
ಬೆಳಗಾವಿ (ಜೂ.11): ಗಡಿನಾಡು ಬೆಳಗಾವಿಯ ಕನ್ನಡ ಸ್ವಾಭಿಮಾನಕ್ಕೆ ಸಂಬಂಧಿಸಿದ ಮಹತ್ವದ ವಿಷಯವೊಂದು ಮತ್ತೆ ಆಡಳಿತದ ನಿರ್ಲಕ್ಷ್ಯದ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಠರಾವ್ ಅಂಗೀಕಾರಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವಂತೆ ನೀಡಿದ್ದ ಸೂಚನೆಯೇ ಪಾಲನೆಯಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ(Satish Jarkiholi) ಸಮ್ಮುಖದಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ವಿಚಾರ ಪ್ರಮುಖವಾಗಿ ಚರ್ಚೆಗೆ ಬಂದಿತ್ತು. ಸಭೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ, ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಕನ್ನಡಪರ ಸಂಘಟನೆಗಳು ಸಲ್ಲಿಸಿರುವ ಮನವಿಗಳು, ಪಾಲಿಕೆಯ ವಿಳಂಬ ಧೋರಣೆ ಹಾಗೂ ಠರಾವ್ ಅಂಗೀಕಾರದ ಕುರಿತ ಚರ್ಚೆಯ ವೇಳೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಪಾಲಿಕೆ ಆಯುಕ್ತರಿಗೆ, ಇದುವರೆಗೆ ನಡೆದಿರುವ ಎಲ್ಲ ಬೆಳವಣಿಗೆಗಳ ಕುರಿತು ನನಗೆ ಲಿಖಿತ ವರದಿ ಕಳುಹಿಸಿ. ಅದರ ಆಧಾರದ ಮೇಲೆ ಅಗತ್ಯ ನಿರ್ದೇಶನ ನೀಡುತ್ತೇನೆ ಎಂದು ಸ್ಪಷ್ಟ ಸೂಚನೆ ನೀಡಿದ್ದರು ಎನ್ನಲಾಗಿದೆ.
ಸಭೆಯಲ್ಲಿ ಈ ಸೂಚನೆಯನ್ನು ಒಪ್ಪಿಕೊಂಡಿದ್ದ ಪಾಲಿಕೆ ಅಧಿಕಾರಿಗಳು, ನಂತರದ ದಿನಗಳಲ್ಲಿ ಯಾವುದೇ ಅಧಿಕೃತ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿಲ್ಲ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ಸಭೆ ನಡೆದು ಹಲವು ದಿನಗಳು ಕಳೆದರೂ ವರದಿ ಕಳುಹಿಸದಿರುವುದು ಆಡಳಿತಾತ್ಮಕ ನಿರ್ಲಕ್ಷ್ಯವೇ ಅಥವಾ ಉದ್ದೇಶಪೂರ್ವಕ ವಿಳಂಬವೇ ಎಂಬ ಪ್ರಶ್ನೆ ಮೂಡಿಸಿದೆ.
ಸಚಿವ ಸತೀಶ ಜಾರಕಿಹೊಳಿ ಸಮ್ಮುಖದಲ್ಲಿ, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರ ಉಪಸ್ಥಿತಿಯಲ್ಲಿ ನಡೆದ ಸಭೆಯ ನಿರ್ಧಾರವೇ ಅನುಷ್ಠಾನವಾಗದಿದ್ದರೆ ಆಡಳಿತ ವ್ಯವಸ್ಥೆಯ ಗಂಭೀರತೆಯ ಬಗ್ಗೆ ಪ್ರಶ್ನೆಗಳು ಉದ್ಭವಿಸುವುದು ಸಹಜ. ಸಭೆಯಲ್ಲಿ ಒಪ್ಪಿಗೆ ಸೂಚಿಸಿ ಬಳಿಕ ಮೌನ ವಹಿಸುವುದು ಅಧಿಕಾರಿಗಳ ಜವಾಬ್ದಾರಿಯುತ ನಡವಳಿಕೆಯೇ ಎಂಬ ಪ್ರಶ್ನೆ ಕನ್ನಡಪರ ವಲಯದಲ್ಲಿ ಕೇಳಿಬರುತ್ತಿದೆ.
ಕನ್ನಡಿಗರ ಭಾವನೆಗೆ ನೇರವಾಗಿ ಸಂಬಂಧಿಸಿದ ವಿಷಯದಲ್ಲಿ ಆಡಳಿತದ ಈ ನಿರ್ಲಕ್ಷ್ಯ ಕನ್ನಡ ಸಂಘಟನೆಗಳ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ.ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ಯಾವುದೇ ಹೊಸ ರಾಜಕೀಯ ಘೋಷಣೆಯಲ್ಲ. ಅದು ಕರ್ನಾಟಕ ಸರ್ಕಾರದ ಅಧಿಕೃತ ನಿಲುವು. ರಾಜ್ಯದ ಎರಡನೇ ರಾಜಧಾನಿಯಾಗಿ ಬೆಳಗಾವಿ ಈಗಾಗಲೇ ಗುರುತಿಸಿಕೊಂಡಿದೆ. ಸುವರ್ಣ ವಿಧಾನಸೌಧ ಇಲ್ಲಿದೆ. ರಾಜ್ಯ ಸರ್ಕಾರದ ಎಲ್ಲ ಆಡಳಿತಾತ್ಮಕ ದಾಖಲೆಗಳಲ್ಲೂ ಬೆಳಗಾವಿ ಕರ್ನಾಟಕದ ಭಾಗವಾಗಿಯೇ ಉಲ್ಲೇಖವಾಗಿದೆ. ಹಾಗಿದ್ದರೂ ಇದೇ ವಿಷಯವನ್ನು ಮಹಾನಗರ ಪಾಲಿಕೆಯಲ್ಲಿ ಠರಾವಿನ ರೂಪದಲ್ಲಿ ಅಂಗೀಕರಿಸಲು ಇಷ್ಟೊಂದು ವಿಳಂಬ ಮಾಡುತ್ತಿರುವುದು ಕನ್ನಡಪರ ಸಂಘಟನೆಗಳ ಅನುಮಾನಕ್ಕೆ ಕಾರಣವಾಗಿದೆ. ಹಲವು ಬಾರಿ ಮನವಿ, ಪ್ರತಿಭಟನೆ ಹಾಗೂ ಒತ್ತಾಯಗಳಾದರೂ ಪಾಲಿಕೆ ಸಭೆಯಲ್ಲಿ ವಿಷಯ ಕೈಗೆತ್ತಿಕೊಳ್ಳದಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕಳೆದ ಹಲವು ತಿಂಗಳುಗಳಿಂದ ಕನ್ನಡಪರ ಸಂಘಟನೆಗಳು ಪ್ರಾದೇಶಿಕ ಆಯುಕ್ತರ ಕಚೇರಿಗೂ ಮನವಿ ಸಲ್ಲಿಸುತ್ತಿವೆ. ಆದರೆ ಆ ಮನವಿಗಳ ಕುರಿತು ಯಾವ ಕ್ರಮ ಕೈಗೊಳ್ಳಲಾಗಿದೆ? ಪಾಲಿಕೆಯಿಂದ ಸ್ಪಷ್ಟನೆ ಕೇಳಲಾಗಿದೆಯೇ? ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆಯೇ? ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಾರ್ವಜನಿಕ ವಲಯಕ್ಕೆ ಬಂದಿಲ್ಲ. ಪ್ರಾದೇಶಿಕ ಆಯುಕ್ತರ ಕಚೇರಿ ಕೇವಲ ಮನವಿ ಸ್ವೀಕರಿಸುವ ಕೇಂದ್ರವಾಗದೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಆಡಳಿತಾತ್ಮಕ ವೇದಿಕೆಯಾಗಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಬೆಳಗಾವಿ ಕೇವಲ ಗಡಿ ಜಿಲ್ಲೆಯಲ್ಲ. ಅದು ಕರ್ನಾಟಕದ ಭಾಷಾ ಸ್ವಾಭಿಮಾನ ಮತ್ತು ಐತಿಹಾಸಿಕ ಹೋರಾಟದ ಪ್ರತೀಕ. ಇಲ್ಲಿ ಕನ್ನಡಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯವೂ ಭಾವನಾತ್ಮಕ ಮಹತ್ವ ಹೊಂದಿದೆ.ಜಿಲ್ಲಾಧಿಕಾರಿಯವರ ಸೂಚನೆಯೇ ಪಾಲನೆಯಾಗದಿರುವುದು ಆಡಳಿತದ ಸಮನ್ವಯದ ಕೊರತೆಯನ್ನು ಬಿಂಬಿಸುತ್ತಿದೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ, ಪಾಲಿಕೆಯಿಂದ ಜಿಲ್ಲಾಧಿಕಾರಿಗೆ ವರದಿ ಏಕೆ ಸಲ್ಲಿಸಲಿಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ಪಡೆಯಬೇಕು. ಜೊತೆಗೆ ಕನ್ನಡಪರ ಸಂಘಟನೆಗಳ ಮನವಿಗಳ ಕುರಿತು ಪ್ರಾದೇಶಿಕ ಆಯುಕ್ತರ ಕಚೇರಿ ಕೈಗೊಂಡಿರುವ ಕ್ರಮಗಳನ್ನೂ ಸಾರ್ವಜನಿಕರ ಮುಂದಿಡಬೇಕು. ಇಲ್ಲದಿದ್ದರೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಸರಳವಾದ ಠರಾವೇ ಆಡಳಿತಾತ್ಮಕ ಗೊಂದಲ ಮತ್ತು ನಿರ್ಲಕ್ಷ್ಯದ ಸಂಕೇತವಾಗಿ ಉಳಿಯುವ ಅಪಾಯವಿದೆ.