ಶವವಿಟ್ಟು ಪ್ರೊಟೆಸ್ಟ್: ಡಿಸಿ ಮನವೊಲಿಕೆ ಬಳಿಕ ಆಗಮಿಸಿದ ರೈತ ಮುಖಂಡರಿಂದ ಹೈಡ್ರಾಮಾ

By Suvarna News  |  First Published Jun 27, 2022, 7:30 PM IST

• ಏಣಗಿ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗಲು ದಾರಿ ಇಲ್ಲದ್ದಕ್ಕೆ ಆಕ್ರೋಶ
• ರೊಚ್ಚಿಗೆದ್ದ ಗ್ರಾಮಸ್ಥರಿಂದ ಡಿಸಿ ಕಚೇರಿ ಎದುರು ಶವವಿಟ್ಟು ಪ್ರೊಟೆಸ್ಟ್
• ಡಿಸಿ ಮನವೊಲಿಕೆ ಬಳಿಕ ಆಗಮಿಸಿದ ರೈತ ಮುಖಂಡರಿಂದ ಹೈಡ್ರಾಮಾ


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ, (ಜೂನ್.27):
ಸವದತ್ತಿ ತಾಲೂಕಿನ ಏಣಗಿ ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳಲು ರಸ್ತೆ ಇರದ ಹಿನ್ನೆಲೆ ಡಿಸಿ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ ನಡೆಸಲಾಗಿದೆ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇಂದು ಬೆಳ್ಳಂಬೆಳಗ್ಗೆ ಮೃತದೇಹವಿಟ್ಟು  ಸಂಬಂಧಿಕರು, ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

 ಕಳೆದ ಹಲವು ವರ್ಷಗಳಿಂದಲೂ ಸ್ಮಶಾನಕ್ಕೆ ತೆರಳಲು ಹಾದಿ ಇರದ ಕಾರಣ ಗ್ರಾಮಸ್ಥರು ರೋಸಿ ಹೋಗಿದ್ದರು. ನಿನ್ನೆ ಏಣಗಿ ಗ್ರಾಮದಲ್ಲಿ 65 ವರ್ಷದ ಅಬ್ದುಲ್ ಖಾದರ್ ಮಿಶ್ರಿಕೋಟಿ ಮೃತಪಟ್ಟಿದ್ದರು. ಆದರೆ ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳಲು ಹಾದಿ ಇರದ ಕಾರಣ ಮೃತರ ಸಂಬಂಧಿಕರು ಹಾಗೂ ಗ್ರಾಮಸ್ಥರು ಮೃತದೇಹವನ್ನು ಡಿಸಿ ಕಚೇರಿ ಆವರಣದೊಳಗೆ ಇಟ್ಟು ಪ್ರತಿಭಟನೆ ನಡೆಸಿದರು.‌ ಪ್ರತಿಭಟನೆಗೆ ಗ್ರಾಮದ ರೈತ ಮುಖಂಡರು ಸಹ ಸಾಥ್ ನೀಡಿದ್ದರು.

Tap to resize

Latest Videos

ಬೆಳಗಾವಿ ಅಪಘಾತ: ಮೃತ ಕಾರ್ಮಿಕರ ಕುಟುಂಬಗಳಿಗೆ ತಲಾ 7 ಲಕ್ಷ ಪರಿಹಾರ

 ಈ ವೇಳೆ ಮಾತನಾಡಿದ ಮೃತರ ಸಂಬಂಧಿ ಇಬ್ರಾಹಿಂ, 'ಏಣಗಿ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಎರಡೂ ಸಮುದಾಯದ ಸ್ಮಶಾನಗಳಿಗೆ ತೆರಳಲು ಹಾದಿ ಇಲ್ಲ. ರೈತರು ತಮ್ಮ ಹೊಲದಲ್ಲಿ ಹಾದು ಹೋಗಲು ಬಿಡುತ್ತಿಲ್ಲ. ಊರಿನಲ್ಲಿ ಯಾರೇ ಮೃತಪಟ್ಟರೂ ಇದೇ ಸಮಸ್ಯೆ ಆಗುತ್ತಿದೆ. ತಹಶಿಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಸೇರಿ ಎಲ್ಲರಿಗೂ ಮನವಿ ಮಾಡಿ ರೋಸಿ ಹೋಗಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಇಂದು ನನ್ನ ಮಾವನ ಮೃತದೇಹ ತಗೆದುಕೊಂಡು ಬಂದು ಪ್ರತಿಭಟನೆ ಮಾಡುತ್ತಿದ್ದೇನೆ. ಮನೆಯಲ್ಲಿ ಎಲ್ಲ ಸಂಬಂಧಿಕರೂ ಸೇರಿದ್ದಾರೆ ನಾವಿಲ್ಲಿ ಕುಳಿತಿದ್ದೇವೆ ಎಂದು ಕಣ್ಣೀರಿಟ್ಟರು. ಒಂದು ವೇಳೆ ಸ್ಮಶಾನಕ್ಕೆ ತೆರಳಲು ಹಾದಿಯ ವ್ಯವಸ್ಥೆ ಮಾಡದೇ ಹೋದರೆ, ಡಿಸಿ ಕಚೇರಿ ಆವರಣದಲ್ಲಿಯೇ ಶವ ಹೂಳುತ್ತೇವೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಸಿ ಮನವೊಲಿಕೆ ಸಫಲ, ಪ್ರತಿಭಟನೆ ವಾಪಸ್
ಪ್ರತಿಭಟನಾ ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ಸದಾಶಿವ ಕಟ್ಟಿಮನಿ, ಸಿಪಿಐಗಳಾದ ನಿಂಗನಗೌಡ ಪಾಟೀಲ್, ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್ಐ ವಿಠ್ಠಲ್ ಹಾವಣ್ಣವರ್ ಸೇರಿ ಎಲ್ಲರೂ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸದರಾದರೂ ಅದು ವಿಫಲವಾಯಿತು‌. ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಅಶೋಕ್ ದುಡಗುಂಟಿ ಆಗಮಿಸಿದರೂ ಪ್ರತಿಭಟನಾಕಾರರು ಸ್ಥಳಕ್ಕೆ ಡಿಸಿ ಆಗಮಿಸುವಂತೆ ಪಟ್ಟು ಹಿಡಿದರು‌. ಕೊನೆಗೆ ಸ್ಥಳಕ್ಕೆ ಆಗಮಿಸಿದ ಡಿಸಿ ನಿತೇಶ್ ಪಾಟೀಲ್ ಒಂದು ವಾರದೊಳಗೆ ಸ್ಮಶಾನಕ್ಕೆ ತೆರಳಲು ಹಾದಿಯ ವ್ಯವಸ್ಥೆ ಮಾಡೋದಾಗಿ ತಿಳಿಸಿದರು‌. ಈಗಾಗಲೇ ಏಣಗಿ ಗ್ರಾಮಕ್ಕೆ ಸವದತ್ತಿ ತಹಶಿಲ್ದಾರ್, ಬೈಲಹೊಂಗಲ ಉಪವಿಭಾಗಾಧಿಕಾರಿ ಭೇಟಿ ನೀಡಿದ್ದಾರೆ. ಅಲ್ಲಿ ಹಾದಿ ಮಾಡಲು‌ ಇಬ್ಬರು ರೈತರು ತಕರಾರು ಮಾಡುತ್ತಿದ್ದಾರೆ. ನಾನು ಬುಧವಾರ ಗ್ರಾಮಕ್ಕೆ ಆಗಮಿಸುತ್ತೇನೆ. ಈಗ ಮೃತದೇಹ ತಗೆದುಕೊಂಡು ಹೋಗಿ ಅಂತಾ ಮನವಿ ಮಾಡಿದರು. ಇದಾದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ವಾಪಸ್ ಪಡೆದು ಶವವನ್ನು ಗ್ರಾಮಕ್ಕೆ ತಗೆದುಕೊಂಡು ಹೋಗಲು ಮುಂದಾದರು.

ಡಿಸಿ ಮನವೊಲಿಕೆ ಬಳಿಕ ಬಂದ ರೈತ ಮುಖಂಡರಿಂದ ಹೈಡ್ರಾಮಾ
ಇನ್ನು ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಮನವೊಲಿಕೆ ಬಳಿಕ ಪ್ರತಿಭಟನೆ ವಾಪಸ್ ಪಡೆದು ಮೃತದೇಹ ತಗೆದುಕೊಂಡು ಹೋಗುವ ವೇಳೆ ಸ್ಥಳಕ್ಕೆ ಆಗಮಿಸಿದ ರೈತ ಮುಖಂಡ ಅಶೋಕ್ ಯಮಕನಮರಡಿ, ಜಯಶ್ರೀ ಗುರವನ್ನವರ್ ಬೇಡಿಕೆ ಈಡೇರೋವರೆಗೆ ಮೃತದೇಹ ಇಲ್ಲೇ ಇರಲಿ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು. 

ಇನ್ನು ಸ್ಮಶಾನಕ್ಕೆ ತೆರಳುವ ಹಾದಿಗಾಗಿ ರೈತರ ಜಮೀನು ಭೂಸ್ವಾಧೀನ ಮಾಡಿಕೊಳ್ಳಬೇಕಿದೆ, ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತೆ. ಹೀಗಾಗಿ ರೈತರು ಜಮೀನು ನೀಡಲು ಒಪ್ಪಿದರೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ದರ ನಿಗದಿ ಮಾಡಿ ಖರೀದಿಗೂ ಅವಕಾಶವಿದೆ ಎಂದು ಡಿಸಿ ನಿತೇಶ್ ಪಾಟೀಲ್ ಹೇಳಿದ್ದು ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ ಎಂಬುದು ಗ್ರಾಮಸ್ಥರ ಆಗ್ರಹ.

click me!