ಯಡಿಯೂರಪ್ಪ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿ ಇರುವವರೆಗೂ ನಾನು ಸಚಿವ ಆಗಲ್ಲ ಎಂದು ಬಿಜೆಪಿ ಶಾಸಕರೋರ್ವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಹಾವೇರಿ (ಜ.19): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎರಡೂವರೆ ವರ್ಷ ಬಿಜೆಪಿ ಸರ್ಕಾರ ಇರುತ್ತದೆ ಎಂದು ಹೇಳಿದ್ದಾರೆಯೇ ಹೊರತು ಬಿ.ಎಸ್.ಯಡಿಯೂರಪ್ಪ ಅವರೇ ಎರಡೂವರೆ ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಹೇಳಿಲ್ಲ. ರಾಜ್ಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಧ್ಯಮಗಳು ಅಮಿತ್ ಶಾ ಹೇಳಿಕೆಯನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿವೆ ಎಂದು ಇದೇ ವೇಳೆ ಆರೋಪಿಸಿದರು.
ನಾನು ಸಚಿವ ಸ್ಥಾನ ಕೇಳಿಲ್ಲ: ನಾನು ಸಚಿವ ಸ್ಥಾನ ಕೇಳಿಲ್ಲ. ಯಾವ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲವೋ ಅಲ್ಲಿಗೆ ಕೊಡಿ ಎಂದು ಹೇಳಿದ್ದೇನೆ. ಸಚಿವ ಸ್ಥಾನ ಕೊಟ್ಟರೂ ನಾನು ತೆಗೆದುಕೊಳ್ಳುವುದಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುವವರೆಗೂ ನಾನು ಸಚಿವ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಂದುವರಿದ ಯತ್ನಾಳ್-ಯಡಿಯೂರಪ್ಪ ಮುಸುಕಿನ ಗುದ್ದಾಟ..! ..
ಬಿಎಸ್‌ವೈ-ಸಿದ್ದು ಆಪ್ತರು: ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಆಪ್ತರಿದ್ದಾರೆ. ಅದಕ್ಕಾಗಿಯೇ ಯಡಿಯೂರಪ್ಪ ಯಾವಾಗ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತು. ಯಡಿಯೂರಪ್ಪ, ಕೆ.ಜೆ.ಜಾರ್ಜ್, ಜಮೀರ್ ಅಹ್ಮದ್ ಖಾನ್ ಎಲ್ಲರೂ ಆಪ್ತರು ಎಂದ ಅವರು, ಸಿ.ಡಿ. ಬಗ್ಗೆ ನಾನು ಏನೂ ಹೇಳಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದನ್ನು ಹೇಳಿದ್ದೇನೆ ಅಷ್ಟೆ. ನಾನು ಶರಣರ ವಚನಗಳ ಸಿ.ಡಿ.ಯನ್ನಷ್ಟೇ ನೋಡುತ್ತೇನೆಯೇ ಹೊರತು ಬೇರಿನ್ಯಾವ ಸಿ.ಡಿ.ಗಳನ್ನಲ್ಲ ಎಂದರು.