ಕಂಟಕದ ಪರಿಹಾರಕ್ಕೆ ಪೂಜೆ ನೆರವೇರಿಸುವುದಾಗಿ ಗೃಹಿಣಿಗೆ ಮಾತಿನ ಮೋಡಿ ಮಾಡಿ 2.2 ಲಕ್ಷ ರು. ಮೌಲ್ಯದ ಚಿನ್ನಾಭರಣವನ್ನು ಕಿಡಿಗೇಡಿ ಯುವತಿಯೊಬ್ಬಳು ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು [ಆ.11] : ನಿನ್ನ ಗಂಡನಿಗೆ ಇರುವ ಕಂಟಕದ ಪರಿಹಾರಕ್ಕೆ ಪೂಜೆ ನೆರವೇರಿಸುವುದಾಗಿ ಗೃಹಿಣಿಗೆ ಮಾತಿನ ಮೋಡಿ ಮಾಡಿ 2.2 ಲಕ್ಷ ರು. ಮೌಲ್ಯದ ಚಿನ್ನಾಭರಣವನ್ನು ಕಿಡಿಗೇಡಿ ಯುವತಿಯೊಬ್ಬಳು ದೋಚಿರುವ ಘಟನೆ ರಾಜಗೋಪಾಲ ನಗರ ಸಮೀಪ ನಡೆದಿದೆ.
ಕೆಂಪೇಗೌಡ ಲೇಔಟ್‌ನ ಶಾಂತಮ್ಮ ಎಂಬುವವರೇ ವಂಚನೆಗೆ ಒಳಗಾಗಿದ್ದಾರೆ. ಗುರುವಾರ ಬೆಳಗ್ಗೆ ಅವರು ಮನೆಯಲ್ಲಿದ್ದಾಗ ಬಂದಿದ್ದ 18ರಿಂದ 20 ವರ್ಷದ ಅಪರಿಚಿತ ಮಹಿಳೆ ಈ ವಂಚನೆ ಎಸಗಿದ್ದಾಳೆ. ಗಂಡನಿಗೆ ಅಪಾಯವಿದೆ ಎಂದು ಬೆದರಿಸಿದ ಆರೋಪಿ, ಆ ಕಂಟಕ ನಿವಾರಣೆಗೆ ಪೂಜೆ ನೆರವೇರಿಸುವುದಾಗಿ ಹೇಳಿ ಶಾಂತಮ್ಮ ಅವರಿಂದ 80 ಗ್ರಾಂ ಚಿನ್ನಾಭರಣ ಪಡೆದಿದ್ದಾಳೆ. ಬಳಿಕ ಬಾಕ್ಸ್‌ನಲ್ಲಿ ಆಭರಣ ಇಟ್ಟು ಪೂಜೆ ಮಾಡಿದ ಆಕೆ, ಎರಡು ಗಂಟೆಗಳ ಬಳಿಕ ಬಾಕ್ಸ್ ತೆರೆಯುವಂತೆ ತಿಳಿಸಿ ಹೋಗಿದ್ದಳು. ಅದರಂತೆ ಬಾಕ್ಸ್ ತೆರೆದಾಗ ಆಭರಣ ಇಲ್ಲದ್ದನ್ನು ನೋಡಿ ಶಾಂತಮ್ಮ ಬೆಸ್ತು ಬಿದ್ದಿದ್ದಾರೆ.
ಭಿಕ್ಷೆ ಕೇಳಿ ಬಂದಳು ವಂಚಕಿ:
ಶಾಂತಮ್ಮ ಅವರ ಪತಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಕುಟುಂಬದ ಜತೆ ಕೆಂಪೇಗೌಡ ಲೇಔಟ್‌ನಲ್ಲಿ ನೆಲೆಸಿದ್ದಾರೆ. ಎಂದಿನಂತೆ ಗುರುವಾರ ಬೆಳಗ್ಗೆ ಕೆಲಸದ ನಿಮಿತ್ತ ಪತಿ ತೆರಳಿದ ಬಳಿಕ ಶಾಂತಮ್ಮ ಏಕಾಂಗಿಯಾಗಿದ್ದರು. ಆಗ ಅವರ ಮನೆಗೆ ಆರಿಶಿನ ಬಣ್ಣದ ಸೀರೆ ಧರಿಸಿದ್ದ ಅಪರಿಚಿತ ಮಹಿಳೆ ಬಂದಿದ್ದಾಳೆ. ಮೊದಲು ಭಿಕ್ಷೆ ಕೇಳಿದ ಆಕೆ, ತನ್ನನ್ನು ನಾಗಮ್ಮ ಎಂದು ಪರಿಚಯಿಸಿ ಕೊಂಡಿದ್ದಾಳೆ. ಈ ವೇಳೆ ಚಿಲ್ಲರೆ ತರುವುದಾಗಿ ಹೇಳಿ ಮನೆಯೊಳಗೆ ಶಾಂತಮ್ಮ ಬಂದಿದ್ದಾರೆ.
ಆಗ ಶಾಂತಮ್ಮ ಅವರನ್ನು ಹಿಂಬಾಲಿಸಿ ಮನೆ ಪ್ರವೇಶಿಸಿದ ಆಕೆ, ‘ನಿಮ್ಮ ಯಜಮಾನರಿಗೆ ಕಂಟಕ ಇದೆ. ಒಂದು ಪರಿಹಾರ ಮಾಡುತ್ತೇನೆ’ ಎಂದು ಎಂದಿದ್ದಾಳೆ. ಬಳಿಕ ಚಾಪೆ ಹಾಸುವಂತೆ ಹೇಳಿದ ಆರೋಪಿ, ಎರಡು ಊದು ಬತ್ತಿ, ಮೂರು ಪಾವು ಅಕ್ಕಿ ಹಾಗೂ .2 ಸಾವಿರ ದಕ್ಷಿಣೆ ಇಡುವಂತೆ ಸೂಚಿಸಿದ್ದಳು. ಇದಾದ ನಂತರ ಪೂಜೆಗೆ ಬೆಳ್ಳಿ ಆಭರಣ ಕೊಡುವಂತೆ ಕೇಳಿದಳು. ಈ ಮಾತಿಗೆ ಶಾಂತಮ್ಮ ಅವರು, ನನ್ನ ಬಳಿ ಬೆಳ್ಳಿ ಇಲ್ಲ ಎಂದಾಗ ಚಿನ್ನವಿಡುವಂತೆ ತಾಕೀತು ಮಾಡಿದಳು.
ಕೊನೆಗೆ ಮಾಂಗಲ್ಯ ಸೇರಿದಂತೆ ಚಿನ್ನವನ್ನು ಪೂಜೆಗೆ ಶಾಂತಮ್ಮ ನೀಡಿದ್ದರು. ಈ ಒಡವೆಗಳನ್ನು ತಾಮ್ರದ ಬಾಕ್ಸ್‌ಗೆ ಹಾಕಿ ಅದಕ್ಕೆ ಬಿಗಿಯಾಗಿ ಬಟ್ಟೆಯಿಂದ ಆರೋಪಿ ಕಟ್ಟಿದ್ದಾಳೆ. ಈ ವೇಳೆ ಜಾಕೆಟ್ ಬಟ್ಟೆತೆಗೆದುಕೊಂಡು ಬರುವಂತೆ ಸೂಚಿಸಿದ್ದಳು. ಈ ಹಂತದಲ್ಲಿ ಆಕೆ ತನ್ನ ಕೈಚಳಕ ತೋರಿಸಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ.
‘ನಾನು ಪೂಜೆ ಮಾಡಿದ್ದೇನೆ. ನಿನ್ನ ಗಂಡನ ಕಂಟಕ ನಿವಾರಣೆಯಾಗಿದೆ. ಈ ಬಾಕ್ಸ್ ಅನ್ನು ಎರಡು ಗಂಟೆಗಳ ತೆರೆದು ನೋಡು ಅದರಲ್ಲಿ ಒಡವೆಗಳಿವೆ’ ಎಂದು ಆರೋಪಿ ತೆರಳಿದ್ದಾಳೆ. ಅದರಂತೆ ಕೆಲ ಹೊತ್ತಿನ ಬಳಿಕ ಬಾಕ್ಸ್ ತೆರೆದಾಗ 2.2 ಲಕ್ಷ ರು. ಬೆಲೆಯ ಆಭರಣ ಕಾಣದೆ ಶಾಂತಮ್ಮ ಗಾಬರಿ ಬಿದ್ದಿದ್ದಾರೆ. ಕೊನೆಗೆ ತಾವು ವಂಚನೆಗೆ ಒಳಗಾಗಿರುವುದು ಅವರಿಗೆ ಅರಿವಾಗಿದೆ. ಈ ಬಗ್ಗೆ ರಾಜಗೋಪಾಲ ನಗರ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.