ಪ್ರಾಯೋಗಿಕವಾಗಿ ಆರಂಭಿಸಲಾದ ಈ ಕಾರ್ಯಕ್ರಮಕ್ಕೆ ಬಿಬಿಎಂಪಿಯ 8 ವಲಯದಲ್ಲಿ ತಲಾ ಒಂದೊಂದು ಸ್ಥಳ ಗುರುತಿಸಲಾಗಿದೆ. ಸದ್ಯ ಬಿಬಿಎಂಪಿಯ ಅಧಿಕಾರಿಗಳು ಬೀದಿ ನಾಯಿಗಳಿಗೆ ಆಹಾರ ನೀಡಲು ಗುರುತಿಸಿರುವ ಜಾಗದಲ್ಲಿ ಸಮಸ್ಯೆಗಳ ಸರಮಾಲೆಗಳೇ ಇವೆ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಅ.22): ಬಿಬಿಎಂಪಿಯು 'ಕುಕುರ್ ತಿಹಾರ್' ಕಾರ್ಯಕ್ರಮದಡಿ ಬೀದಿ ನಾಯಿಗಳಿಗೆ ಆಹಾರ ಹಾಕಲು ಕಾಟಚಾರಕ್ಕೆ ಸ್ಥಳ ನಿಗದಿಪಡಿಸಿ, ಕೇವಲ ಪ್ರಚಾರಕ್ಕಾಗಿ ಆಯೋಜಿಸಿದಂತೆ ಕಾಣುತ್ತಿದೆ. ನಿಗದಿತ ಪ್ರದೇಶದಲ್ಲಿ ಆಹಾರ ನೀಡುವುದರಿಂದ ನಾಯಿಗಳು ಗುಂಪಾಗಿ ಅಲ್ಲಿಯೇ ಇರುವುದರಿಂದ ಆತಂಕ ಪಡುವಂತಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಪ್ರಾಯೋಗಿಕವಾಗಿ ಆರಂಭಿಸಲಾದ ಈ ಕಾರ್ಯಕ್ರಮಕ್ಕೆ ಬಿಬಿಎಂಪಿಯ 8 ವಲಯದಲ್ಲಿ ತಲಾ ಒಂದೊಂದು ಸ್ಥಳ ಗುರುತಿಸಲಾಗಿದೆ. ಸದ್ಯ ಬಿಬಿಎಂಪಿಯ ಅಧಿಕಾರಿಗಳು ಬೀದಿ ನಾಯಿಗಳಿಗೆ ಆಹಾರ ನೀಡಲು ಗುರುತಿಸಿರುವ ಜಾಗದಲ್ಲಿ ಸಮಸ್ಯೆಗಳ ಸರಮಾಲೆಗಳೇ ಇವೆ. ಈ ಯಾವುದೇ ಸಮಸ್ಯೆಗಳನ್ನು ಪರಿಗಣಿಸದ ಅಧಿಕಾರಿಗಳು, ಎಬಿಸಿ ಹಾಗೂ ಆ್ಯಂಟಿ ರೇಬಿಸ್ ಸೇರಿ ಇನ್ನಿತರೆ ಗುತ್ತಿಗೆದಾರರ ಲಾಬಿ ಮತ್ತು ಕುಕುರ್ ತಿಹಾರ್ ಸಹಯೋಗ ನಡೆಸಲಾದ ಸಂಘ ಸಂಸ್ಥೆಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಇದನ್ನು ರೂಪಿಸಿದಂತೆ ಕಾಣುತ್ತಿದೆ ಎಂಬ ಆರೋಪ ಕೇಳಿ ಬಂದಿವೆ.
ಬೀದಿ ನಾಯಿ ಸಂಖ್ಯೆ ಹೆಚ್ಚಿಸಲು ‘ಕುಕುರ್ ತಿಹಾರ್’ ಗುತ್ತಿಗೆದಾರರ ಕುಮ್ಮಕ್ಕು?
ಪಾದಚಾರಿ ಮಾರ್ಗದಲ್ಲಿ ನಾಯಿಗೆ ಆಹಾರ:
ಬಿಬಿಎಂಪಿಯು ಬೀದಿ ನಾಯಿಗಳಿಗೆ ಆಹಾರ ಹಾಕಲು ದಾಸರಹಳ್ಳಿಯ ಮಂಜುನಾಥ ನಗರ, ಬೊಮ್ಮನಹಳ್ಳಿಯ ಕೋಣನಕುಂಟೆ, ಯಲಹಂಕದ ಜಕ್ಕೂರು, ಮಹದೇವಪುರದ ಹೂಡಿಯಲ್ಲಿ ಗುರುತಿಸಲಾದ ಸ್ಥಳಗಳ ಪೈಕಿ ಬಹುತೇಕ ಜಾಗಗಳು ಪಾದಚಾರಿ ಸಂಚಾರಿ ಮಾರ್ಗಗಳಾಗಿವೆ. ಬೀದಿ ನಾಯಿಗಳಿಗೆ ಆಹಾರ ಹಾಕಿದರೆ ಪಾದಚಾರಿಗಳು ಓಡಾಟ ಎಲ್ಲಿ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಬೀದಿ ನಾಯಿಗಳು ಹಾಕಿದ ಆಹಾರ ಪಾದಚಾರಿ ಮಾರ್ಗದಲ್ಲಿ ಬಿದ್ದಿರುವುದನ್ನು ಯಾರು ಸ್ವಚ್ಚ ಮಾಡುತ್ತಾರೆ. ಪೌರ ಕಾರ್ಮಿಕರು ಸ್ವಚ್ಚ ಮಾಡುತ್ತಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಪೌರಕಾರ್ಮಿಕರು ದಿನಕ್ಕೆ ಎಷ್ಟು ಬಾರಿ ಸ್ವಚ್ಛಗೊಳಿಸಲಿದ್ದಾರೆ. ವಾಸ್ತವವಾಗಿ ಇದು ಕಾರ್ಯ ಸಾಧ್ಯವೆ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ.
ಅಂಗನವಾಡಿ ಆವರಣದಲ್ಲಿ ನಾಯಿಗೆ ಬೀದಿ ನಾಯಿ ಕಾಟ:
ಆರ್‌ಆರ್ ನಗರದ ರಘುವ ನಹಳ್ಳಿಯ ಅಂಗನವಾಡಿ ಪಕ್ಕದಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕಲು ಸ್ಥಳ ಗುರುತಿಸಲಾಗಿದೆ. ಇದರಿಂದ ಮಕ್ಕಳನ್ನು ಹೇಗೆ ಅಂಗನವಾಡಿಗೆ ಕಳುಹಿಸಬೇಕು. ಈಗಾಗಲೇ ನಗರದಲ್ಲಿ ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸಿ ಪ್ರಕರ ಣಗಳು ಕಣ್ಮುಂದೆ ಇದ್ದರೂ ಬಿಬಿಎಂಪಿಯ ಅಧಿಕಾರಿಗಳು ಆ ಬಗ್ಗೆ ಪರಿಶೀಲನೆ ನಡೆಸದೇ ಬೀದಿ ನಾಯಿಗಳಿಗೆ ಆಹಾರ ಹಾಕುವುದಕ್ಕೆ ಮುಂದಾಗಿದ್ದಾರೆ ಎಂದು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿಯ ಕೇಂದ್ರ ಕಚೇರಿಯ ಆವರಣದ ಪೌರಸಭಾಂಗಣದ ಪಕ್ಕದಲ್ಲಿ ಆಹಾರ ಹಾಕಲು ಸ್ಥಳ ಗುರುತಿಸಲಾಗಿದೆ. ನೂರಾರು ಜನ ಕಚೇರಿ ಕೆಲಸಕ್ಕೆ ಸಾರ್ವಜನಿಕರು ಆಗಮಿಸಲಿದ್ದಾರೆ. ಅಧಿಕಾರಿ ಸಿಬ್ಬಂದಿ ಓಡಾಟ ನಡೆಸುವ ಸ್ಥಳ ಗುರುತಿಸಿರುವುದು ಆಕ್ಷೇಪಕ್ಕೆ ಎಡೆ ಮಾಡಿಕೊಟ್ಟಿದೆ.
ಚಿತ್ರದುರ್ಗದಲ್ಲಿ ಹೃದಯ ವಿದ್ರಾವಕ ಘಟನೆ: ಬೀದಿ ನಾಯಿಗಳ ಭೀಕರ ದಾಳಿಗೆ ಬಾಲಕ ಬಲಿ!
ಸಣ್ಣ ಬೀದಿಯಲ್ಲಿ ಸ್ಥಳ ಗುರುತು:
ದಕ್ಷಿಣ ವಲಯಕ್ಕೆ ಸಂಬಂಧಿಸಿದಂತೆ, ಬೈರಸಂದ್ರ ಬಡಾವಣೆಯ ಸಿದ್ದಾ ಪುರದ ಸಣ್ಣ ಬೀದಿಯಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕಲು ಸ್ಥಳ ನಿಗದಿ ಪಡಿಸಲಾಗಿದೆ. ಆದರೆ, ಆ ಬೀದಿಯಲ್ಲಿ ವಾಸಿಸುವ ಜನರೇ ಓಡಾಟಕ್ಕೆ ಕಷ್ಟ ಪಡುವ ಸ್ಥಿತಿ ಇದೆ. ಮನೆ ಮುಂದೆ ನೀರಿನ ಟ್ಯಾಂಕ್, ವಾಹನ ನಿಲ್ಲಿಸಿಕೊಂಡಿದ್ದಾರೆ. ಮಕ್ಕಳು, ಮಹಿಳೆಯರು ಓಡಾಟ ನಡೆಸುತ್ತಾರೆ. ನಾಯಿಗಳಿಂದ ಅಪಾಯ ಉಂಟಾದರೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದ್ದಾರೆ.
ನಾಯಿಗಳ ಗಲಾಟೆ ಹೆಚ್ಚಾಗಲಿದೆ:
ತಮ್ಮದೇ ಆದ ವ್ಯಾಪ್ತಿಯ ಪ್ರದೇಶವನ್ನು ಹೊಂದಿರುವ ನಾಯಿಗಳು ಬೇರೆ ಕಡೆಯ ನಾಯಿ ಬಂದರೆ ಸ್ಥಳೀಯ ನಾಯಿಗಳ ಹಿಂಡು ದಾಳಿ ನಡೆಸಿ ವಲಸೆ ಬಂದ ನಾಯಿಯನ್ನು ಗಾಯಗೊಳಿಸುತ್ತವೆ. ಅಲ್ಲದೇ ಆಹಾರ ನೀಡುವ ಸಮಯದಲ್ಲಿ ನಾಯಿಗಳ ನಡುವೆ ಪರಸ್ಪರ ಕಚ್ಚಾಟ ನಡೆಯುವ ಪ್ರಸಂಗಗಳು ಅಲ್ಲಲ್ಲಿ ನಡೆದಿವೆ.