ಕಬ್ಬಿನ ದರ ನಿಗದಿಗಾಗಿ ರೈತರ 12 ದಿನದ ಪ್ರತಿಭಟನೆ ಸುಖಾಂತ್ಯ: ಆದ್ರೆ ಈ ಒಂದು ಕಾರಣಕ್ಕೆ ಹೋರಾಟ ಮುಂದುವರಿಯುತ್ತೆ!

Kannadaprabha News   | Kannada Prabha
Published : Nov 06, 2026, 08:16 AM IST
Belagavi sugarcane farmers protest end

ಸಾರಾಂಶ

ಬೆಳಗಾವಿಯಲ್ಲಿ ಕಬ್ಬಿಗೆ ನ್ಯಾಯಯುತ ಬೆಲೆ ಕೋರಿ ನಡೆಯುತ್ತಿದ್ದ ರೈತರ 12 ದಿನಗಳ ಪ್ರತಿಭಟನೆ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ. ಪ್ರತಿ ಟನ್‌ಗೆ ₹3,600 ದರ ನಿಗದಿಯಾಗಿದ್ದು, ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭ ಮಾಡಲಿವೆ. ಆದರೆ, ಸರ್ಕಾರ ₹1,000 ಪ್ರೋತ್ಸಾಹಧನ ನೀಡದಿದ್ದರೆ ಅಧಿವೇಶನದ ವೇಳೆ ಮತ್ತೆ ಹೋರಾಟ?

ಬೆಳಗಾವಿ (ನ.6) : ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಕಳೆದ 12 ದಿನಗಳಿಂದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ನಡೆಯುತ್ತಿದ್ದ ರೈತರ ಹೋರಾಟಕ್ಕೆ ಕೊನೆಗೂ ತಾತ್ಕಾಲಿಕ ತೆರೆ ಬಿದ್ದಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೀಡಿದ ಭರವಸೆ ಹಾಗೂ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆಯ ಫಲವಾಗಿ ರೈತ ಮುಖಂಡರು ಪ್ರತಿಭಟನೆ ಹಿಂಪಡೆಯುವ ನಿರ್ಧಾರವನ್ನು ಅಧಿಕೃತವಾಗಿ ಗುರುವಾರ ಪ್ರಕಟಿಸಿದ್ದಾರೆ.

ಆದರೆ, ರಾಜ್ಯ ಸರ್ಕಾರ ಪ್ರೋತ್ಸಾಹಧನವನ್ನು ₹1000 ನೀಡುವವರೆಗೂ ಹೋರಾಟ ಮಾತ್ರ ಮುಂದುವರಿಯುತ್ತದೆ. ಮಾತ್ರವಲ್ಲ ನ.6ರಿಂದ ಕಬ್ಬು ಕಾರ್ಖಾನೆಗಳನ್ನು ಆರಂಭಿಸಲು ಯಾವ ರೈತರೂ ಅಡ್ಡಿಪಡಿಸದಂತೆ ರೈತ ಹೋರಾಟ ನಾಯಕತ್ವ ವಹಿಸಿದ್ದ ಚೂನಪ್ಪ ಪೂಜೇರಿ ಮನವಿ ಮಾಡಿದ್ದಾರೆ.

ನಗರದಲ್ಲಿ ಗುರುವಾರ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ರೈತ ಮುಖಂಡರು ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬಂದರು. ಜಿಲ್ಲಾಡಳಿತದಿಂದ ಒಪ್ಪಂದದ ದಾಖಲೆ ಪಡೆದುಕೊಂಡ ಬಳಿಕ ಪ್ರತಿಭಟನೆ ಹಿಂಪಡೆಯುವುದಾಗಿ ರೈತ ಮುಖಂಡರು ಘೋಷಿಸಿದರು.

ಇಂದಿನಿಂದ ಕಾರ್ಖಾನೆ ಆರಂಭ:

ಸಕ್ಕರೆ ಕಾರ್ಖಾನೆಗಳು ಮೊದಲ ಹಂತದಲ್ಲಿ ಪ್ರತಿ ಟನ್ ಕಬ್ಬಿಗೆ ₹3,600 ದರ ನೀಡಲು ಒಪ್ಪಿಕೊಂಡಿವೆ. ಈ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಹಿಂಪಡೆದು ಸಕ್ಕರೆ ಕಾರ್ಖಾನೆಗಳ ಕಾರ್ಯಾರಂಭಕ್ಕೆ ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಚೂನಪ್ಪ ಪೂಜೇರಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರು ಈ ವಿಷಯದಲ್ಲಿ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಹೀಗಾಗಿ ಶುಕ್ರವಾರದಿಂದ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭ ಮಾಡಲಿವೆ. ಗುರ್ಲಾಪುರದಲ್ಲಿ ರೈತರೊಂದಿಗೆ ಸಮಗ್ರವಾಗಿ ಚರ್ಚಿಸಿ ನಿರ್ಧಾರವನ್ನು ಮನವರಿಕೆ ಮಾಡಿಕೊಡಲಾಗುವುದು. ಈಗಿನಿಂದಲೇ ಹೋರಾಟವನ್ನು ಹಿಂಪಡೆಯಲಾಗುತ್ತಿದೆ ಎಂದರು.

ಅಧಿವೇಶನಕ್ಕೂ ಮುನ್ನ ಜಾರಿಗೆ ಒತ್ತಾಯ:

ರೈತರ ಒಗ್ಗಟ್ಟಿನ ಹೋರಾಟದಿಂದ ಮೊದಲ ಹಂತದಲ್ಲಿ ₹300 ಹೆಚ್ಚುವರಿ ದರ ದೊರೆತಿದೆ. ಆದರೆ, ಇದರಿಂದ ಸಂಪೂರ್ಣ ತೃಪ್ತರಾಗಿಲ್ಲ. ರಾಜ್ಯ ಸರ್ಕಾರ ಘೋಷಿಸಬೇಕೆಂದು ಒತ್ತಾಯಿಸಿರುವ ಪ್ರತಿ ಟನ್ ಕಬ್ಬಿಗೆ ₹1,000 ಪ್ರೋತ್ಸಾಹಧನ ದೊರೆಯುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಬೆಳಗಾವಿ ಅಧಿವೇಶನಕ್ಕೆ ಬರುವ ಮುನ್ನವೇ ₹1,000 ಪ್ರೋತ್ಸಾಹಧನ ಘೋಷಿಸಬೇಕು. ಈ ಬೇಡಿಕೆ ಈಡೇರದಿದ್ದರೆ ಅಧಿವೇಶನದ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ಲಕ್ಷಾಂತರ ರೈತರನ್ನು ಸಂಘಟಿಸಿ ಮತ್ತೊಂದು ಹಂತದ ಹೋರಾಟ ನಡೆಸಲಾಗುವುದು. ನ.26ರವರೆಗೆ ಎಂಎಸ್‌ಪಿ ವಿಚಾರವಾಗಿ ಸರ್ಕಾರಕ್ಕೆ ಗಡುವು ನೀಡಲಾಗಿದೆ. ಅಷ್ಟರೊಳಗೆ ಬೇಡಿಕೆ ಈಡೇರದಿದ್ದರೆ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದರು.

ಸಕ್ಕರೆ ಮಾರಾಟದ ದರ ಹೆಚ್ಚಳವಾದಂತೆ ರೈತರಿಗೆ ನೀಡುವ ಕಬ್ಬಿನ ದರದಲ್ಲಿಯೂ ಹೆಚ್ಚಳವಾಗಬೇಕು. ಸಕ್ಕರೆ ಬೆಲೆ ಕೆಜಿಗೆ ₹45ಕ್ಕೆ ನಿಗದಿಯಾದ ಹಿನ್ನೆಲೆಯಲ್ಲಿ ₹3,600 ಮೊದಲ ಕಂತಿನ ದರ ಒಪ್ಪಿಕೊಳ್ಳಲಾಗಿದೆ. ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಏರಿಕೆಯಾದರೆ ರೈತರಿಗೆ ಹೆಚ್ಚುವರಿ ದರ ದೊರೆಯುವ ಸಾಧ್ಯತೆಯಿದೆ. ಕೆಲವು ಕಾರ್ಖಾನೆಗಳು ₹3,650 ನೀಡಲೂ ಮುಂದಾಗಿವೆ. ರೈತರಿಗೆ ಮತ್ತಷ್ಟು ತೊಂದರೆಯಾಗಬಾರದು ಎಂಬ ಕಾರಣಕ್ಕೆ ಮೊದಲ ಹಂತದ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.

ಕಳೆದ ಎರಡು ತಿಂಗಳಿಂದ ವಿವಿಧ ಹಂತಗಳಲ್ಲಿ ನಡೆದ ಹೋರಾಟ, ಗುರ್ಲಾಪುರದಲ್ಲಿ ಮತ್ತೆ ತೀವ್ರಗೊಂಡ ಹೋರಾಟದ ಪರಿಣಾಮವಾಗಿ ಈ ಒಪ್ಪಂದ ಸಾಧ್ಯವಾಗಿದೆ ಎಂದು ತಿಳಿಸಿದರು.

ರೈತರು ಯಾವುದೇ ರಾಜಕೀಯ ಪಕ್ಷದ ಪರವಾಗಿಲ್ಲ. ರೈತರ ಹಿತಾಸಕ್ತಿಯೇ ಮುಖ್ಯ. ಬರಗಾಲದ ಪರಿಸ್ಥಿತಿಯಲ್ಲಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬಾರದು. ಹೀಗಾಗಿ ಸದ್ಯಕ್ಕೆ ಪ್ರತಿಭಟನೆ ಹಿಂಪಡೆಯುವ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಸರ್ಕಾರ ನೀಡಬೇಕಾದ ಪ್ರೋತ್ಸಾಹಧನದ ವಿಚಾರದಲ್ಲಿ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.

ಸಭೆಯಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.

ಹೋರಾಟ ಸ್ಥಗಿತ

ಜಿಲ್ಲಾ ಉಸ್ತುವಾರಿ ಸಚಿವರು ಈ ವಿಷಯದಲ್ಲಿ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಹೀಗಾಗಿ ಶುಕ್ರವಾರದಿಂದ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭ ಮಾಡಲಿವೆ. ಗುರ್ಲಾಪುರದಲ್ಲಿ ರೈತರೊಂದಿಗೆ ಸಮಗ್ರವಾಗಿ ಚರ್ಚಿಸಿ ನಿರ್ಧಾರವನ್ನು ಮನವರಿಕೆ ಮಾಡಿಕೊಡಲಾಗುವುದು. ಈಗಿನಿಂದಲೇ ಹೋರಾಟವನ್ನು ಹಿಂಪಡೆಯಲಾಗುತ್ತಿದೆ.

- ಚೂನಪ್ಪ ಪೂಜೇರಿ, ರೈತ ಮುಖಂಡ

ಒಪ್ಪಂದದಲ್ಲಿ ಏನಿದೆ?

  • ಮೊದಲ ಕಂತಲ್ಲಿ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ₹3500 ಮುಂಗಡ ಪಾವತಿ
  • ಹಂಗಾಮು ಮುಕ್ತಾಯಗೊಂಡ ನಂತರ ಟನ್‌ಗೆ ₹100 ಹೆಚ್ಚುವರಿ ಪಾವತಿ
  • ಅಂತಿಮ ಕಂತಲ್ಲಿ ಸಕ್ಕರೆ ದರ ಹೆಚ್ಚಾದಲ್ಲಿ ಹೆಚ್ಚುವರಿ ಆದಾಯದ ಹಂಚಿಕೆ
  • ಹೆಚ್ಚುವರಿ ಆದಾಯದಲ್ಲಿ ಶೇ.75ರಷ್ಟು ರೈತರಿಗೆ, ಶೇ.25ರಷ್ಟು ಕಾರ್ಖಾನೆಗೆ
  • ಸರ್ಕಾರದಿಂದ 1000 ಪ್ರೋತ್ಸಾಹಧನದ ಹೋರಾಟ ತಾತ್ಕಾಲಿಕ ಸ್ಥಗಿತ
  • ಬೆಳಗಾವಿ ಅಧಿವೇಶನದೊಳಗೆ ನೆರವು ಘೋಷಿಸಿದ್ರೆ ಮತ್ತೆ ಹೋರಾಟ

PREV
Read more Articles on
click me!

Recommended Stories

ಅನ್ನಭಾಗ್ಯ ಅಕ್ಕಿ ಆಫ್ರಿಕಾಗೆ ರಫ್ತು ದೃಢ! ಮುಂಬೈ, ಗುಜರಾತ್‌ ಬಂದರು ಮೂಲಕ ರವಾನೆ, ಸಿಐಡಿ 4000 ಪುಟಗಳ ಚಾರ್ಜ್‌ಶೀಟ್‌
ಹೊಸನಗರದ ಹುಡುಗನ ಅಸಾಧಾರಣ ಸಾಧನೆ.. ಭಾರತದ ಯುವ EdTech ಉದ್ಯಮಿಯಾಗಿ ಬೆಳೆದ ಕನ್ನಡಿಗ ಸೂರಜ್ ಶೆಟ್ಟಿ!