ಮೆಡಿಕಲ್ ವಿದ್ಯಾರ್ಥಿನಿಯೊಂದಿಗೆ ಉಪನ್ಯಾಸಕ ಪರಾರಿ! 11 ದಿನ ಕಳೆದರೂ ಸಿಗದ ಸುಳಿವು; ಪೋಷಕರ ಕಣ್ಣೀರು

Published : Jan 21, 2026, 05:06 PM IST
Paramedical Student Elopes with Lecturer

ಸಾರಾಂಶ

ಬೆಳಗಾವಿಯ ಅಥಣಿಯಲ್ಲಿ ಖಾಸಗಿ ಪ್ಯಾರಾಮೆಡಿಕಲ್ ಕಾಲೇಜಿನ ಉಪನ್ಯಾಸಕನೊಬ್ಬ, ತನ್ನದೇ ವಿದ್ಯಾರ್ಥಿನಿಯನ್ನು ಪ್ರೀತಿಯ ಬಲೆಗೆ ಬೀಳಿಸಿ ಕರೆದುಕೊಂಡು ಪರಾರಿಯಾಗಿದ್ದಾನೆ. ಘಟನೆ ನಡೆದು 11 ದಿನ ಕಳೆದರೂ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದಾರೆ.

ಬೆಳಗಾವಿ (ಜ.21): ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಗುರುವಿನ ಸ್ಥಾನದಲ್ಲಿದ್ದು ಪಾಠ ಮಾಡಬೇಕಾದ ಉಪನ್ಯಾಸಕನೊಬ್ಬ, ವಿದ್ಯಾರ್ಥಿನಿಯನ್ನೇ ಕರೆದುಕೊಂಡು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಖಾಸಗಿ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಕಾಣೆಯಾಗಿ 11 ದಿನ ಕಳೆದರೂ ಪೊಲೀಸರು ಪತ್ತೆ ಮಾಡದ ಹಿನ್ನೆಲೆಯಲ್ಲಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ವಿವರ:

ಅಥಣಿ ಪಟ್ಟಣದ ಖಾಸಗಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಮೋನಿಕಾ ಉಲ್ಲಾಸ್ ಬೋಸಲೆ (23) ಎಂಬ ವಿದ್ಯಾರ್ಥಿನಿ ಕಳೆದ ಜನವರಿ 8 ರಿಂದ ಕಾಣೆಯಾಗಿದ್ದಾರೆ. ಅದೇ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ಪವನಕುಮಾರ್ ಶೀಲಗಾರ (28) ಎಂಬಾತ ಮೋನಿಕಾಳೊಂದಿಗೆ ನಾಪತ್ತೆಯಾಗಿದ್ದಾನೆ. ಮಗಳಿಗೆ ಪ್ರೀತಿ ಪ್ರೇಮದ ಗುಂಗು ಹಿಡಿಸಿ, ಬ್ರೈನ್ ವಾಶ್ ಮಾಡಿ ಈತ ಕರೆದುಕೊಂಡು ಹೋಗಿದ್ದಾನೆ ಎಂದು ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ.

ಪೊಲೀಸರ ವಿಳಂಬ ಧೋರಣೆಗೆ ಆಕ್ರೋಶ

ವಿದ್ಯಾರ್ಥಿನಿ ನಾಪತ್ತೆಯಾದ ಮರುದಿನವೇ ಅಂದರೆ ಜನವರಿ 9 ರಂದು ಪೋಷಕರು ಅಥಣಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ದೂರು ನೀಡಿ 11 ದಿನಗಳು ಕಳೆದರೂ ಸಹ ಪೊಲೀಸರು ಇಬ್ಬರ ಸುಳಿವು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ. 'ನಮ್ಮ ಮಗಳನ್ನು ನಂಬಿಸಿ ಕರೆದೊಯ್ದಿದ್ದಾರೆ, ಆಕೆಯ ಜೀವಕ್ಕೆ ಅಪಾಯವಿದ್ದರೆ ಯಾರು ಹೊಣೆ?' ಎಂದು ತಂದೆ ಉಲ್ಲಾಸ್ ಬೋಸಲೆ ಕಣ್ಣೀರಿಡುತ್ತಿದ್ದಾರೆ.

ಮಾಜಿ ಸೈನಿಕ ಧರಿಗೌಡ ಬಿರಾದಾರ ಅವರು ಈ ಕುರಿತು ಮಾತನಾಡಿ, 'ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲದಂತಾಗಿದೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡು ಯುವತಿಯನ್ನು ಪತ್ತೆ ಹಚ್ಚಬೇಕು' ಎಂದು ಒತ್ತಾಯಿಸಿದ್ದಾರೆ.

ಸಂಕಷ್ಟದಲ್ಲಿ ಪೋಷಕರು

ಮಗಳಿಗಾಗಿ ಕಾದು ಕಾದು ಕಣ್ಣೀರು ಹಾಕುತ್ತಿರುವ ಪೋಷಕರು, ಅಥಣಿ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆಯ ಬಗ್ಗೆ ಮತ್ತೆ ಪ್ರಶ್ನೆ ಮೂಡಿಸುವಂತೆ ಮಾಡಿದೆ. ಸದ್ಯ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

PREV
Read more Articles on
click me!

Recommended Stories

ರೇಷ್ಮೆ ಸೀರೆ ಸಿಕ್ಕವರು ಫುಲ್ ಖುಷ್, ಸಿಗದವರು ನಿರಾಸೆ: Mysore Silk ಕಾರ್ಖಾನೆ ಮುಂದೆ ಹೈಡ್ರಾಮಾ!
ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅಮಾನತಿಗೆ ಕೆಪಿಸಿಸಿ ಗ್ರೀನ್ ಸಿಗ್ನಲ್! ಪೊಲೀಸರ ಕೈಗೂ ಸಿಗದೇ ಪರಾರಿ!