ಗಣೇಶ ಹಬ್ಬಕ್ಕೆ ಬೆಂಗಳೂರು-ಮಂಗಳೂರಿಗೆ ವಿಶೇಷ ರೈಲು ಇಲ್ಲ: ರೈಲ್ವೆ ಇಲಾಖೆ ವಿರುದ್ಧ ಪ್ರಯಾಣಿಕರ ಆಕ್ರೋಶ

Published : Sep 14, 2026, 07:00 AM IST
Bengaluru Mangaluru Special Train

ಸಾರಾಂಶ

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕಾರವಾರ-ಮಡಗಾಂವ್‌ಗೆ ವಿಶೇಷ ರೈಲು ನೀಡಿದರೂ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು ಘೋಷಿಸದಿರುವುದು ಕರಾವಳಿ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಗಳೂರು (ಸೆ.14): ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವುದು ಸಹಜ. ಈ ವಿಚಾರ ಗೊತ್ತಿದ್ದೇ ರೈಲ್ವೆ ಇಲಾಖೆ ಪ್ರತಿ ಬಾರಿ ಬೆಂಗಳೂರು-ಮಂಗಳೂರು ನಡುವೆ ಇದುವರೆಗೆ ವಿಶೇಷ ರೈಲನ್ನು ಓಡಿಸುತ್ತಿತ್ತು. ಆದರೆ ಈ ಬಾರಿ ಮಾತ್ರ ರೈಲ್ವೆ ಇಲಾಖೆಗೆ ದಕ್ಷಿಣ ಕನ್ನಡದಲ್ಲಿ ಕೂಡ ಹಬ್ಬ ಆಚರಿಸುತ್ತಾರೆ ಎನ್ನುವುದು ಮರೆತೇ ಹೋಗಿದಂತೆ ವರ್ತಿಸಿದೆ. ಬೆಂಗಳೂರಿನಿಂದ ಮಂಗಳೂರನ್ನು ಮರೆತು ಕೇವಲ ಕಾರವಾರಕ್ಕೆ ಮಾತ್ರ ವಿಶೇಷ ರೈಲು ಸಂಚಾರ ಏರ್ಪಡಿಸಿ ಕೈತೊಳೆದುಕೊಂಡಿದೆ.

ಗಣೇಶ ಚತುರ್ಥಿ ಸಂದರ್ಭದಲ್ಲಿ ನೈಋತ್ಯ ರೈಲ್ವೆಯ ಈ ನಡೆ ಇದೀಗ ದಕ್ಷಿಣ ಕನ್ನಡದ ರೈಲು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕಾರವಾರ ಮಾರ್ಗವಾಗಿ ಮಡಗಾಂವ್‌ಗೆ ವಿಶೇಷ ರೈಲು ಓಡಿಸುತ್ತಿದೆ. ಆದರೆ ಇದೇ ವೇಳೆ ಮಂಗಳೂರಿಗೆ ಮಾತ್ರ ವಿಶೇಷ ರೈಲು ನೀಡದೆ ಇರುವುದರಿಂದ ಮಂಗಳೂರಿನ ಪ್ರಯಾಣಿಕರ ಮೇಲೆ ಮತ್ತೊಮ್ಮೆ ಮಲತಾಯಿ ಧೋರಣೆ ಅನುಸರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಯಶವಂತಪುರ-ಮಡಗಾಂವ್ ವಿಶೇಷ ರೈಲು ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹೊರಟು ಶನಿವಾರ ಮಡಗಾಂವ್ ತಲುಪಿದೆ. ಸೋಮವಾರ ಮಡಗಾಂವ್‌ನಿಂದ ಹೊರಟು ಮಂಗಳವಾರ ನಸುಕಿನ ಜಾವ ಬೆಂಗಳೂರಿಗೆ ಮರಳುವ ಈ ರೈಲು ಮಂಗಳೂರು ನಗರ ಪ್ರವೇಶಿಸದೆ ಪಡೀಲ್ ಬೈಪಾಸ್ ಮೂಲಕ ಸಂಚರಿಸುತ್ತದೆ. ಹೀಗಾಗಿ ಹಬ್ಬಕ್ಕೆ ಬೆಂಗಳೂರಿನಿಂದ ಮಂಗಳೂರಿಗೆ ಬರಬೇಕಿದ್ದ ಸಾವಿರಾರು ಪ್ರಯಾಣಿಕರಿಗೆ ಈ ರೈಲಿನಿಂದ ಯಾವುದೇ ಪ್ರಯೋಜನ ಇಲ್ಲ.

ಮಂಗಳೂರು ಮರೆವು?

ಪ್ರಮುಖ ಹಬ್ಬಗಳ ಸಂದರ್ಭ ಬೆಂಗಳೂರಿನಿಂದ ಕರಾವಳಿಯತ್ತ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ವಿಶೇಷ ರೈಲುಗಳಿಲ್ಲದ ಕಾರಣ ಪ್ರಯಾಣಿಕರು ದುಬಾರಿ ಬಸ್ ಹಾಗೂ ಇತರ ಸಾರಿಗೆ ವ್ಯವಸ್ಥೆ ಅವಲಂಬಿಸಬೇಕಾಗುತ್ತದೆ. ಒಂದು ಕಡೆ ಮಂಗಳೂರು ವಿಭಾಗದಿಂದ ರೈಲ್ವೆಗೆ ಕೋಟ್ಯಂತರ ರುಪಾಯಿ ಆದಾಯ ಬರುತ್ತಿದೆ, ಮತ್ತೊಂದೆಡೆ ಹಬ್ಬದ ಸಂದರ್ಭದಲ್ಲಿ ಕನಿಷ್ಠ ವಿಶೇಷ ರೈಲು ನೀಡುವ ಬೇಡಿಕೆಯೂ ಈಡೇರುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಗಣೇಶ ಚತುರ್ಥಿ ಮುಗಿಯುತ್ತಾ ಬಂತು. ಆದರೆ ನವರಾತ್ರಿ ಮತ್ತು ದೀಪಾವಳಿ ಇನ್ನೂ ಮುಂದಿವೆ. ಕನಿಷ್ಠ ಮುಂದಿನ ಹಬ್ಬಗಳ ಸಂದರ್ಭದಲ್ಲಾದರೂ ಬೆಂಗಳೂರು-ಮಂಗಳೂರು ನಡುವೆ ಮಂಗಳೂರು ಜಂಕ್ಷನ್ ಅಥವಾ ಮಂಗಳೂರು ಸೆಂಟ್ರಲ್‌ಗೆ ನೇರವಾಗಿ ಬಂದು, ಅಲ್ಲಿಂದಲೇ ಹಿಂದಿರುಗುವ ವಿಶೇಷ ರೈಲುಗಳನ್ನು ಘೋಷಿಸಬೇಕು. ಇಲ್ಲವಾದರೆ ಕರಾವಳಿಯ ರೈಲು ಪ್ರಯಾಣಿಕರನ್ನು ನಿರಂತರವಾಗಿ ಕಡೆಗಣಿಸಲಾಗುತ್ತಿದೆ ಎಂಬ ಆರೋಪಕ್ಕೆ ರೈಲ್ವೆ ಇಲಾಖೆ ತಾನೇ ಉತ್ತರಿಸಬೇಕಾಗುತ್ತದೆ.

ಸಂಸದರ ಮನವಿಗೂ ಬೆಲೆ ಇಲ್ಲ!

ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಜುಲೈ 18ರಂದೇ ರೈಲ್ವೆ ಇಲಾಖೆ ಸಚಿವರಿಗೆ ಪತ್ರ ಬರೆದು ಬೆಂಗಳೂರು-ಮಂಗಳೂರು ನಡುವೆ ಹಬ್ಬದ ವಿಶೇಷ ರೈಲು ಓಡಿಸುವಂತೆ ಮನವಿ ಮಾಡಿದ್ದರು. ಮಂಗಳೂರು ಜಂಕ್ಷನ್ ಅಥವಾ ಮಂಗಳೂರು ಸೆಂಟ್ರಲ್‌ಗೆ ರೈಲು ಆಗಮಿಸಿ, ಇಲ್ಲಿ ನಿಲುಗಡೆ ಪಡೆದು, ಇಲ್ಲಿಂದಲೇ ಹಿಂದಿರುಗುವಂತೆ ವಿಶೇಷ ರೈಲು ವ್ಯವಸ್ಥೆ ಮಾಡಬೇಕೆಂದು ಸಂಸದರು ಒತ್ತಾಯಿಸಿದ್ದರು. ಆದರೂ ಈ ಮನವಿಗೆ ರೈಲ್ವೆಯಿಂದ ಸ್ಪಂದನೆ ಸಿಕ್ಕಿಲ್ಲ.

ಪಡೀಲ್ ಬೈಪಾಸ್ ಮೂಲಕ ಉಡುಪಿ-ಕಾರವಾರ ಭಾಗಕ್ಕೆ ರೈಲು ಓಡಿಸುವುದಕ್ಕೆ ಪ್ರಯಾಣಿಕರ ಆಕ್ಷೇಪವಿಲ್ಲ. ಆದರೆ ಮಂಗಳೂರಿಗೆ ಪ್ರತ್ಯೇಕ ವಿಶೇಷ ರೈಲು ನೀಡಬಹುದಿತ್ತು. ಹಬ್ಬದ ಬೇಡಿಕೆ ಮೊದಲೇ ತಿಳಿದಿದ್ದರೂ ರೈಲ್ವೆ ಇಲಾಖೆ ಮಂಗಳೂರನ್ನು ಕಡೆಗಣಿಸಿರುವುದು ಏಕೆ ಎಂಬುದಕ್ಕೆ ಸ್ಪಷ್ಟನೆ ನೀಡಬೇಕಾಗಿದೆ.

PREV
Read more Articles on
click me!

Recommended Stories

ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಖಾಲಿ ಇದೆ, ಆದ್ರೆ ಕನ್ನಡಿಗರಿಗೆ ಕೊಡಲ್ಲ; ತಮಿಳರಷ್ಟೇ ಅರ್ಜಿ ಸಲ್ಲಿಸಿ
ಪಾವಗಡದಲ್ಲಿ ನಕ್ಸಲ್ ಹೆಸರಲ್ಲಿ ಬೆದರಿಕೆ, ನಾಡಬಾಂಬ್ ಸ್ಫೋಟ: 'ಉಪ್ಪಾರ ವೆಂಕಟೇಶ'ನ ಸೆರೆಗೆ 120 ಪೊಲೀಸರಿಂದ ತಲಾಶ್!