
ಬೆಂಗಳೂರು/ಆನೇಕಲ್ (ಫೆ.01): ಹಣದ ಮೇಲಿನ ದುರಾಸೆ ಎಂತಹಾ ಸಂಬಂಧವನ್ನಾದರೂ ಹಾಳು ಮಾಡುತ್ತದೆ ಎನ್ನುವುದಕ್ಕೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಹೆಬ್ಬಗೋಡಿಯಲ್ಲಿ ನಡೆದ ಘಟನೆಯೇ ಸಾಕ್ಷಿ. ಸ್ವಂತ ಉದ್ಯೋಗ ಮಾಡಿ ಬದುಕು ಕಟ್ಟಿಕೊಳ್ಳಬೇಕೆಂದು ಗೂಡ್ಸ್ ವಾಹನ ಮಾರಿ, ಆ ಹಣದಲ್ಲಿ ಕ್ಯಾಬ್ ತೆಗೆದುಕೊಳ್ಳಲು ಮುಂದಾಗಿದ್ದ ಯುವಕನಿಗೆ ಆತನ ಸ್ನೇಹಿತರೇ ಮುಳ್ಳಾಗಿದ್ದಾರೆ. ವಾಹನ ಮಾರಾಟದ ಹಣವನ್ನು ದೋಚಲು ಸ್ನೇಹಿತನನ್ನೇ ಅಪಹರಿಸಿ, ಹಾಕಿ ಸ್ಟಿಕ್‌ನಿಂದ ಮನಬಂದಂತೆ ಥಳಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದ್ದು, ಹೆಬ್ಬಗೋಡಿ ಪೊಲೀಸರ ಸಮಯಪ್ರಜ್ಞೆಯಿಂದ ಸಂತ್ರಸ್ತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ದೂರುದಾರ ವ್ಯಕ್ತಿಯು ಈ ಹಿಂದೆ ಗೂಡ್ಸ್ ವಾಹನವೊಂದನ್ನು ಹೊಂದಿದ್ದನು. ಜೀವನದಲ್ಲಿ ಆರ್ಥಿಕವಾಗಿ ಮತ್ತಷ್ಟು ಚೇತರಿಸಿಕೊಳ್ಳುವ ಉದ್ದೇಶದಿಂದ ಆ ವಾಹನವನ್ನು ಮಾರಾಟ ಮಾಡಿ, ಆ ಹಣದಲ್ಲಿ ಹೊಸದಾಗಿ 'ಕ್ಯಾಬ್' (Cab) ಒಂದನ್ನು ಖರೀದಿಸಲು ನಿರ್ಧರಿಸಿದ್ದನು. ಆದರೆ, ವಾಹನ ಮಾರಾಟದಿಂದ ತನ್ನ ಸ್ನೇಹಿತನ ಬಳಿ ಹಣ ಬಂದಿದೆ ಎಂಬ ವಿಷಯ ಆರೋಪಿಗಳಿಗೆ ತಿಳಿದಿತ್ತು. ಹೇಗಾದರೂ ಮಾಡಿ ಆ ಹಣವನ್ನು ಸುಲಿಗೆ ಮಾಡಬೇಕೆಂದು ಹೊಂಚು ಹಾಕಿದ್ದ ಆರೋಪಿಗಳು, ಅದಕ್ಕಾಗಿ ಪಕ್ಕಾ 'ಮಾಸ್ಟರ್ ಪ್ಲ್ಯಾನ್' ರೂಪಿಸಿದ್ದರು.
ಆರೋಪಿಗಳ ಪ್ಲ್ಯಾನ್‌ನಂತೆ, ಜನವರಿ 30ರಂದು ಸಂಜೆ 7 ಗಂಟೆಯ ಸುಮಾರಿಗೆ ಸ್ನೇಹಿತನನ್ನು ನಂಬಿಸಿ ಆಟೋ ರಿಕ್ಷಾವೊಂದರಲ್ಲಿ ಕರೆದೊಯ್ದಿದ್ದಾರೆ. ನಂತರ ಆತನನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು, ಖಾಜಾ, ಜಾನ್ ಪೀಟರ್ ಮತ್ತು ಓರ್ವ ಅಪ್ರಾಪ್ತ ಸೇರಿ ಮೂವರು ಆರೋಪಿಗಳು ಏಕಾಏಕಿ ಹಾಕಿ ಸ್ಟಿಕ್‌ಗಳಿಂದ ಹಲ್ಲೆ ನಡೆಸಿದ್ದಾರೆ. ಸಂತ್ರಸ್ತನ ಬಳಿಯಿದ್ದ ಒಂದೂವರೆ ಸಾವಿರ ರೂಪಾಯಿಯನ್ನು ಕಿತ್ತುಕೊಂಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಪಾಪಿಗಳು, 'ಇನ್ನೂ 50 ಸಾವಿರ ರೂಪಾಯಿ ಕೊಡಲೇಬೇಕು, ಇಲ್ಲದಿದ್ದರೆ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ' ಎಂದು ಬೆದರಿಸಿ ಪ್ರಾಣಾಂತಿಕ ಹಲ್ಲೆ ನಡೆಸಿದ್ದಾರೆ.
ಆರೋಪಿಗಳ ಏಟು ತಾಳಲಾರದೆ ಸಂತ್ರಸ್ತ, ಹಣ ತರಿಸಿಕೊಡುವುದಾಗಿ ಹೇಳಿ ತನ್ನ ಸಹೋದರನಿಗೆ ಕರೆ ಮಾಡಿದ್ದಾನೆ. ಕರೆ ಮಾಡಿದ ವೇಳೆ ಸಂತ್ರಸ್ತನ ಧ್ವನಿಯಲ್ಲಿದ್ದ ಆತಂಕವನ್ನು ಗ್ರಹಿಸಿದ ಸಹೋದರ, ತಕ್ಷಣವೇ ಹೆಬ್ಬಗೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯದ ಗಂಭೀರತೆಯನ್ನು ಅರಿತ ಪೊಲೀಸರು, ತಕ್ಷಣವೇ ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿ ಕಾರ್ಯಾಚರಣೆಗಿಳಿದಿದ್ದಾರೆ. ಸಿನಿಮಾ ಮಾದರಿಯಲ್ಲಿ ನಡೆದ ಚೇಸಿಂಗ್‌ನಲ್ಲಿ ಆರೋಪಿಗಳ ಅಡಗುತಾಣವನ್ನು ಪತ್ತೆ ಹಚ್ಚಿದ ಪೊಲೀಸರು, ದೂರುದಾರನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಗಳಾದ ಖಾಜಾ, ಜಾನ್ ಪೀಟರ್ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಓರ್ವ ಅಪ್ರಾಪ್ತನನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಹಣಕ್ಕಾಗಿ ಅಪಹರಣ, ಕೊಲೆ ಯತ್ನ ಹಾಗೂ ಹಲ್ಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ಹಣದಾಸೆಗಾಗಿ ಈ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಸ್ನೇಹಿತರೆಂದು ನಂಬಿ ಜೊತೆಗಿದ್ದವರೇ ಕುತ್ತಿಗೆ ಕುಯ್ಯಲು ಮುಂದಾದ ಈ ಘಟನೆ ಆನೇಕಲ್ ಭಾಗದಲ್ಲಿ ಸಂಚಲನ ಮೂಡಿಸಿದೆ.