ರಾಷ್ಟ್ರೀಯ ಪಕ್ಷಿ ಮನ್ನಣೆ ಪಡೆದ 11 ನವಿಲುಗಳನ್ನು ಮಾಂಸಕ್ಕಾಗಿ ಮಾರಣಹೋಮ ಮಾಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ (ಜ.12): ರಾಜ್ಯದ ಎರಡನೇ ರಾಜ್ಯಧಾನಿ ಎಂದೇ ಹೇಳಲಾಗುವ ಬೆಳಗಾವಿ ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಿ ಮನ್ನಣೆ ಪಡೆದ 11 ನವಿಲುಗಳನ್ನು ಮಾಂಸಕ್ಕಾಗಿ ಮಾರಣಹೋಮ ಮಾಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನಡೆದಿದೆ.
ಹೌದು, ರಾಷ್ಟ್ರೀಯ ಪಕ್ಷಿ, ಪ್ರಾಣಿಗಳನ್ನು ನಾವೆಲ್ಲರೂ ರಕ್ಷಣೆ ಮಾಡಬೇಕು ಎಂದು ಕಾನೂನು ಹೇಳುತ್ತದೆ. ಆದರೆ, ಇಲ್ಲದೆ ದೇಶದ ಕಾನೂನು ಉಲ್ಲಂಘನೆ ಮಾಡಿ ರಾಷ್ಟ್ರೀಯ ಪಕ್ಷಿ ನವಿಲುಗಳನ್ನು ಕೊಲೆ ಮಾಡಿದ್ದಾರೆ. ಮನುಷ್ಯ ತಿನ್ನುವುದಕ್ಕೆ ಕೋಳಿ, ಕುರಿ, ಮೇಕೆಗಳನ್ನು ಮಾಂಸಾಹಾರವಾಗಿ ಅನುಮತಿಸಲಾಗಿದೆ. ಇಲ್ಲಿನ ಕಿರಾತಕರಿಗೆ ಕಾಡಿನಲ್ಲಿ ವಾಸವಾಗಿರುವ ರಾಷ್ಟ್ರಪಕ್ಷಿ ನವಿಲುಗಳೇ ಆಹಾರಕ್ಕೆ ರುಚಿಸಿವೆ. ಆದ್ದರಿಂದ ಪದೇ ಪದೇ ನವಿಲುಗಳನ್ನು ಕೊಂದು ತಿನ್ನುವುದು ಇವರ ಖಯಾಲಿಯಾಗಿದೆ. ಆದರೆ, ಕಾಳುಗಳನ್ನು ತಿನ್ನಲು ಬರುವ ನವಿಲುಗಳಿಗೆ ವಿಷದ ಕಾಳುಗಳನ್ನು ಹಾಕಿ ಸಾಯಿಸಿದ್ದಾರೆ.
ಇನ್ನು ಮಾಂಸಕ್ಕಾಗಿ ನವಿಲುಗಳನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ. ಮಾಂಜರಿ ಗ್ರಾಮಸ್ಥರು ಕಳ್ಳರನ್ನು ಬೆನ್ನಟ್ಟಿದಾಗ ಕೃಷ್ಣಾ ನದಿಗೆ ಹಾರಿ ಪರಾರಿ ಆಗಿದ್ದರು. ಕೃಷ್ಣಾ ನದಿ ದಡದ ಆಚೆಗೆ ಬೈಕ್ ನಿಲ್ಲಿಸಿ ನವಿಲುಗಳನ್ನು ಕೊಲ್ಲಲು ಮಾಂಜರಿ ಗ್ರಾಮಕ್ಕೆ ಬರುತ್ತಿದ್ದರು. ಹೀಗೆ ನವಿಲು ಕೊಲ್ಲುವ ಕಳ್ಳರು ಬಂದಾಗ ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಂಜರಿ ಗ್ರಾಮಸ್ಥರು ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೃತ ನವಿಲುಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಈ ವೇಳೆ ಗ್ರಾಮಸ್ಥರು RFO ಪ್ರಶಾಂತ ಗೌರಾಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಗ್ರಾಮದ ಹೊಲಗಳಲ್ಲಿ ಈ ಹಿಂದೆಯೂ ನವಿಲುಗಳ ಮಾರಣಹೋಮದ ನಡೆದಿತ್ತು. ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರೂ ಅರಣ್ಯಾಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ಬೇಜವಾಬ್ದಾರಿ ವಹಿಸಿದ್ದಾರೆ. ಆದ್ದರಿಂದಲೇ ಪುನಃ 11 ನವಿಲುಗಳ ಮಾರಣ ಹೋಮ ನಡೆದಿದೆ ಎಂದು ಕಿಡಿಕಾರಿದ್ದಾರೆ. ಈ ವೇಳೆ ಮುಂದಿನ ದಿನಗಳಲ್ಲಿ ಹೀಗಾಗದಂತೆ ಕ್ರಮ ಕೈಗೊಳ್ಳಲಾಗುವುದು. ಈಬಗ್ಗೆ ಕೂಡಲೇ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದರು. ಇನ್ನು ವಿವಿಧ ಪೊಲೀಸ್ ಠಾಣೆ ಹಾಗೂ ಅರಣ್ಯ ಇಲಾಖೆ ಕಚೇರಿಗಳಿಗೆ ಮಾಹಿತಿ ರವಾನಿಸಿದ್ದರು.
ನವಿಲು ಕೊಂಡ ಓರ್ವ ಆರೋಪಿ ಬಂಧನ: ಇನ್ನು ಮಾಂಜರಿ ಗ್ರಾಮದಲ್ಲಿ ನವಿಲುಗಳ ಮಾರಣಹೋಮ ಪ್ರಕರಣದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಓರ್ವ ಆರೋಪಿಯನ್ನ ಬಂಧಿಸಿದ್ದಾರೆ. ಇಟ್ಟಿಗೆ ಖಾರ್ನೆಯಲ್ಲಿ ಕೆಲಸ ಮಾಡುವ ಮಂಜುನಾಥ ಪವಾರ ಬಂಧಿತ ಆರೋಪಿಯಾಗಿದ್ದಾರೆ. ಆದರೆ, ಈತನ ಸಹಚರ ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. ನಿನ್ನೆ ನವಿಲುಗಳನ್ನ ಹಿಡಿಯಲು ವಿಷಪೂರಿತ ಕಾಳು ಹಾಕಿದ್ದರು. ನವಿಲಿನ ಮಾಂಸಕ್ಕಾಗಿ ವಿಷಪೂರಿತ ಕಾಳು ಹಾಕಿದ್ದು, ಅದನ್ನು ತಿಂದು ಒಟ್ಟು 11 ನವಿಲುಗಳ ಸಾವನ್ನಪ್ಪಿದ್ದವು.
ನವಿಲು ಕೊಂದರೆ ಶಿಕ್ಷೆ ಏನು ಗೊತ್ತಾ? ಭಾರತೀಯ ಅರಣ್ಯ ಕಾಯಿದೆ - 1972ರ ಪ್ರಕಾರ ನವಿಲು ನಮ್ಮ ರಾಷ್ಟ್ರದ ಪಕ್ಷಿಯಾಗಿದೆ. ನವಿಲನ್ನು ಕೊಲ್ಲುವುದು ಅಥವಾ ಬೇಟೆಯಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ನವಿಲನ್ನು ಬೇಟೆಯಾಡುವುದು ಅಥವಾ ಯಾವುದೇ ರೀತಿಯಲ್ಲಿ ಕೊಂದರೆ ಕನಿಷ್ಠ 3-5 ವರ್ಷಗಳ ಜೈಲು ಶಿಕ್ಷೆ ಮತ್ತು ರೂ. 50,000/- ದಂಡವನ್ನು ಸಹ ವಿಧಿಸಲಾಗುವುದು. ಇನ್ನು ನವಿಲುಗಳನ್ನು ಮಾಂಸಕ್ಕಾಗಿ ಹಾಗೂ ಅವುಗಳ ಗರಿಗಳಿಗಾಗಿ ಬೇಟೆ ಆಡುತ್ತಿದ್ದು, ಅರಣ್ಯ ಇಲಾಖೆ ಇಂಥವರ ಮೇಲೆ ಹದ್ದಿನ ಕಣ್ಣಿಟ್ಟಿದೆ.