
ಬೆಂಗಳೂರು (ಜೂ. 12): ಬೆಂಗಳೂರು ನಗರ ಸ್ವಚ್ಛ, ಸುಂದರವಾಗಿ ಕಾಣುವ ನಿಟ್ಟಿನಲ್ಲಿ ಪೌರಕಾರ್ಮಿಕರು ಸದಾ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಾರೆ. ಅದರ ಜೊತೆಗೆ ರಸ್ತೆ ಬದಿ ಬಿಸಾಡುವಂತಹ ಕಸವನ್ನು ತೆರವುಗೊಳಿಸುವ ಸಲುವಾಗಿ ಸ್ವಚ್ಛತಾ ಅಭಿಯಾನಗಳನ್ನು ಕೂಡಾ ಆಯೋಜಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಕಸ ಎಸೆದು ಹೋಗುವವರನ್ನು ಹಿಡಿದುಕೊಡಲು ಬಿಬಿಎಂಪಿಯಿಂದ ಹೊಸದಾಗಿ ವಾಟ್ಸಪ್ ಸಂಖ್ಯೆ 9448197197 ನೀಡಲಾಗಿದೆ. ಕಸ ಎಸೆಯುವವರ ಫೋಟೋ ತೆಗದು ಈ ನಂಬರ್‌ಗೆ ಕಳಿಸಿದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ.
ನಗರದಾದ್ಯಂತ ಸ್ವಚ್ಛತಾ ಅಭಿಯಾನಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕರು ರಸ್ತೆ ಬದಿ, ಖಾಲಿ ಜಾಗಗಳಲ್ಲಿ ತ್ಯಾಜ್ಯ ಬಿಸಾಡುವಂತಹ ಮನಸ್ಥಿತಿಯಿಂದ ಸ್ವಚ್ಛ ನಗರವನ್ನಾಗಿ ಬದಲಾಯಿಸುವೆಡೆಗೆ ಸಹಕಾರಿಯಾಗಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಟೋ ಟಿಪ್ಪರ್ ಗಳ ಮೂಲಕ ಪ್ರತಿನಿತ್ಯ ಮನೆ-ಮನೆ ಭೇಟಿ ನೀಡಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಆದರೂ ಕೂಡಾ ನಾಗರಿಕರು ಆಟೋ ಟಿಪ್ಪರ್ ಗಳಿಗೆ ತ್ಯಾಜ್ಯವನ್ನು ನೀಡದೇ ರಾತ್ರಿ ವೇಳೆ ಅಥವಾ ಕೆಲಸಕ್ಕೆ ಹೋಗುವ ಸಮಯದಲ್ಲಿ ರಸ್ತೆ ಬದಿ, ಪಾದಚಾರಿ ಮಾರ್ಗ, ಖಾಲಿ ಸ್ಥಳ ಹಾಗೂ ರಾಜಕಾಲುವೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡಿ ಹೋಗುತ್ತಾರೆ. ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತದೆ.
ತ್ಯಾಜ್ಯ ಬಿಸಾಡುವುದರ ಜೊತೆಗೆ ಕಟ್ಟಡಗಳ ಭಗ್ನಾವಶೇಷಗಳನ್ನು ಕೂಡಾ ರಸ್ತೆ ಬದಿ, ಖಾಲಿ ಜಾಗದಲ್ಲಿ ಸುರಿದು ಹೋಗುತ್ತಾರೆ. ಅದಲ್ಲದೆ ಅನುಪಯುಕ್ತ ವಸ್ತುಗಳನ್ನು ಕೂಡ ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಾರೆ. ಆದ್ದರಿಂದ ಪಾಲಿಕೆಯ 8 ವಲಯಗಳಲ್ಲಿ ಬರುವ ಎಲ್ಲಾ ವಾರ್ಡ್‌ಗಳಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ಶಾಶ್ವತವಾಗಿ ತಪ್ಪಿಸಲು ಕ್ರಮವಹಿಸಲಾಗುತ್ತಿದೆ. ನಗರದಲ್ಲಿ ಕಸ ಸುರಿಯುವ ಸ್ಥಳ (ಬ್ಲಾಕ್ ಸ್ಪಾಟ್) ಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವುದು ನಮ್ಮ ಗುರಿಯಾಗಿದ್ದು, ಅದಕ್ಕಾಗಿ ದೂರು ಕೇಂದ್ರ ಸ್ಥಾಪಿಸಿ ಪ್ರತ್ಯೇಕವಾಗಿ ವಾಟ್ಸಪ್ ಸಂಖ್ಯೆಯನ್ನು ನೀಡಲಾಗಿದೆ. ಸದರಿ ವಾಟ್ಸಪ್ ಸಂಖ್ಯೆಗೆ ಸಂದೇಶದ ಮೂಲಕ ದೂರು ದಾಖಲಿಸಬಹುದಾಗಿದೆ.
ನಗರದಲ್ಲಿ ತ್ಯಾಜ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ಪಡೆಯಲು 4 ಆಯಾಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.
'ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು'ಗಾಗಿ ಬಿಬಿಎಂಪಿಯು ಸದಾ ಶ್ರಮಿಸುತ್ತಿದ್ದು, ನಾಗರಿಕರು ನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪಾಲಿಕೆಯ ಜೊತೆ ಕೈಜೋಡಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯಾಚರಣೆ ಅಧಿಕಾರಿಯಾದ ರಮಾಮಣಿ ರವರು ಮನವಿ ಮಾಡಿದ್ದಾರೆ.