ಬೆಂಗಳೂರಿನಲ್ಲಿ ಮತ್ತೆ ಶೆಡ್‌ಗಳ ಮೇಲೆ ಘರ್ಜಿಸಿದ ಬಿಬಿಎಂಪಿ ಜೆಸಿಬಿ; ನಟ ದರ್ಶನ್ ಮನೆ ಉಡೀಸ್ ಯಾವಾಗ?

Published : Jan 20, 2025, 09:06 PM IST
ಬೆಂಗಳೂರಿನಲ್ಲಿ ಮತ್ತೆ ಶೆಡ್‌ಗಳ ಮೇಲೆ ಘರ್ಜಿಸಿದ ಬಿಬಿಎಂಪಿ ಜೆಸಿಬಿ; ನಟ ದರ್ಶನ್ ಮನೆ ಉಡೀಸ್ ಯಾವಾಗ?

ಸಾರಾಂಶ

ಬೆಂಗಳೂರಿನ ಹೆಚ್.ಎಂ.ಟಿ ಕಾರ್ಖಾನೆ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಶೆಡ್‌ಗಳನ್ನು ಬಿಬಿಎಂಪಿ ತೆರವುಗೊಳಿಸಿದೆ. ನಟ ದರ್ಶನ್ ಮನೆಯನ್ನು ತೆರವು ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಬೆಂಗಳೂರು (ಜ.20): ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ರಾಜರಾಜೇಶ್ವರಿ ನಗರ (ಆರ್.ಆರ್ ನಗರ) ವಲಯ ಹೆಚ್.ಎಂ.ಟಿ ಕಾರ್ಖಾನೆ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿಕೊಂಡಿದ್ದ ಶೆಡ್‌ಗಳನ್ನು ತೆರವುಗೊಳಿಸಲಾಯಿತು. ಈ ಶೆಡ್‌ಗಳನ್ನು ಒಡೆಯಲು ಘರ್ಜನೆ ಮಾಡುತ್ತಿರುವ ಬಿಬಿಎಂಪಿ ಜೆಸಿಬಿಗಳು ರಾಜಕಾಲುವೆ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಿದ್ದಾರೆನ್ನಲಾದ ನಟ ದರ್ಶನ್ ಮನೆಯನ್ನು ತೆರವು ಮಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಬಿಬಿಎಂಪಿಯ ಆರ್.ಆರ್ ನಗರ ವಲಯದ ಹೆಚ್.ಎಂ.ಟಿ ವಾರ್ಡ್‌ಗೆ ಸೇರಿರುವ ತುಮಕೂರು ಮುಖ್ಯರಸ್ತೆಯಿಂದ ಎಸ್.ಆರ್.ಎಸ್ ಸಿಗ್ನಲ್ ಕಡೆಗೆ ಹೋಗುವ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಹೊಂದಿಕೊಂಡಿರುವ ಬೃಹತ್ ಮಳೆ ನೀರುಗಾಲುವೆಯ ಸುಮಾರು 100 ಮೀ. ಪ್ರದೇಶವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಸುಮಾರು 35 ರಿಂದ 45 ಶೆಡ್‌ಗಳು, ಒಂದು ಗ್ಯಾರೇಜ್ ನಿರ್ಮಾಣ ಮಾಡಿದ್ದರು. ಆದ್ದರಿಂದ ವಲಯ ಆಯುಕ್ತ ಸತೀಶ್ ನಿರ್ದೇಶನದ ಮೇರೆಗೆ ಸೋಮವಾರ ಪಾಲಿಕೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಮಾರ್ಷಲ್ ಗಳ ಸಹಯೋಗದೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಯಿತು.

ಆಗ ಬೃಹತ್ ನೀರು ಗಾಲುವೆಯ ಮೇಲೆ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿರುವುದು ಖಚಿತ ಆಗುತ್ತಿದ್ದಂತೆ, ಸಮೀಕ್ಷೆ ಆಧಾರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಿಸಲಾದ ಎಲ್ಲ ಶೆಡ್ ಗಳನ್ನು ತೆರವುಗೊಳಿಸಲಾಯಿತು. ಇದನ್ನೂ ಮುಂಚಿತವಾಗಿ ಈ ಸ್ಥಳದಲ್ಲಿ ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸವಿದ್ದ ನಿವಾಸಿಗಳನ್ನು ಸ್ಥಳಾಂತರ ಮಾಡಿಸಲಾಯಿತು. ನಂತರ 2 ಜೆಸಿಬಿಗಳ ಮೂಲಕ ಶೆಡ್‌ಗಳು ಹಾಗೂ ಗ್ಯಾರೇಜ್ ಅನ್ನು ತೆರವುಗೊಳಿಸಲಾಯಿತು.

ಒತ್ತುವರಿ ಮಾಡಿಕೊಂಡಿದ್ದ ಸ್ವತ್ತನ್ನು ಪಾಲಿಕೆ ವಶಕ್ಕೆ ಪಡೆಯಲಾಗಿದ್ದು, ಶೆಡ್/ಗ್ಯಾರೇಜ್ ಸಂಪೂರ್ಣ ತೆರವುಗೊಳಿಸಲಾಗಿದೆ. ಜೊತೆಗೆ, ಮತ್ತೊಮ್ಮೆ ರಾಜಕಾಲುವೆ ಜಾಗವನ್ನು ಒತ್ತುವರಿ ಮಾಡದಂತೆ ಸ್ಥಳದಲ್ಲಿ ವಾಸವಿದ್ದ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿರುತ್ತದೆ. ಈ ಕಾರ್ಯಾಚರಣೆ ವೇಳೆ ಬಿಬಿಎಂಪಿ ಕಾರ್ಯಪಾಲಕ ಇಂಜಿನಿಯರ್ ಪಾಪರೆಡ್ಡಿ, ಕಂದಾಯ ವಿಭಾಗದ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಮಾರ್ಷಲ್‌ಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: 2ನೇ ಏರ್ಪೋರ್ಟ್‌ ಬಗ್ಗೆ ಸಿಎಂ ಸಿದ್ದರಾಮಯ್ಯ ಜತೆ ಶೀಘ್ರ ಸಭೆ: ಸಚಿವ ಎಂ.ಬಿ.ಪಾಟೀಲ್‌

ನಟ ದರ್ಶನ್ ಒತ್ತುವರಿ ಮಾಡಿದ್ದರೂ ತೆರವು ಮಾಡುವುದಾಗಿ ಹೇಳಿದ ಡಿಕೆಶಿ: 
ಕಳೆದ ವರ್ಷ ಮಳೆಗಾಲದಲ್ಲಿ ಬೆಂಗಳೂರಿನ ವಿವಿಧೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಆಗ ಬಿಬಿಎಂಪಿ ಜೆಸಿಬಿಗಳು ಎಲ್ಲೆಡೆ ಘರ್ಜನೆ ಮಾಡತ್ತಾ ಒತ್ತುವರಿ ತೆರವು ಕಾರ್ಯದಲ್ಲಿ ತೊಡಗಿದ್ದವು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಆರ್.ಆರ್. ನಗರದಲ್ಲಿ ನಟ ದರ್ಶನ್ ಕೂಡ ರಾಜಕಾಲುವೆ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಿದ್ದಾರೆ ಎಂಬ ದಾಖಲೆಗಳಿವೆ. ಅವರ ಮನೆ ತೆರವು ಮಾಡಲಾಗುತ್ತದೆಯೇ ಎಂದು ಪ್ರಶ್ನೆ ಮಾಡಲಾಯಿತು. ಆಗ, ನಟ ದರ್ಶನ್ ಅಥವಾ ಯಾರೇ ರಾಜಕಾಲುವೆ ಒತ್ತುವರಿ ಮಾಡಿಕೊಂಡು ನ್ಯಾಯಾಲಯದಿಂದ ತಡೆಯಾಜ್ಞೆ ತೆಗೆದುಕೊಂಡು ಬಂದರೂ ಮುಲಾಜಿಲ್ಲದೇ ತೆರವುಗೊಳಿಸಲಾಗುವುದು ಎಂದರು.

ನಾನು, ನೀವು ಸೇರಿದಂತೆ ಯಾರೇ ರಾಜಕಾಲುವೆ ಒತ್ತುವರಿ ಮಾಡಿಕೊಂಡು ನ್ಯಾಯಾಲಯದಿಂದ ತಡೆಯಾಜ್ಞೆ ತೆಗೆದುಕೊಂಡು ಬಂದಿದ್ದರೆ, ತಡೆಯಾಜ್ಞೆ ತೆರವುಗೊಳಿಸಿ ಒತ್ತುವರಿ ತೆರವುಗೊಳಿಸಲಾಗುವುದು ಎಂದು 2024ರ ಜೂ.19ರಂದು ಹೇಳಿದ್ದರು. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು 2025ರ ಮಳೆಗಾಲ ಆರಂಭಕ್ಕೂ ಮುನ್ನವೇ ಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕಿದೆ.

ಇದನ್ನೂ ಓದಿ: ಬೆಂಗಳೂರು: ತೆರಿಗೆ ಪಾವತಿಸದ ಆಸ್ತಿ ಹರಾಜಿಗೆ ಬಿಬಿಎಂಪಿ ಸಿದ್ಧತೆ

PREV
Read more Articles on
click me!

Recommended Stories

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ
ಬೆಂಗಳೂರಿನ ಹಲವೆಡೆ ಡಿ.6, 8ಕ್ಕೆ ಪವರ್ ಕಟ್, ಯಾವ ಏರಿಯಾದಲ್ಲಿ 8 ಗಂಟೆ ವಿದ್ಯುತ್ ಕಡಿತ?