್ಟಿ ಇಲ್ಲವೇ ಎಂಬ ಅನುಮಾನ ಎದುರಾಗಿದೆ. ನಮ್ಮ ಮೆಟ್ರೋದಲ್ಲಿ ಭದ್ರತಾ ಲೋಪದಿಂದಾಗಿ 4 ವರ್ಷದ ಮಗು ಆಟವಾಡುತ್ತಲೇ ರೈಲ್ವೆ ಟ್ರ್ಯಾಕ್‌ಗೆ ಬಿದ್ದಿರುವ ಘಟನೆ ನಿನ್ನೆ ರಾತ್ರಿ 9 ಗಂಟೆ ವೇಳೆಗೆ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಮೆಟ್ರೋ ರೈಲಿಗೆ ಹೋಗಲು ಬಂದಿರುವ ಪ್ರಯಾಣಿಕರು ಬ್ಯಾಗ್ ಸಮೇತ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದಾರೆ. ಈ ವೇಳೆ ಪೋಷಕರು ಬ್ಯಾಗ್ ನೋಡಿಕೊಂಡಿರುವಾಗ 4 ವರ್ಷದ ಮಗು ನಿಲ್ದಾಣದ ಆವರಣದಲ್ಲಿ ಆಟವಾಡುತ್ತಿದೆ.
ಮದುವೆಯಾದ ಗೆಳತಿಗೆ ಸಹಕರಿಸುವಂತೆ ಕಿರುಕುಳ ಕೊಟ್ಟ ಕ್ಲಾಸ್‌ಮೇಟ್ಸ್; ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣು
ಮಗು ಆಟವಾಡುತ್ತಾ ರೈಲ್ವೆ ಟ್ರ್ಯಾಕ್ ಸಮೀಪಕ್ಕೆ ಹೋಗುತ್ತಿದ್ದುದನ್ನು ಗಮನಿಸಿ ಪೋಷಕರು ಕೂಡಲೇ ಮಗುವನ್ನು ತನ್ನತ್ತ ಬರುವಂತೆ ಕೂಗಿದ್ದಾರೆ. ಜೊತೆಗೆ, ಯಾರಾದರೂ ಮಗುವನ್ನು ಆ ಕಡೆ ಹೋಗದಂತೆ ರಕ್ಷಣೆ ಮಾಡಿ ಎಂದು ಕೂಗಿಕೊಂಡಿದ್ದಾರೆ. ಆದರೆ, ಪೋಷಕರು ತನ್ನನ್ನು ಹಿಡಿದುಕೊಳ್ಳಲು ಬರುತ್ತಿದ್ದಾರೆಂದು ಮಗು ಹಿಂದಕ್ಕೆ ಓಡಲು ಆರಂಭಿಸಿದೆ. ಆಗ ದಿಢೀರನೇ ಅತಿಹೆಚ್ಚು ವಿದ್ಯುತ್ ಪ್ರಸರಣವಾಗುವ ರೈಲ್ವೆ ಟ್ರ್ಯಾಕ್‌ಗೆ ಮಗು ಬಿದ್ದಿದೆ. ಆದರೆ, ತಕ್ಷಣ ಮೆಟ್ರೋ ಟ್ರ್ಯಾಕ್ ನ ಪವರ್ ಕಟ್ ಮಾಡಿ ಮಗುವಿನ ರಕ್ಷಣೆ ಮಾಡಲಾಗಿದೆ.
ಇದರಿಂದಾಗಿ ಬೈಯಪ್ಪನಹಳ್ಳಿ ಪರ್ಪಲ್ ಲೈನ್ ನಲ್ಲಿ ಮೆಟ್ರೋ ಸಂಚಾರ ವ್ಯತ್ಯಯ ಉಂಟಾಗಿತ್ತು. ಗುರುವಾರ ರಾತ್ರಿ 9 ಗಂಟೆ 8 ನಿಮಿಷದಿಂದ 9 ಗಂಟೆ 16 ನಿಮಿಷದ ವರೆಗೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, 2 ರೈಲು ಸಂಚಾರವನ್ನ ಬಿಎಂಆರ್‌ಸಿಎಲ್ ಸ್ಥಗಿತಗೊಳಿಸಿತ್ತು. ಇದಾದ ನಂತರ ಮಗುವನ್ನು ರಕ್ಷಣೆ ಮಾಡಿ ಟ್ರ್ಯಾಕ್‌ನ ಮೇಲಿಂದ ಹೊರಗೆ ಎತ್ತಿ ಪೋಷಕರಿಗೆ ಒಪ್ಪಿಸಿ, ಪುನಃ ವಿದ್ಯುತ್ ಸಂಪರ್ಕವನ್ನು ಮರುಕಲ್ಪಿಸಲಾಯುತು. ನಂತರ, ಎಂದಿನಂತೆ ಮೆಟ್ರೋ ಸಂಚಾರ ಆರಂಭವಾಗಿದೆ ಎಂದು ಬಿಎಂಆರ್‌ಸಿಎಲ್ ಎಕ್ಸಿಕ್ಯುಟಿವ್ ಡೈರೆಕ್ಟರ್ ಶಂಕರ್ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.