ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಅ.10ರಿಂದ ತೀವ್ರಗತಿಯಲ್ಲಿ ನಡೆಸಲಾಗುವುದು ಎಂದು ಬಿಬಿಎಂಪಿ ಮುಖ್ಯಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಬೆಂಗಳೂರು (ಅ.07): ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಅ.10ರಿಂದ ತೀವ್ರಗತಿಯಲ್ಲಿ ನಡೆಸಲಾಗುವುದು ಎಂದು ಬಿಬಿಎಂಪಿ ಮುಖ್ಯಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಿರಂತರವಾಗಿ ನಢೇಯುತ್ತಿದೆ. ಕಟ್ಟಡ ತೆರವಿಗೆ ಉಂಟಾಗಿದ್ದ ಅಡತಡೆಗಳನ್ನು ಕಾನೂನು ಪ್ರಕಾರ ಪರಿಹರಿಸಿಕೊಂಡು ತೆರವು ಕಾರ್ಯ ನಡೆಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸರ್ಕಾರದಿಂದ ಹೆಚ್ಚುವರಿ ಭೂಮಾಪಕರು ಶನಿವಾರದಿಂದ ಬಿಬಿಎಂಪಿಯ ತೆರವು ಕಾರ್ಯಾಚರಣೆಯಲ್ಲಿ ಕೆಲಸ ಮಾಡಲು ಆಗಮಿಸಲಿದ್ದಾರೆ. ನಂತರ ರಾಜಕಾಲುವೆಯ ಅಧಿಕ ಪ್ರಮಾಣದ ಒತ್ತುವರಿಯಿಂದ ಕಡಿಮೆ ಪ್ರಮಾಣದ ಒತ್ತುವರಿ ಆಧಾರದಲ್ಲಿ ಸಮೀಕ್ಷೆ ಮಾಡಿ ತೆರವುಗೊಳಿಸುವ ಪಟ್ಟಿಯನ್ನು ಕಂದಾಯ ಇಲಾಖೆಯು ಶನಿವಾರದೊಳಗೆ ನೀಡುತ್ತದೆ. ಇದರಲ್ಲಿ ಆದ್ಯತೆಯ ಮೇರೆಗೆ ಅ.10ರಿಂದ ಒತ್ತುವರಿ ಕಟ್ಟಡ ಮತ್ತು ಇತರೆ ನಿರ್ಮಾಣಗಳನ್ನು ತೆರವು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಡಿಸೆಂಬರೊಳಗೆ ರಾಜ್ಯಾದ್ಯಂತ ‘ನಮ್ಮ ಕ್ಲಿನಿಕ್’: ಸಚಿವ ಸುಧಾಕರ್
ನ್ಯಾಯಾಲಯದ ಆದೇಶದ ಪ್ರಕಾರ ಕಟ್ಟಡಗಳ ಮಾಲಿಕರು ನೇತೃತ್ವದಲ್ಲಿಯೇ ಜಂಟಿ ಸಮೀಕ್ಷೆ ಮಾಡಲು ಕ್ರಮವಹಿಸಲಾಗಿದೆ. ಜತೆಗೆ, ಈ ಹಿಂದೆ ಕಂದಾಯ ಇಲಾಖೆಯಿಂದ ಸಮೀಕ್ಷೆ ಮಾಡುವ ವೇಳೆ ಸಂಬಂಧಪಟ್ಟಮಾಲಿಕರಿಗೆ ನೋಟಿಸ್ ನೀಡಿದ್ದರೂ ‘ತಮಗೆ ನೋಟಿಸ್ ಸಿಕ್ಕಿಲ್ಲ. ಸಮೀಕ್ಷೆಯಲ್ಲಿ ವ್ಯತ್ಯಾಸ ಉಂಟಾಗಿದ್ದು, ಮರು ಸಮೀಕ್ಷೆ ಮಾಡಿ’ ಎಂದು ಹಲವು ಮಾಲಿಕರು ಮನವಿ ಮಾಡಿದ್ದಾರೆ. ಅಂತಹ ಪ್ರದೇಶಗಳಲ್ಲಿ ಜಂಟಿ ಸಮೀಕ್ಷೆ ಮಾಡಿ ಒತ್ತುವರಿ ಭಾಗದಲ್ಲಿರುವ ಕಟ್ಟಡ ಅಥವಾ ಇತರೆ ನಿರ್ಮಾಣಗಳನ್ನು ತೆರವು ಮಾಡಲು ನೋಟಿಸ್ ನೀಡಲಿದ್ದಾರೆ. ಈ ಪಟ್ಟಿಯನ್ನು ಪಡೆದು ತೆರವು ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಮುಂದಿನ ಎರಡು ವಾರಗಳಲ್ಲಿ ಮಹದೇವಪುರ ಸೇರಿ ಬಾಕಿಯಿರುವ ಎಲ್ಲ ಒತ್ತುವರಿ ಪ್ರಕರಣ ತೆರವಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಒಳಚರಂಡಿ ನೀರನ್ನು ಕಾಲುವೆಗೆ ಹರಿಸಲು ಅನುಮತಿ ಕೊಟ್ಟವರು ಯಾರು ಪತ್ತೆ ಹಚ್ಚಿ: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದ ವಿನಾಯಕ ಮತ್ತು ನಾಯ್ಡು ವಸತಿ ಬಡಾವಣೆಯ ಒಳಚರಂಡಿ ನೀರನ್ನು ಮಳೆ ನೀರು ಕಾಲುವೆಗೆ ಜೋಡಿಸಲು ಅನುಮತಿ ನೀಡಿರುವ ನಿರ್ಧಾರದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಹೈಕೋರ್ಟ್ ನಿರ್ದೇಶಿಸಿದೆ. ಪ್ರಕರಣ ಸಂಬಂಧ ಶಾಂತಿಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ ಈ ಆದೇಶ ಮಾಡಿದೆ.
ದಸರಾ ಬಳಿಕ ಬೆಂಗಳೂರಿನಲ್ಲಿ ಮತ್ತೆ ಜೆಸಿಬಿ ಗರ್ಜನೆ: ಬಿಬಿಎಂಪಿ ಸ್ಪಷ್ಟನೆ
ಖಾಸಗಿ ಬಡಾವಣೆಗಳು, ಸರ್ಕಾರ ಅಥವಾ ಸರ್ಕಾರದ ಅಧೀನ ಸಂಸ್ಥೆಗಳು ಒಳಚರಂಡಿಯನ್ನು ನಿರ್ಮಿಸಿವೆ. ಅವುಗಳ ತ್ಯಾಜ್ಯ ನೀರನ್ನು ಮಳೆ ನೀರುಗಾಲುವೆಗೆ ಬಿಡುವುದು ಸರಿಯಲ್ಲ. ವಿನಾಯಕ ಬಡಾವಣೆಯ ಒಳಚರಂಡಿ ವ್ಯವಸ್ಥೆಯನ್ನು ಮಳೆ ನೀರು ಕಾಲುವೆಗೆ ಜೋಡಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಇತರೆ ಸರ್ಕಾರಿ ಅಧಿಕಾರಿಗಳು ಹೇಗೆ ನಿಯಮ ಮೀರಿ ಅನುಮತಿ ನೀಡಿದರು ಎಂಬ ಬಗ್ಗೆ ಪತ್ತೆ ಹಚ್ಚಬೇಕಾಗಿದೆ. ಉಪ ಪೊಲೀಸ್ ಆಯುಕ್ತರ ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿಯಿಂದ ಹೆಚ್ಚಿನ ತನಿಖೆ ನಡೆಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಕಂದಾಯ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಬಿಬಿಎಂಪಿ ಮತ್ತಿತರ ಸಂಸ್ಥೆಗಳು ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಹೈಕೋರ್ಟ್ ಸೂಚಿಸಿದೆ.