ಬೆಳಗಾವಿ ಬೆಚ್ಚಿಬೀಳುವಂತಹ ಮತ್ತೊಂದು ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಸಾವಿರಾರು ಜನರ ಮಧ್ಯೆ ಬಹಿರಂಗವಾಗಿಯೇ ರಿವಾಲ್ವಾರ್ನಿಂದ ಫೈರಿಂಗ್ ಮಾಡಿದ್ದಾನೆ. ಈ ಘಟನೆಯಿಂದ ನಗರದ ಜನತೆ ಭೀತಿಗೊಳ್ಳುವಂತಾಗಿದೆ. ಅಷ್ಟೇ ಅಲ್ಲ ಪಕ್ಕದಲ್ಲಿ ಪೊಲೀಸರಿದ್ದರೂ ಯಾವ ಕ್ರಮ ಕೂಡ ಕೈಗೊಂಡಿಲ್ಲ.
ಬೆಳಗಾವಿ(ಆ.27): ನಗರದಲ್ಲಿ ಬೆಚ್ಚಿಬೀಳುವಂತಹ ಮತ್ತೊಂದು ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಸಾವಿರಾರು ಜನರ ಮಧ್ಯೆ ಬಹಿರಂಗವಾಗಿಯೇ ರಿವಾಲ್ವಾರ್ನಿಂದ ಫೈರಿಂಗ್ ಮಾಡಿದ್ದಾನೆ. ಈ ಘಟನೆಯಿಂದ ನಗರದ ಜನತೆ ಭೀತಿಗೊಳ್ಳುವಂತಾಗಿದೆ.
ಅಷ್ಟೇ ಅಲ್ಲ ಪಕ್ಕದಲ್ಲಿ ಪೊಲೀಸರಿದ್ದರೂ ಯಾವ ಕ್ರಮ ಕೂಡ ಕೈಗೊಂಡಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಶಸ್ತ್ರಾಸ್ತ್ರ ಪ್ರದರ್ಶಿಸಬಾರದೆಂಬ ನಿಯಮವಿದೆ. ಹೀಗಿರುವಾಗ ಗುಂಡು ಹಾರಿಸಿದರೂ ಕ್ರಮ ಕೈಗೊಳ್ಳದ ಪೊಲೀಸರಿಂದ ನಮಗೆ ರಕ್ಷಣೆ ಸಿಗಲು ಸಾಧ್ಯವೇ? ಎಂದು ಪ್ರಶ್ನಿಸಿಕೊಂಡಿದ್ದಾರೆ ನಾಗರಿಕರು.
ನಡೆದಿದ್ದು ಎಲ್ಲಿ, ಯಾವಾಗ?:
ಆ.24ರಂದು ರಾತ್ರಿ 8 ಗಂಟೆ ಸುಮಾರಿಗೆ ಗುರುನಾನಕರ 550ನೇ ಜನ್ಮದಿನಾಚರಣೆ ಪ್ರಯುಕ್ತ ಪ್ರಕಾಶ ಯಾತ್ರೆ ಆಯೋಜಿಸಲಾಗಿತ್ತು. ಇದರಂಗವಾಗಿ ನಿಪ್ಪಾಣಿಯಿಂದ ಗೋವಾ ಕಡೆಗೆ ಹೊರಟಿದ್ದ ವಿಕಾಸ ಜ್ಯೋತಿ ಮೆರವಣಿಗೆಯಲ್ಲಿ ಈ ಘಟನೆ ನಡೆದಿದೆ. ನಗರದ ಚನ್ನಮ್ಮ ವೃತ್ತಕ್ಕೆ ಯಾತ್ರೆಯ ರೂಪಕವಾಹನ ಬರುತ್ತಿದ್ದಂತೆ ವ್ಯಕ್ತಿಯೋರ್ವ ಗುರುನಾನಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದಾನೆ. ನಂತರ ಕುದುರೆ ಮೇಲೆ ಹೊರಟಿದ್ದ ವ್ಯಕ್ತಿಗೆ ಹೂವಿನ ಹಾರ ಹಾಕಿ, ತನ್ನ ಜೇಬಿನಿಂದ ರಿವಾಲ್ವಾರ್ ತೆಗೆದು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.
ವಿಕಾಸ ಜ್ಯೋತಿಯನ್ನು ಬರಮಾಡಿಕೊಳ್ಳಲು ಮಹಿಳೆ, ಮಕ್ಕಳು ಸೇರಿದಂತೆ ಸುಮಾರು 1200ಕ್ಕೂ ಹೆಚ್ಚು ಜನರು ನೆರೆದಿದ್ದರು. ಎಲ್ಲರೂ ಸಂಭ್ರಮಾಚರಣೆಯಲ್ಲಿದ್ದರು. ಆಗ ಬಂದ ಗುಂಡಿನ ಶಬ್ದಕ್ಕೆ ಕುದುರೆ ಸಮೇತ ಇವರೆಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೆ ಕುದುರೆ ಮೇಲೆ ಕುಳಿತ ವ್ಯಕ್ತಿ ಕತ್ತಿಯನ್ನು ಪ್ರದರ್ಶಿಸಿದ್ದಾನೆ. ಜತೆಗೆ ಕತ್ತಿಯಿಂದ ಮತ್ತಿಬ್ಬರು ವ್ಯಕ್ತಿಗಳು ವರಸೆಯನ್ನೂ ಪ್ರದರ್ಶನ ಮಾಡಿದ್ದಾರೆ.
ಈ ಘಟನೆಗೆ ಅಲ್ಲಿದ್ದ ಪೊಲೀಸರೂ ಸಾಕ್ಷಿಯಾಗಿದ್ದಾರೆ. ಅವರ ಸಮ್ಮುಖದಲ್ಲೇ ಇದು ನಡೆದು ಎರಡು ದಿನಗಳಾದರೂ ಯಾವುದೇ ಕ್ರಮಕೈಗೊಂಡಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮತ್ತೊಂದು ಘಟನೆ:
ನಗರದಲ್ಲಿ ಯುವತಿಯೋರ್ವಳು ಬೆತ್ತಲೆಯಾಗಿ ಬೈಕ್ ಓಡಿಸಿರುವ ವಿಡಿಯೋ ಈಚೆಗಷ್ಟೇ ವೈರಲ್ ಆಗಿತ್ತು. ಈ ಪ್ರಕರಣದಲ್ಲಿ ಯಾವುದೇ ಕ್ರಮಕೈಗೊಳ್ಳದೆ ಕೈಚೆಲ್ಲಿ ಕುಳಿತಿದ್ದ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದರಿಂದ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿತ್ತು.
ಆದರೆ ಬೆತ್ತಲೆಯಾಗಿ ಬೈಕ್ ಓಡಿಸಿದ ಯುವತಿ ಮತ್ತು ಆಕೆಯ ಜತೆಗಿದ್ದ ವ್ಯಕ್ತಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಕನಿಷ್ಠ ಪಕ್ಷ ಅವರನ್ನು ಪತ್ತೆ ಹಚ್ಚಲೂ ಆಗಿಲ್ಲ. ಇಂತಹ ಸಂದರ್ಭದಲ್ಲಿ ಪೊಲೀಸರ ಸಮ್ಮುಖವೇ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ನಡೆದಿದೆ. ಇದು ಬೆಳಗಾವಿ ನಗರದ ಜನರಲ್ಲಿ ಭೀತಿ ಹುಟ್ಟುವಂತೆ ಮಾಡಿದೆ. ಅದರ ಜತೆಗೆ ಪೊಲೀಸರ ಕಾರ್ಯವೈಖರಿ ಬಗ್ಗೆಯೂ ಬೇಸರ ವ್ಯಕ್ತವಾಗುವಂತೆ ಮಾಡಿದೆ.