ಎಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮಸ್ಥಳವಾದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿರುವ ಸರ್‌ಎಂವಿ ಸ್ಮಾರಕದ ದುರಸ್ತಿ ಕಾರ್ಯ ಕೈಗೊಳ್ಳಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮುಂದಾಗಿದೆ.
ಎನ್.ಎಲ್.ಶಿವಮಾದು
ಬೆಂಗಳೂರು (ಸೆ.02]: ನಾಡಿನ ಹೆಮ್ಮೆಯ ಎಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮಸ್ಥಳವಾದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿರುವ ಸರ್‌ಎಂವಿ ಸ್ಮಾರಕದ ದುರಸ್ತಿ ಕಾರ್ಯ ಕೈಗೊಳ್ಳಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮುಂದಾಗಿದೆ.
ಸ್ಮಾರಕಕ್ಕೆ ಡಿಜಿಟಲ್ ಸ್ಪರ್ಶ, ಉದ್ಯಾನ ಅಭಿವೃದ್ಧಿ ಸೇರಿದಂತೆ ಹಲವು ಕಾಮಗಾರಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ವಿಶೇಷವಾಗಿ ವಿ.ವಿ. ವ್ಯಾಪ್ತಿಯ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸ್ಮಾರಕ ಭೇಟಿ ಕಡ್ಡಾಯಗೊಳಿಸುವ ನಿಟ್ಟಿನಲ್ಲಿಯೂ ಚಿಂತನೆ ನಡೆಸುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಸ್ಮಾರಕದ ಆವರಣ ಗಿಡಗಂಟಿ ಬೆಳೆದು ದುಸ್ಥಿತಿಯಲ್ಲಿದೆ. ಸ್ಮಾರಕ ಹಾಳಾಗಿರುವುದರಿಂದ ಭೇಟಿ ನೀಡುವವರ ಸಂಖ್ಯೆ ಕೂಡ ಕಡಿಮೆಯಾಗಿದೆ. ಹೀಗಾಗಿ ದೇಶಕ್ಕೆ ಅಗಾಧ ಕೊಡುಗೆ ನೀಡಿರುವ ಖ್ಯಾತ ಎಂಜಿನಿಯರ್ ಅವರ ಸ್ಮಾರಕವನ್ನು ಆಕರ್ಷಕ ತಾಣವನ್ನಾಗಿ ಮಾಡುವ ಉದ್ದೇಶದಿಂದ 10 ಲಕ್ಷ ರು.ಗಳ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ. ಇದರ ಜತೆಗೆ ವಿಶ್ವೇಶ್ವರಯ್ಯ ಅವರು ದೇಶಕ್ಕೆ ನೀಡಿರುವ ಕೊಡುಗೆಗಳನ್ನು ಡಿಜಿಟಲ್ ರೂಪದಲ್ಲಿ ತರಲಾಗುತ್ತಿದೆ.
ಈ ಕುರಿತು ವಿವರ ನೀಡಿದ ವಿಟಿಯು ಪರಿಷತ್ ಕಾರ್ಯಕಾರಿ ಸದಸ್ಯ ಡಾ. ಸಂಜೀವ್ ಕುಬಕಡ್ಡಿ, ಹಾಳಾಗಿದ್ದ ಸ್ಮಾರಕವನ್ನು ಸುಮಾರು 10 ಲಕ್ಷ ರು. ವೆಚ್ಚದಲ್ಲಿ ದುರಸ್ತಿಗೊಳಿಸಲಾಗುತ್ತಿದೆ. ಬೇಲಿ ಹಾಕಿಸುವುದು, ಸ್ಮಾರಕದ ರಕ್ಷಣೆಗಾಗಿ ಭದ್ರತಾ ಸಿಬ್ಬಂದಿ ನೇಮಕ, ಸಾರ್ವಜನಿಕರಿಗೆ ಅಕ್ರಮ ಪ್ರವೇಶ ತಡೆಗಟ್ಟುವುದು, ಉದ್ಯಾನ ಅಭಿವೃದ್ಧಿ, ಕಟ್ಟಡಕ್ಕೆ ಸೋಲಾರ್ ಬಲ್‌್ಬ ಅಳವಡಿಸುವ ಕೆಲಸ ನಡೆದಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಹಿನ್ನೆಲೆಯಲ್ಲಿ ಸ್ಮಾರಕವನ್ನು ಹೂವುಗಳಿಂದ ಅಲಂಕರಿಸಲಾಗುತ್ತಿದೆ ಎಂದು ಹೇಳಿದರು.
ಕೊಡುಗೆಗಳಿಗೆ ಡಿಜಿಟಲ್ ಸ್ಪರ್ಶ: ಗೋಡೆ ಮತ್ತು ಸ್ಮಾರಕವನ್ನು ಗ್ರಾನೈಟ್‌ನಿಂದ ರಚನೆ ಮಾಡಲಾಗುತ್ತದೆ. ವಿಶ್ವೇಶ್ವರಯ್ಯನವರ ಕೊಡುಗೆಗಳಿಗೆ ಡಿಜಿಟಲ್ ಸ್ಪರ್ಶ ನೀಡಲಾಗುತ್ತಿದೆ. ಬೃಹತ್ ಪೀಠ ಸ್ಥಾಪಿಸಿ ಸ್ಮಾರಕವನ್ನು ಮತ್ತಷ್ಟುಶ್ರೀಮಂತಗೊಳಿಸುವ ಯೋಜನೆ ಕೂಡ ರೂಪಿಸಲಾಗಿದೆ ಎಂದು ತಿಳಿಸಿದರು.
ವಿಟಿಯು ವ್ಯಾಪ್ತಿಯಲ್ಲಿರುವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ನಾಲ್ಕು ವರ್ಷದಲ್ಲಿ ಒಂದು ಬಾರಿ ಸ್ಮಾರಕ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸಲಾಗುತ್ತಿದೆ. ಹೊರ ರಾಜ್ಯದಿಂದ ಬಂದಿರುವ ವಿದ್ಯಾರ್ಥಿಗಳಿಗೆ ವಿಶ್ವೇಶ್ವರಯ್ಯ ಅವರ ಕೊಡುಗೆ ಮಾತ್ರ ತಿಳಿದಿರುತ್ತದೆ. ಆದರೆ, ವಿಶ್ವೇಶ್ವರಯ್ಯ ಅವರ ಜನ್ಮಸ್ಥಳ, ಓದಿದ ಶಾಲೆ, ಬೆಳೆದು ಬಂದ ವಾತಾವರಣ, ದೇಶಕ್ಕೆ ನೀಡಿರುವ ಕೊಡುಗೆ ಏನು ಎಂಬುದನ್ನು ಸಂಪೂರ್ಣವಾಗಿ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಎಲ್ಲ ವಿದ್ಯಾರ್ಥಿಗಳ ಭೇಟಿಗೆ ಸರ್ಕಾರಕ್ಕೆ ಪತ್ರ: ಸ್ಮಾರಕ ಹಾಳಾಗಿದ್ದರಿಂದ ಯಾರೊಬ್ಬರೂ ಭೇಟಿ ನೀಡುತ್ತಿರಲಿಲ್ಲ. ಇದೀಗ, ಸ್ಮಾರಕವನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸ್ಮಾರಕ ತೋರಿಸುವಂತೆ ಅಕ್ಕಪಕ್ಕದ ಶಾಲೆಗಳ ಶಿಕ್ಷಕರಿಗೆ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಶಾಲೆಗಳ ಮಕ್ಕಳು ಸಾಧ್ಯವಾದರೆ ಭೇಟಿ ನೀಡಿ ಸರ್‌ಎಂವಿ ಕೊಡುಗೆ ತಿಳಿಯುವಂತೆ ಮಾಡಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.
ಸರ್‌ಎಂವಿ ಟ್ರಸ್ಟ್ ಅಧ್ಯಕ್ಷ ಹಾಗೂ ಸರ್ ಎಂವಿ ಮೊಮ್ಮಗ ಸತೀಶ್ ಮೋಕ್ಷಗುಂಡಂ, ‘ಸ್ಮಾರಕವನ್ನು ಸ್ಫೂರ್ತಿದಾಯಕ ತಾಣವಾಗಿ ಮಾಡುವ ನಿಟ್ಟಿನಲ್ಲಿ ವಿಟಿಯು ನವೀಕರಣ ಮಾಡುತ್ತಿದೆ. ಈ ಮೊದಲು ತೋಟಗಾರಿಕೆ ಇಲಾಖೆ ನಿರ್ವಹಣೆ ಮಾಡುತ್ತಿತ್ತು. ನಿರ್ವಹಣೆ ಕೊರತೆಯಿಂದ ಸ್ಮಾರಕ ಹಾಳಾಗಿತ್ತು. ಇದೀಗ ವಿಟಿಯು ನವೀಕರಣ ಜವಾಬ್ದಾರಿ ವಹಿಸಿಕೊಂಡಿದೆ. ಸ್ಮಾರಕವನ್ನು ಅಭಿವೃದ್ಧಿಗೊಳಿಸಿದ ಬಳಿಕ ಸ್ಮಾರಕ ಸ್ಥಳಕ್ಕೆ ಭೇಟಿ ನೀಡುವ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ’ ಎಂದು ತಿಳಿಸಿದರು.