Belagavi Border dispute : ಸುಪ್ರೀಂ ಕೋರ್ಟ್‌ನಲ್ಲಿ ನ.23ರಿಂದ ಅಂತಿಮ ವಿಚಾರಣೆ

By Kannadaprabha News  |  First Published Sep 5, 2022, 6:57 AM IST

ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ನ.23ರಂದು ಸುಪ್ರೀಂ ಕೋರ್ಚ್‌ನ ತ್ರಿಸದಸ್ಯ ಪೀಠದ ಮುಂದೆ ಅಂತಿಮ ವಿಚಾರಣೆಗೆ ಬರಲಿದ್ದು, ಬೆಳಗಾವಿ ಕನ್ನಡಿಗರಲ್ಲಿ ತೀವ್ರ ಆತಂಕ ಮೂಡಿಸಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಸರ್ಕಾರ  ಈಗಾಗಲೇ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಕಾನೂನು ಹೋರಾಟಕ್ಕೆ ಸಿದ್ಧವಾಗಿದೆ. ಆದರೆ, ಈ ವಿಚಾರದಲ್ಲಿ ಕರ್ನಾಟಕ ಮಾತ್ರ ನಿಧಾನವೇ ಪ್ರಧಾನ ಎಂಬಂತೆ ವರ್ತಿಸುತ್ತಿದೆ ಎಂಬುದು ಬೆಳಗಾವಿಯ ಕನ್ನಡ ಹೋರಾಟಗಾರರ ಆರೋಪ.


ಬೆಳಗಾವಿ (ಸೆ.5) : ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ನ.23ರಂದು ಸುಪ್ರೀಂ ಕೋರ್ಚ್‌ನ ತ್ರಿಸದಸ್ಯ ಪೀಠದ ಮುಂದೆ ಅಂತಿಮ ವಿಚಾರಣೆಗೆ ಬರಲಿದ್ದು, ಬೆಳಗಾವಿ(Belagavi) ಕನ್ನಡಿಗರಲ್ಲಿ ತೀವ್ರ ಆತಂಕ ಮೂಡಿಸಿದೆ. ಉದ್ಧವ್‌ ಠಾಕ್ರೆ(Uddhav Thackeray) ನೇತೃತ್ವದ ಅಘಾಡಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಹಾರಾಷ್ಟ್ರ ಸರ್ಕಾರ(Govt of Maharashtra) ಗಡಿ ವಿವಾದವನ್ನು ಗಂಭೀರವಾಗಿ ಪರಿಗಣಿಸಿತ್ತು. ಇದೀಗ ಮುಖ್ಯಮಂತ್ರಿ ಏಕನಾಥ್‌ ಶಿಂಧೆ(Eknath Shinde) ಸರ್ಕಾರ ಕೂಡ ಈಗಾಗಲೇ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಕಾನೂನು ಹೋರಾಟಕ್ಕೆ ಸಿದ್ಧವಾಗಿದೆ. ಆದರೆ, ಈ ವಿಚಾರದಲ್ಲಿ ಕರ್ನಾಟಕ(Karnataka) ಮಾತ್ರ ನಿಧಾನವೇ ಪ್ರಧಾನ ಎಂಬಂತೆ ವರ್ತಿಸುತ್ತಿದೆ ಎಂಬುದು ಬೆಳಗಾವಿಯ ಕನ್ನಡ ಹೋರಾಟಗಾರರ ಆರೋಪ.

ಮತ್ತೆ ಬೆಳಗಾವಿ ಗಡಿ ಕ್ಯಾತೆ ತೆಗೆದ ಶಿವಸೇನೆ, ಎಂಇಎಸ್‌: ಪ್ರಧಾನಿಗೆ ಪತ್ರ ಚಳವಳಿ

Tap to resize

Latest Videos

ರಾಜ್ಯ ಸರ್ಕಾರದ ಗಡಿ ಸಂರಕ್ಷಣಾ ಸಮಿತಿ ಈಗಾಗಲೇ ನಿಷ್ಕಿ್ರಯಗೊಂಡಿದೆ ಮತ್ತು 2018ರಿಂದ ಗಡಿ ವಿವಾದದ ಉಸ್ತುವಾರಿ ಸಚಿವರಾಗಿ ಯಾರನ್ನೂ ನೇಮಕ ಮಾಡಿಲ್ಲ. ಕಾಂಗ್ರೆಸ್‌(Congress) ಸರ್ಕಾರದ ಆಡಳಿತಾವಧಿಯಲ್ಲಿ ಎಚ್‌.ಕೆ.ಪಾಟೀಲ(H.K.Patil) ಅವರನ್ನು ಗಡಿ ಸಂರಕ್ಷಣಾ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಎಚ್‌.ಕೆ.ಪಾಟೀಲ ಅವರು ಹಲವು ಬಾರಿ ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರರು, ಚಿಂತಕರು, ತಜ್ಞರೊಂದಿಗೆ ಸಭೆ ನಡೆಸಿದ್ದರು. ಆದರೆ, ನಂತರದ ಸರ್ಕಾರಗಳು ಗಡಿ ಸಚಿವರನ್ನು ನೇಮಕ ಮಾಡದೆ ನಿರ್ಲಕ್ಷ್ಯ ವಹಿಸಿದ್ದರಿಂದ ಅಗತ್ಯ ದಾಖಲೆ ಸಂಗ್ರಹಕ್ಕೆ ಹಿನ್ನಡೆಯಾಗಿದೆ ಎಂಬ ಆರೋಪ ಕನ್ನಡಪರ ಹೋರಾಟಗಾರರದ್ದು. ಆದರೆ, ಮಹಾರಾಷ್ಟ್ರ ಸರ್ಕಾರ ಮಾತ್ರ ಗಡಿ ಉಸ್ತುವಾರಿ ಸಚಿವರಲ್ಲದೆ, ಮುಖ್ಯಮಂತ್ರಿ ನೇತೃತ್ವದ ಉನ್ನತ ಅಧಿಕಾರದ ಸಮಿತಿಯನ್ನೂ ರಚಿಸಿದೆ.

ಕೇಂದ್ರದ ಪ್ರಯತ್ನ ವಿಫಲ: ಎರಡೂ ರಾಜ್ಯಗಳ ನಡುವಿನ ಗಡಿ ವಿವಾದವನ್ನು ಅಂತ್ಯಗೊಳಿಸಲು ಮತ್ತು ಒಮ್ಮತ ತರಲು ಕೇಂದ್ರ ಸರ್ಕಾರ ಈ ಹಿಂದೆ ಹಲವು ಪ್ರಯತ್ನ ನಡೆಸಿತ್ತಾದರೂ ಅದು ವಿಫಲವಾಗಿತ್ತು. ಗಡಿ ವಿವಾದಕ್ಕೆ ಸಂಬಂಧಿಸಿ ಕೇಂದ್ರ ರಚಿಸಿದ್ದ ಮೆಹರ್‌ಚಂದ್‌ ಮಹಾಜನ್‌ ಆಯೋಗದ ಶಿಫಾರಸುಗಳನ್ನು ಮಹಾರಾಷ್ಟ್ರ ಸರ್ಕಾರ ತಿರಸ್ಕರಿಸಿತ್ತು. ಆದರೆ, ಮಹಾಜನ್‌ ಆಯೋಗದ ವರದಿ(Mahajan Commission Report)ಯೇ ಅಂತಿಮ ಎಂದು ಕರ್ನಾಟಕ ಹೋರಾಟ ಮಾಡುತ್ತಲೇ ಬಂದಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವಿನ ಗಡಿ ವಿವಾದ 2004ರಿಂದ ಸುಪ್ರೀಂ ಕೋರ್ಚ್‌ ಅಂಗಳದಲ್ಲಿದೆ. ಬೆಳಗಾವಿ ಸೇರಿ ಕರ್ನಾಟಕದ 865 ಗ್ರಾಮಗಳಿಗಾಗಿ ಮಹಾರಾಷ್ಟ್ರ ಕಾನೂನು ಹೋರಾಟ ನಡೆಸುತ್ತಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಅಂತಿಮ ವಿಚಾರಣೆ ಆರಂಭವಾಗುತ್ತಿರುವುದು ಗಡಿಭಾಗದ ಕನ್ನಡಿಗರಲ್ಲಿ ಆತಂಕ ಮೂಡಿಸಿದೆ.

Belagavi: ಮಿತಿ ಮೀರಿದ ಉದ್ಧಟತನ: ತಾಕತ್ತಿದ್ರೆ MES ನಿಷೇಧಿಸಿ, ಬೊಮ್ಮಾಯಿ ಸರ್ಕಾರಕ್ಕೆ ಮರಾಠಿಗರ ಸವಾಲ್

ಕನ್ನಡಪರ ಸಂಘಟನೆಗಳ ಆಗ್ರಹವೇನು?:

ಮಹಾರಾಷ್ಟ್ರ ಸರ್ಕಾರವು ಗಡಿ ವಿವಾದವನ್ನು ಗಂಭೀರವಾಗಿ ಪರಿಗಣಿಸಿದೆ. ಆದರೆ, ಕರ್ನಾಟಕ ಮಾತ್ರ ಗಡಿ ವಿಚಾರದಲ್ಲಿ ಕೆಲ ವರ್ಷಗಳಿಂದ ನಿರ್ಲಕ್ಷ್ಯ ವಹಿಸುತ್ತಾ ಬಂದಿದೆ. ಇನ್ನಾದರೂ ಸರ್ಕಾರ ಸುಪ್ರೀಂ ಕೋರ್ಚ್‌ನಲ್ಲಿ ರಾಜ್ಯದ ಪರ ಸಮರ್ಥವಾಗಿ ವಾದ ಮಂಡಿಸಲು ತನ್ನ ಕಾನೂನು ತಂಡವನ್ನು ಮತ್ತಷ್ಟುಬಲಪಡಿಸಬೇಕು. ಸರ್ವಪಕ್ಷಗಳ ಸಭೆ ನಡೆಸಿ, ತಜ್ಞರು ಹಾಗೂ ವಿವಿಧ ಸಂಘಟನೆಗಳ ಮುಖಂಡರ ಸಲಹೆ ಪಡೆದು ಕಾನೂನು ಹೋರಾಟದಲ್ಲಿ ಮುಂದುವರಿಯಬೇಕು ಎಂಬುದು ಕನ್ನಡಪರ ಸಂಘಟನೆಗಳ ಆಗ್ರಹ.

865 ಗ್ರಾಮಗಳಿಗಾಗಿ ‘ಮಹಾ’ ಡಿಮಾಂಡ್‌

ಗಡಿವಿವಾದದ ಹೆಜ್ಜೆಗಳು:

  •  ರಾಜ್ಯ ಪುನರ್‌ವಿಂಗಡಣಾ ಕಾಯ್ದೆ 1956ರಲ್ಲಿ ಜಾರಿಯಾದಾಗಿನಿಂದಲೂ ಬೆಳಗಾವಿ ಸೇರಿ ಮರಾಠಿ ಬಹುಭಾಷಿಕ ಪ್ರದೇಶಗಳ ವಿಚಾರದಲ್ಲಿ ಮಹಾರಾಷ್ಟ್ರದಿಂದ ಕ್ಯಾತೆ.
  •  ಈ ಸಂಬಂಧ 1988ರಲ್ಲಿ ಖಾನಾಪುರದ ಸಿವಿಲ್‌ ನ್ಯಾಯಾಲಯದಲ್ಲಿ ಸರ್ಕಾರದಿಂದ ಕೇಸ್‌. ಆದರೆ, ಗಡಿ ವಿವಾದ ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಸ್‌ ರದ್ದು ಮಾಡಿದ್ದ ಕೋರ್ಚ್‌.
  •  2004ರಲ್ಲಿ ಸುಪ್ರಿಂ ಕೋರ್ಚ್‌ ಕದತಟ್ಟಿದ್ದ ಮಹಾರಾಷ್ಟ್ರ. ಬೆಳಗಾವಿ ಸೇರಿ ಕರ್ನಾಟಕದ ಗಡಿ ಜಿಲ್ಲೆಗಳ ಒಟ್ಟು 865 ಗ್ರಾಮಗಳಿಗಾಗಿ ಹಕ್ಕು ಮಂಡನೆ, ದಿವಾಣಿ ಪ್ರಕರಣ ದಾಖಲು.
  •  ರಾಜ್ಯ ಪುನರ್‌ವಿಂಗಡಣಾ ಕಾಯ್ದೆ 1956 ಕಲಂ 7(1) (ಬಿ) ಮತ್ತು (ಸಿ)ಮತ್ತು 8(1)(ಸಿ)(1)ಗಳನ್ನು ರದ್ದುಪಡಿಸಿ, ಮರಾಠಿ ಬಹುಭಾಷಿಕರಿರುವ ಪ್ರದೇಶ ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಬೇಕು ಎಂದು ಕೋರ್ಚ್‌ ಮುಂದೆ ಮನವಿ.
  •  ಗಡಿ ವಿವಾದ ನ್ಯಾಯಾಲಯದ ವ್ಯಾಪ್ತಿಗೆ ಒಳಪಡಲ್ಲ, ಬದಲಾಗಿ ಸಂಸತ್ತಿನಲ್ಲಿ ಚರ್ಚೆ ಮಾಡಿ ಕೇಂದ್ರೀಯ ಅಧಿನಿಯಮವಾದ ರಾಜ್ಯ ಪುನರವಿಂಗಡಣೆ ಕಾಯ್ದೆಯ ಕಲಂಗೆ ತಿದ್ದುಪಡಿಮಾಡುವ ಅಥವಾ ಕಲಂ ರದ್ದುಪಡಿಸುವ ನಿರ್ಧಾರ ತೆಗೆದುಕೊಳ್ಳಬಹುದು ಎಂಬುದು ಕರ್ನಾಟಕದ ವಾದ.
  •  ಗಡಿವಿವಾದದ ಜತೆಗೆ ಗಡಿಯಲ್ಲಿ ಮರಾಠಿ ಭಾಷಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ವಾದವನ್ನೂ ಎಂಇಎಸ್‌ ಕುಮ್ಮಕ್ಕಿನಿಂದ ಕೋರ್ಚ್‌ ಮುಂದಿಟ್ಟಿರುವ ಮಹಾರಾಷ್ಟ್ರ ಸರ್ಕಾರ.

ಬೆಳಗಾವಿ ಗಡಿ ವಿವಾದ ಕುರಿತು ರಾಜ್ಯದ ಪರ ವಾದ ಮಂಡಿಸಲು ಸಮರ್ಥ ಕಾನೂನು ತಜ್ಞರ ತಂಡ ನೇಮಕಕ್ಕೆ ಅಡ್ವೋಕೇಟ್‌ ಜನರಲ್‌ ಅವರಿಗೆ ಸೂಚಿಸಲಾಗಿದೆ. ಈ ಬಗ್ಗೆ ನಿರ್ಲಕ್ಷ್ಯ ವಹಿಸಲ್ಲ, ವಹಿಸುವುದೂ ಇಲ್ಲ. ರಾಜ್ಯದ ಪರವಾಗಿ ಸಮರ್ಥವಾಗಿ ವಾದ ಮಂಡಿಸುತ್ತೇವೆ.

- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಸುಪ್ರೀಂ ಕೋರ್ಚ್‌ನಲ್ಲಿ ನ.23ರಂದು ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಷಯ ವಿಚಾರಣೆಗೆ ಬರಲಿದ್ದು, ರಾಜ್ಯದ ಪರ ವಾದ ಮಂಡಿಸಲು ಸಮರ್ಥ ಕಾನೂನು ತಜ್ಞರ ತಂಡ ನೇಮಕಕ್ಕೆ ಅಡ್ವೋಕೇಟ್‌ ಜನರಲ್‌ ಅವರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಈ ವಿಚಾರವಾಗಿ ನಗರದ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಾತನಾಡಿ, ಗಡಿವಿವಾದ ಕುರಿತು ಈಗಾಗಲೇ ಅಡ್ವೋಕೇಟ್‌ ಜನರಲ್‌ ಅವರನ್ನು ಸಂಪರ್ಕಿಸಿ, ಅಗತ್ಯ ಸಲಹೆ ಸೂಚನೆ ನೀಡಲಾಗಿದೆ. ಆ ಕುರಿತು ಸಾಕಷ್ಟುಅಧ್ಯಯನ ಸಹ ನಡೆಸಲಾಗಿದೆ. ವಾದ ಮಂಡಿಸಲು ನುರಿತ ಅತ್ಯಂತ ಹಿರಿಯ ವಕೀಲರನ್ನು ನಿಯೋಜಿಸಬೇಕು ಎಂದು ನಿರ್ದೇಶಿಸಲಾಗಿದೆ. ಸರ್ಕಾರ ಈ ಕುರಿತು ನಿರ್ಲಕ್ಷ್ಯ ವಹಿಸಿಲ್ಲ, ವಹಿಸುವುದೂ ಇಲ್ಲ. ರಾಜ್ಯದ ಪರವಾಗಿ ಸಮರ್ಥವಾಗಿ ವಾದ ಮಂಡಿಸಲಿದೆ ಎಂದು ಹೇಳಿದರು.

click me!