ಪಿಒಪಿ ಗಣೇಶ ಪ್ರತಿಷ್ಠಾಪನೆಗೆ ಖಂಡಿತ ಅನುಮತಿ ಸಿಗಲ್ಲ!

By Web DeskFirst Published Aug 1, 2019, 9:02 AM IST
Highlights

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌(ಪಿಒಪಿ)ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಂಘ ಸಂಸ್ಥೆಗಳಿಗೆ ಯಾವುದೇ ಕಾರಣಕ್ಕೂ ಈ ಬಾರಿ ಬಿಬಿಎಂಪಿ ಅನುಮತಿ ನೀಡುವುದಿಲ್ಲ ಎಂದು ಆಯುಕ್ತರು ಖಡಕ್ ಸೂಚನೆ ನೀಡಿದ್ದಾರೆ. 

ಬೆಂಗಳೂರು [ಜು.01]:  ಗಣೇಶ ಉತ್ಸವದ ವೇಳೆಯಲ್ಲಿ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌(ಪಿಒಪಿ)ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಂಘ ಸಂಸ್ಥೆಗಳಿಗೆ ಯಾವುದೇ ಕಾರಣಕ್ಕೂ ಈ ಬಾರಿ ಬಿಬಿಎಂಪಿ ಅನುಮತಿ ನೀಡುವುದಿಲ್ಲ ಎಂದು ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಸ್ಪಷ್ಟಪಡಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಉತ್ಸವದಂದು ಪಿಒಪಿ ಗಣೇಶ ಮೂರ್ತಿಗಳ ಬದಲು ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳನ್ನು ಬಳಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕುರಿತು ಮೇಯರ್‌ ಗಂಗಾಂಬಿಕೆ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಆಯುಕ್ತ ಮಂಜುನಾಥ್‌ ಪ್ರಸಾದ್‌, ಈಗಾಗಲೇ ಹೈಕೋರ್ಟ್‌ ಪಿಒಪಿ ಹಾಗೂ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ಬಳಸಬಾರದು ನಿರ್ದೇಶಿಸಿದೆ. ಆದರೂ ನಗರದಲ್ಲಿ ಪಿಒಪಿ ಮತ್ತು ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳ ಬಳಕೆಯಾಗುತ್ತಿದೆ. ಹಾಗಾಗಿ, ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಮೈದಾನ, ಸಾರ್ವಜನಿಕರ ಸ್ಥಳಗಳಲ್ಲಿ ವಿವಿಧ ಸಂಘ-ಸಂಸ್ಥೆಗಳು, ನಾಗರಿಕರು ದೊಡ್ಡಗಾತ್ರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆಗೆ ಬಿಬಿಎಂಪಿಯಿಂದ ಅನುಮತಿ ಪಡೆಯಬೇಕಾಗುತ್ತದೆ. ಮಣ್ಣಿನ ಗಣೇಶ ಮೂರ್ತಿಗಳನ್ನೇ ಪ್ರತಿಷ್ಠಾಪಿಸುವುದಾಗಿ ಪಾಲಿಕೆಗೆ ಮುಚ್ಚಳಿಕೆ ಪತ್ರ ಸಲ್ಲಿಕೆ ಮಾಡಿದಲ್ಲಿ ಮಾತ್ರ ಪಾಲಿಕೆಯಿಂದ ಗಣೇಶಮೂರ್ತಿ ಕೂರಿಸುವುದಕ್ಕೆ ಅನುಮತಿ ನೀಡಲಾಗುವುದು ಎಂದರು.

ಜತೆಗೆ ಗಣೇಶ ವಿಸರ್ಜನೆಗೆ ನಗರದ ವಿವಿಧ ಭಾಗದಲ್ಲಿ ಬಿಬಿಎಂಪಿ ನಿರ್ಮಿಸಿದ ಕೃತ ನೀರಿನ ಹೊಂಡಗಳಲ್ಲಿ ಯಾವುದೇ ಕಾರಣಕ್ಕೂ ಪಿಒಪಿ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ನೀಡುವುದಿಲ್ಲ. ಪಿಒಪಿ ಗಣೇಶ ಪ್ರತಿಷ್ಠಾಪನೆ ಕಂಡು ಬಂದರೂ ಅಂತವರ ವಿರುದ್ಧ ಕೇಸ್‌ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಗರದಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ, ತಯಾರಿಸುವ ಹಾಗೂ ಸಂಗ್ರಹಿಸಿರುವ ಸ್ಥಳಗಳ ಮೇಲೆ ನಿರಂತರವಾಗಿ ಮುಂದಿನ ಒಂದು ತಿಂಗಳ ಕಾಲ ದಾಳಿ ನಡೆಸಿ ದಂಡ ವಿಧಿಸುವುದರ ಜತೆಗೆ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಎಂಟು ವಲಯಗಳ ಜಂಟಿ ಆಯುಕ್ತರಿಗೆ ಮತ್ತು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ನಗರಕ್ಕೆ ಹೊರರಾಜ್ಯಹಾಗೂ ನಗರ ಹೊರಭಾಗದಿಂದ ಪಿಒಪಿ ಗಣೇಶ ಮೂರ್ತಿಗಳು ಬರದಂತೆ ತಡೆಯಲು ಚಕ್‌ ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸುವಂತೆ ಈಗಾಗಲೇ ಪೊಲೀಸ್‌ ಆಯುಕ್ತರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ವ್ಯಾಪಾರಿಗಳಿಗೂ ಎಚ್ಚರಿಕೆ :  ನಗರದಲ್ಲಿ ಯಾವುದೇ ಕಾರಣಕ್ಕೂ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ದಂಡ ವಿಧಿಸಿ ಕೇಸ್‌ ದಾಖಲಿಸಲಾಗುವುದು. ಪಾದಚಾರಿ ಮಾರ್ಗದಲ್ಲಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಅನುಮತಿ ಕೊಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌, ವಿಶೇಷ ಆಯುಕ್ತ (ಘನತ್ಯಾಜ್ಯ ಮತ್ತು ಆಡಳಿತ) ಡಿ. ರಂದೀಪ್‌, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌, ಎಂಟು ವಲಯದ ಜಂಟಿ ಆಯುಕ್ತರು, ಪಾಲಿಕೆ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಏಕಗವಾಕ್ಷಿ ಪದ್ಧತಿ

ಕಳೆದ ವರ್ಷದಂತೆ ಈ ಬಾರಿಯೂ ಕೂಡ ಬಿಬಿಎಂಪಿ, ಬೆಸ್ಕಾಂ, ಪೊಲೀಸ್‌ ಇಲಾಖೆಯಿಂದ ಏಕಗವಾಕ್ಷಿ ಪದ್ಧತಿಯಲ್ಲೇ ಗಣೇಶ ಮೂರ್ತಿಗಳನ್ನು ಕೂರಿಸಲು ಅನುವು ಮಾಡಿಕೊಡಲಾಗುವುದು. ಪಾಲಿಕೆ ಮೈದಾನಗಳಲ್ಲಿ ಕೂರಿಸುವ ಗಣೇಶ ಮೂರ್ತಿಗಳಿಗೆ ನೆಲ ಬಾಡಿಗೆಯನ್ನು ಸಂಗ್ರಹಿಸುವುದಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

ಪಿಒಪಿ ಗಣೇಶ ಮೂರ್ತಿ ಕೂರಿಸಬಾರದೆಂದು ಹೈಕೋರ್ಟ್‌ನ ಆದೇಶವಿದೆ. ಜತೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಾರಿಮಾಡಿರುವ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

- ಗಂಗಾಂಬಿಕೆ, ಮೇಯರ್‌

click me!