ವಾಲಿದ್ದ ಕಟ್ಟಡ ಸಂಪೂರ್ಣ ನೆಲಸಮ!

By Suvarna NewsFirst Published Feb 13, 2020, 9:23 AM IST
Highlights

ವಾಲಿದ್ದ ಕಟ್ಟಡ ತೆರವು ಪೂರ್ಣ| ಅಕ್ಕ ಪಕ್ಕದ ಕಟ್ಟಡಗಳ ಸದೃಢತೆ ಪರಿಶೀಲಿಸಿ ವಾಸಕ್ಕೆ ಅನುಮತಿ

ಬೆಂಗಳೂರುಫೆ.13]: ಕೆಂಪಾಪುರದ ಜಿ.ರಾಮಯ್ಯಲೇಔಟ್‌ನಲ್ಲಿ ಫೆ.5ರಂದು ವಾಲಿದ್ದ ಕಟ್ಟಡ ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು, ಗುರುವಾರ (ಫೆ.13) ಅಕ್ಕ-ಪಕ್ಕದ ಕಟ್ಟಡ ಸದೃಢತೆ ಪರಿಶೀಲಿಸಿ ವಾಸಕ್ಕೆ ಅನುಮತಿ ನೀಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬ್ಯಾಟರಾಯನಪುರ ವಾರ್ಡಿನ ಕೆಂಪಾಪುರದ ಜಿ.ರಾಮಯ್ಯಲೇಔಟ್‌ನಲ್ಲಿ ಫೆ.5ರಂದು ಐದು ಅಂತಸ್ತಿತ ಕಟ್ಟಡ ವಾಲಿತ್ತು. ಕಳೆದೊಂದು ವಾರದಿಂದ ನಡೆಯುತ್ತಿದ್ದ ಕಟ್ಟಡ ತೆರವು ಕಾರ್ಯಾಚರಣೆ ಪೂರ್ಣಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಾಲಿದ್ದ ಅಕ್ಕ-ಪಕ್ಕದ ಕಟ್ಟಡದಲ್ಲಿ ವಾಸವಿದ್ದ ಸುಮಾರು 35 ಮನೆಗಳಿಗೆ ನೋಟಿಸ್‌ ನೀಡಿ ಖಾಲಿ ಮಾಡಿಸಲಾಗಿತ್ತು.

BBMPಗೆ ಮತ್ತಷ್ಟುಕಗ್ಗಂಟಾದ ವಾಲಿದ ಕಟ್ಟಡ ತೆರವು ಕಾರ್ಯ!

ಇದೀಗ ಕಟ್ಟಡ ಕಾರ್ಯಾಚರಣೆ ಮುಗಿದಿರುವ ಹಿನ್ನೆಲೆಯಲ್ಲಿ ಗುರುವಾರ ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತರು, ವಲಯ ಮುಖ್ಯ ಎಂಜಿನಿಯರ್‌ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ ಅಧಿಕಾರಿಗಳು ವಾಲಿದ್ದ ಅಕ್ಕ-ಪಕ್ಕದ ಕಟ್ಟಡಗಳ ಸದೃಢತೆಯನ್ನು ಪರಿಶೀಲಿಸಿ ನಂತರ ಕಟ್ಟಡದ ನಿವಾಸಿಗಳಿಗೆ ವಾಸಕ್ಕೆ ಅನುಮತಿ ನೀಡುವುದಕ್ಕೆ ತೀರ್ಮಾನಿಸಲಾಗಿದೆ.

ಈಗಾಗಲೇ ವಾಲಿದ್ದ ಕಟ್ಟಡದಿಂದ ದೂರದಲ್ಲಿದ್ದ ಸುಮಾರು 15 ಕಟ್ಟಡಗಳಲ್ಲಿ ನಿವಾಸಿಗಳು ತಮ್ಮ ಮನೆಗಳಿಗೆ ವಾಪಾಸ್‌ ಬಂದಿದ್ದಾರೆ. ಉಳಿದ ಕಟ್ಟಡ ನಿವಾಸಿಗಳಿಗೆ ಪರಿಶೀಲನೆ ನಂತರ ವಾಸಕ್ಕೆ ಅನುಮತಿ ನೀಡಲಾಗುವುದು ಎಂದು ಬ್ಯಾಟರಾಯನಪುರ ವಾರ್ಡ್‌ನ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್‌ ರಂಗನಾಥ ಮಾಹಿತಿ ನೀಡಿದ್ದಾರೆ.

ಕಟ್ಟಡ ತ್ಯಾಜ್ಯ ತೆರವು ಬಾಕಿ:

ಐದು ಅಂತಸ್ತಿನ ಕಟ್ಟಡವನ್ನು ಅಕ್ಕ-ಪಕ್ಕದ ಕಟ್ಟಡಗಳಿಗೆ ಹಾನಿ ಉಂಟಾಗದಂತೆ ತೆರವು ಮಾಡಲಾಗಿದೆ. ವಾಲಿದ್ದ ಕಟ್ಟಡದ ಪಕ್ಕದ ಶೀಟ್‌ ಮನೆಗೆ ಸ್ವಲ್ಪ ಹಾನಿ ಉಂಟಾಗಿದೆ. ಅದನ್ನು ದುರಸ್ತಿ ಮಾಡಿಕೊಡಲಾಗುತ್ತದೆ. ಕಟ್ಟಡ ತೆರವುಗೊಳಿಸಿದ ತ್ಯಾಜ್ಯ ವಿಲೇವಾರಿ ಬಾಕಿ ಇದೆ. ಗುರುವಾರದಿಂದ ಕಟ್ಟಡ ತ್ಯಾಜ್ಯ ವಿಲೇವಾರಿ ಕಾರ್ಯ ಆರಂಭಿಸುತ್ತೇವೆ ಎಂದು ತಿಳಿಸಿದರು.

ಬೆಂಗಳೂರು : ಕಟ್ಟಡಗಳ ತೆರವು ಕಾರ್ಯ ಶುರು

click me!