Loan: ₹16 ಲಕ್ಷ ಸಾಲಕ್ಕೆ ₹36 ಲಕ್ಷ ವಸೂಲಿ: ಸಂಕೇಶ್ವರದ ಚಕ್ರಬಡ್ಡಿ ದಂಧೆಕೋರನ ಬಂಧನ

Published : Jul 23, 2026, 05:54 AM IST
Belagavi Sankeshwar

ಸಾರಾಂಶ

₹16.16 ಲಕ್ಷ ಸಾಲಕ್ಕೆ ಪ್ರತಿಯಾಗಿ ₹36.77 ಲಕ್ಷ ವಸೂಲಿ ಮಾಡಿ, ಇನ್ನೂ ಹೆಚ್ಚಿನ ಹಣಕ್ಕಾಗಿ ಜೀವ ಬೆದರಿಕೆ ಹಾಕುತ್ತಿದ್ದ ಚಕ್ರಬಡ್ಡಿ ದಂಧೆಕೋರನನ್ನು ಪೊಲೀಸರು ಬಂಧಿಸಿದ್ದಾರೆ. ದೂರುದಾರರ ದೂರಿನ ಮೇರೆಗೆ, ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬೆಳಗಾವಿ: ₹16.16 ಲಕ್ಷ ಸಾಲಕ್ಕೆ ₹36.77 ಲಕ್ಷ ವಸೂಲಿ ಮಾಡಿದ್ದಲ್ಲದೆ, ಇನ್ನೂ ₹4.64 ಲಕ್ಷ ಬಡ್ಡಿ ನೀಡುವಂತೆ ಬೆದರಿಕೆ ಹಾಕುತ್ತಿದ್ದ ಚಕ್ರಬಡ್ಡಿ ದಂಧೆ ಕೋರನನ್ನು ಬಂಧಿಸುವಲ್ಲಿ ಸಂಕೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ. ಸಂಕೇಶ್ವರದ ಸದಾನಂದ ಭೀಮರಾವ ಹಲಗೆ (47) ಬಂಧಿತ ಆರೋಪಿ.

ಹುಕ್ಕೇರಿ ತಾಲೂಕಿನ ಸ್ನೇಹಾ ವಿಕಾಸ ಮೇಲಗೇರಿ ಅವರು ಜುಲೈ 20ರಂದು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದನೆ

ದೂರಿನ ಪ್ರಕಾರ 2022 ರಿಂದ 2026ರ ಅವಧಿಯಲ್ಲಿ ತಾವು ಹಾಗೂ ತಮ್ಮ ಪತಿ ಸದಾನಂದ ಹಲಗೆ ಅವರಿಂದ ಒಟ್ಟು ₹16,16,580 ಸಾಲ ಪಡೆದಿದ್ದರು. ಬಳಿಕ ಅಸಲು ಮತ್ತು ಬಡ್ಡಿ ಸೇರಿ ಫೋನ್‌ ಫೇ ಹಾಗೂ ಆರ್‌ಟಿಜಿಎಸ್‌ ಮೂಲಕ ಒಟ್ಟು ₹36,77,607 ಪಾವತಿಸಿದ್ದರೂ, ಇನ್ನೂ ₹4,64,000 ಹೆಚ್ಚುವರಿ ಬಡ್ಡಿ ನೀಡುವಂತೆ ಆರೋಪಿ ಒತ್ತಾಯಿಸಿದ್ದಾನೆ. ಹಣ ನೀಡದಿದ್ದರೆ ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 

ನ್ಯಾಯಾಂಗ ಬಂಧನಕ್ಕೆ ಆರೋಪಿ

ಈ ಸಂಬಂಧ ಬಿಎನ್‌ಎಸ್‌-2023ರ ಕಲಂ 351(2), 352 ಹಾಗೂ ಕರ್ನಾಟಕ ಮೈಕ್ರೋ ಮತ್ತು ಸಣ್ಣ ಸಾಲ (ದೌರ್ಜನ್ಯ ತಡೆ) ಕಾಯ್ದೆ-2025ರ ಕಲಂ 8 ಮತ್ತು 13ರ ಅಡಿಯಲ್ಲಿ ಸಂಕೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಕಣಗಲಾ ಗ್ರಾಮದ ಬಳಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯು ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸುವಲ್ಲಿ ಪಿಐ ಜಿ.ಬಿ.ಕೊಂಗನೊಳ್ಳಿ, ಪಿಎಸೈಗಳಾದ ವಿ.ಐ.ನಾಯಿಕ, ಯು.ಎಸ್.ಶೆಟ್ಟೆನ್ನವರ, ಎಎಸ್‌ಐ ಎಲ್.ಎಸ್.ಖೋತ, ಸಿಬ್ಬಂದಿಯರಾದ ಬಿ.ಕೆ.ನಾಗನೂರಿ, ಎಸ್.ಎಲ್.ಗಳತಗಿ, ವಿ.ಬಿ.ಮುರ್ಕಿಭಾವಿ, ಎಸ್.ಎಂ.ಯಕ್ಸಂಬಿ, ವಿ.ಜಿ.ಕುಡ್ಡಗೋಳ ಹಾಗೂ ಟೆಕ್ನಿಕಲ್ ಸೆಲ್‌ನ ವಿನೋದ ಠಕ್ಕನ್ನವರ ಮತ್ತು ಸಚಿನ್ ಪಾಟೀಲ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅಭಿನಂದಿಸಿದ್ದಾರೆ.

ಜಿಲ್ಲೆಯಲ್ಲಿ ಅಕ್ರಮ ಚಕ್ರಬಡ್ಡಿ ದಂಧೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದೌರ್ಜನ್ಯ ಅಥವಾ ಬೆದರಿಕೆಗೆ ಒಳಗಾಗಿರುವ ಸಾರ್ವಜನಿಕರು ಯಾವುದೇ ಭಯವಿಲ್ಲದೆ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಬೇಕು. ಇಂತಹ ದಂಧೆಕೋರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಕೆ. ರಾಮರಾಜನ್ ಹೇಳಿದ್ದಾರೆ.

PREV
Read more Articles on
click me!

Recommended Stories

ಯೆಲ್ಲೋ ಅಲರ್ಟ್, ನಾಳೆ ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ
Bhatkal: ಆನಂದ ಆಶ್ರಮ ಪದವಿ ಪೂರ್ವ ಕಾಲೇಜಿನಲ್ಲಿ ನಾಳೆ Business Day 2026 ಸಂಭ್ರಮ