ಪಾರ್ಟಿಗೆಂದು ವಿಲ್ಲಾಗೆ ಕರೆದು 'ಬಾಯಿಗೆ ಬಿಳಿ ಪೌಡರ್ ಹಾಕಿದರು, ಗ್ಯಾಂಗ್ ರೇ*ಪ್ ಮಾಡಿದರು' ನ್ಯಾಯ ಬೇಕೆಂದ ಸಂತ್ರಸ್ತೆ

Published : Feb 27, 2026, 06:58 PM IST
Bengaluru Gangrape Case Updates

ಸಾರಾಂಶ

ಬೆಂಗಳೂರಿನಲ್ಲಿ ಕಾಲೇಜು ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಸ್ನೇಹಿತನಿಂದ ನಂಬಿಕೆ ದ್ರೋಹಕ್ಕೆ ಒಳಗಾಗಿದ್ದಾರೆ. ಫೋಟೋ ಶೂಟ್ ನೆಪದಲ್ಲಿ ಪಾರ್ಟಿಗೆ ಕರೆದು, ಡ್ರಗ್ಸ್ ನೀಡಿ ತನ್ನ ಮೇಲೆ ಗ್ಯಾಂಗ್ ರೇಪ್ ಎಸಗಲಾಗಿದೆ ಎಂದಿದ್ದಾರೆ. ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಬೆಂಗಳೂರು (ಫೆ.27): ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾಲೇಜು ಯುವತಿಯ ಮೇಲಿನ ಗ್ಯಾಂಗ್ ರೇಪ್ ಪ್ರಕರಣ ಇದೀಗ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಸಂತ್ರಸ್ತ ಯುವತಿ (19) ಮಾಧ್ಯಮಗಳ ಮುಂದೆ ಬಂದು ತನಗಾದ ಅನ್ಯಾಯ ಮತ್ತು ಆರೋಪಿಗಳ ಪೈಶಾಚಿಕ ಕೃತ್ಯದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇನ್‌ಸ್ಟಾಗ್ರಾಮ್ ಸ್ನೇಹ ನರಕಕ್ಕೆ ದಾರಿ:

ಸಂತ್ರಸ್ತ ಯುವತಿ ಹೇಳುವಂತೆ, ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಡಿಕ್ಸನ್ ಆಕೆಗೆ ಮೊದಲು ಪರಿಚಯವಾಗಿದ್ದು ಇನ್‌ಸ್ಟಾಗ್ರಾಮ್ ಮೂಲಕ. 'ಫೋಟೋ ಶೂಟ್ ಮಾಡೋಣ' ಎಂದು ಆಕೆಯನ್ನು ಅಪ್ರೋಚ್ ಮಾಡಿದ್ದ ಡಿಕ್ಸನ್, ಆರಂಭದಲ್ಲಿ ಆಕೆ ಪ್ರತಿಕ್ರಿಯಿಸದಿದ್ದರೂ ಬಿಡದೆ ಪ್ರತಿದಿನ ಮೆಸೇಜ್ ಮಾಡುತ್ತಿದ್ದ. ನಿರಂತರ ಸಂಭಾಷಣೆಯ ನಂತರ ಇಬ್ಬರ ನಡುವೆ ಸ್ನೇಹ ಬೆಳೆದು, ಅದು ಪ್ರೀತಿಯ ಹಂತಕ್ಕೆ ತಲುಪುವ ಹಾದಿಯಲ್ಲಿತ್ತು. 'ನಾನು ಮತ್ತು ಡಿಕ್ಸನ್ ಇನ್ನೇನು ರಿಲೇಶನ್‌ಶಿಪ್‌ಗೆ ಹೋಗಬೇಕಿತ್ತು, ಆತನನ್ನು ನಾನು ಅತಿಯಾಗಿ ನಂಬಿದ್ದೆ' ಎಂದು ಯುವತಿ ಕಣ್ಣೀರಿಟ್ಟಿದ್ದಾರೆ.

ನಂಬಿಕೆ ಹುಟ್ಟಿಸಿ ಖೆಡ್ಡಾಕ್ಕೆ ಕೆಡವಿದ ಕಿರಾತಕ:

ಯುವತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಡಿಕ್ಸನ್ ಮೊದಲು ಎರಡು ಬಾರಿ ಕೋರಮಂಗಲದ ಪಬ್‌ಗಳಲ್ಲಿ ಭೇಟಿಯಾಗಿದ್ದ. ಆ ಸಂದರ್ಭಗಳಲ್ಲಿ ಆತ ಯಾವುದೇ ಅಸಭ್ಯ ವರ್ತನೆ ತೋರದೆ, ತಾನು ಅತ್ಯಂತ ಸಂಸ್ಕಾರವಂತ ಎಂಬಂತೆ ನಾಟಕವಾಡಿದ್ದ. ಇದೇ ನಂಬಿಕೆಯಿಂದ ಮೂರನೇ ಬಾರಿ ಆತ 'ಆಫ್ಟರ್ ಪಾರ್ಟಿ'ಗೆ ಕರೆದಾಗ ಯುವತಿ ಯಾವುದೇ ಸಂಶಯವಿಲ್ಲದೆ ಒಪ್ಪಿಕೊಂಡಿದ್ದರು. 'ಅಲ್ಲಿ ಬೇರೆ ಹುಡುಗಿಯರು ಇರುತ್ತಾರೆ, ಇದು ಸೇಫ್ ಜಾಗ ಬಾ ಎಂದು ಕರೆದಿದ್ದ, ಹಾಗಾಗಿ ನಾನು ಅಲ್ಲಿಗೆ ಹೋಗಿದ್ದೆ' ಎಂದು ಯುವತಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ವಿಲ್ಲಾದಲ್ಲಿ ಡ್ರಗ್ಸ್ ಮಾಯಾಲೋಕ:

ಅಮೃತಹಳ್ಳಿಯ ವಿಲ್ಲಾಕ್ಕೆ ಹೋದಾಗ ಅಲ್ಲಿ ನಿಕಿಲ್ ಎಂಬಾತನ ಪರಿಚಯವಾಗಿದೆ. ಅಲ್ಲಿ ಊಟ, ಸಂಗೀತ, ಡ್ಯಾನ್ಸ್ ಎಂದು ಸಂಭ್ರಮದ ವಾತಾವರಣ ಸೃಷ್ಟಿಸಲಾಗಿತ್ತು. ಆದರೆ ಸ್ವಲ್ಪ ಸಮಯದ ನಂತರ ಆರೋಪಿಗಳ ಅಸಲಿ ಬಣ್ಣ ಬಯಲಾಗಿದೆ. 'ಅಲ್ಲಿ ಡ್ರಗ್ಸ್ ಕೂಡ ಇತ್ತು. ನಾನು ಬೇಡ ಎಂದು ಎಷ್ಟೇ ಪ್ರತಿರೋಧ ತೋರಿದರೂ ಅವರು ಕೇಳಲಿಲ್ಲ. ಬಲವಂತವಾಗಿ ನನ್ನ ಬಾಯಿಗೆ ಏನೋ ಬಿಳಿ ಪೌಡರ್ (ಮತ್ತು ಬರುವ ಡ್ರಗ್ಸ್) ಹಾಕಿದರು. ನಂತರ ನನ್ನ ಮೇಲೆ ಅತ್ಯಾ*ಚಾರ ಎಸಗಿದರು' ಎಂದು ಯುವತಿ ಅಳಲು ತೋಡಿಕೊಂಡಿದ್ದಾರೆ.

ಹಣದ ಆರೋಪಕ್ಕೆ ತಿರುಗೇಟು:

ಆರೋಪಿಗಳು ಯುವತಿಯ ಮೇಲೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ 'ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ' ಎಂದು ನೀಡಿರುವ ದೂರನ್ನು ಯುವತಿ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. 'ನಾನು ಯಾರ ಬಳಿಯೂ ಹಣ ಕೇಳಿಲ್ಲ, ಬದಲಿಗೆ ನಾನೇ ಆತನಿಗೆ ಹಲವು ಬಾರಿ ಹಣ ಪಾವತಿಸಿದ್ದೇನೆ. ಮಲ್ಲೇಶ್ವರಂನಲ್ಲಿ ಅವರು ನೀಡಿರುವ ದೂರು ಶುದ್ಧ ಸುಳ್ಳು. ನನ್ನನ್ನು ಹಾದಿ ತಪ್ಪಿಸಲು ಅವರು ಈ ತಂತ್ರ ಮಾಡುತ್ತಿದ್ದಾರೆ' ಎಂದು ಸ್ಪಷ್ಟಪಡಿಸಿದ್ದಾರೆ. 19 ವರ್ಷದ ನನಗೆ ಡಿಕ್ಸನ್ ನಂಬಿಕೆ ದ್ರೋಹ ಮಾಡಿದ್ದಾನೆ. ರಿಲೇಶನ್‌ಶಿಪ್ ಶುರುವಾಗುವ ಮೊದಲೇ ನನ್ನ ಜೀವನ ಹಾಳು ಮಾಡಿದ್ದಾರೆ. ನನಗೆ ಈಗ ಬೇಕಿರುವುದು ಕೇವಲ ನ್ಯಾಯ ಮಾತ್ರ ಎಂದು ಆಕ್ರೋಶ ಹೊರಹಾಕಿದ್ದಾರೆ.

PREV
Read more Articles on
click me!

Recommended Stories

ಹಟ್ಟಿ ಗೋಲ್ಡ್ ಮೈನ್ಸ್‌ ಎದುರು ಸ್ಫೋಟಕಗಳ ರಾಶಿ!: ಸಿಸಿಟಿವಿಯಲ್ಲಿ ಕಂಡ ನಂಬರ್ ಪ್ಲೇಟ್ ಇಲ್ಲದ ಆ ನಿಗೂಢ ಬೈಕ್ ಯಾರದ್ದು?
ರಾಮಚಂದ್ರಾಪುರ ಮಠ- ಪ್ರಧಾನ ಮಠದ ಪುನರ್ನಿರ್ಮಾಣ ಸಹಸ್ರಮಾನದ ಕಾರ್ಯ; ಅಯೋಧ್ಯೆಯ ಪುಣ್ಯ ಮಣ್ಣಿನ ಸ್ಪರ್ಶ