
ಬೆಂಗಳೂರು: ಲಂಚ ಸ್ವೀಕಾರ ವೇಳೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಇದು ಚುನಾವಣೆ ಹೊಸ್ತಿಲಲ್ಲಿರುವ ಬಿಜೆಪಿಗೆ ಸಂಕಟ ತಂದರೆ ಕಾಂಗ್ರೆಸ್ ಇದರ ಲಾಭ ಮಾಡಿಕೊಳ್ಳುತ್ತಿದೆ. ಈ ಹಿಂದೆಯೇ ಬಿಜೆಪಿ ಸರ್ಕಾರದ ವಿರುದ್ಧ 40 ಶೇ. ಕಮೀಷನ್ ಆರೋಪ ಮಾಡಿದ್ದ ಕಾಂಗ್ರೆಸ್‌ಗೆ ಸರ್ಕಾರದ ವಿರುದ್ಧ ಮತ್ತೆ ಮುಗಿಬೀಳಲು ಅಸ್ತ್ರ ಸಿಕ್ಕಂತಾಗಿದೆ.
ಇತ್ತ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಕಾಂಗ್ರೆಸ್ ನಾಯಕರು ಹಾಗೂ ಯೂತ್ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಪ್ರದರ್ಶಿಸಿದ್ದು, ಸಾಕಪ್ಪ ಸಾಕು 40% ಸರ್ಕಾರ ಸಾಕು ಎಂಬ ಪೋಸ್ಟರ್ (Congress Poster) ನ್ನು ಕಾಂಗ್ರೆಸ್ ನಾಯಕರು ಪ್ರದರ್ಶಿಸಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯ ಸೂಟ್ ಕೇಸ್ ಪ್ರದರ್ಶಿಸಿದರು. ಈ ಸೂಟ್‌ಕೇಸ್ ತುಂಬಾ ಅಣಕು ಹಣದ ಕಟ್ಟು ಇದ್ದು, ಇದನ್ನು ಕಾರ್ಯಕರ್ತರು ಪ್ರದರ್ಶಿಸಿದರು. ಇನ್ನೊಂದೆಡೆ ಕಾಂಗ್ರೆಸ್‌ನಿಂದ ಸಿಎಂ ಮನೆಗೆ ಮುತ್ತಿಗೆ ಹಿನ್ನೆಲೆ ಸಿಎಂ ರೇಸ್ ಕೋರ್ಸ್ ನಿವಾಸದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ರೇಸ್ ಕೋರ್ಸ್ (Racecourse) ನಿವಾಸ ಮತ್ತು ರೇಸ್ ಕೋರ್ಸ್ ಸಿಗ್ನಲ್ ಬಳಿ ಹೆಚ್ಚುವರಿ ಪೋಲಿಸರ ನಿಯೋಜಿಸಲಾಗಿದೆ.
ಲಂಚ ಪ್ರಕರಣ: ಬಿಜೆಪಿ ಶಾಸಕ ಮಾಡಾಳು ಬಂಧನಕ್ಕೆ ಲೋಕಾಯುಕ್ತ ಸಿದ್ಧತೆ
ಈ ವೇಳೆ ಮಾತನಾಡಿದ ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡ (krishna Bhairegowda), ಕರ್ನಾಟಕ ಜನಗಳನ್ನು ಕರ್ನಾಟಕದ ಆಸ್ತಿಯನ್ನ ಲೂಟಿ ಮಾಡುವ ಕೆಲಸ ಬಿಜೆಪಿಯಿಂದ ನಡೆಯುತ್ತಿದೆ. ಯಾವುದೇ ಇಲಾಖೆಗೆ ಹೋದ್ರು ಲಂಚ, ಭ್ರಷ್ಟಾಚಾರ ತಾಂಡವವಾಡುತ್ತಿದೆ. 40 ರಿಂದ ಶುರುವಾಗಿ 50 ರಿಂದ 60% ವರೆಗೆ ಲೂಟಿ ನಡೆಯುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ ನಿರಂತರವಾಗಿ ಹೋರಾಟ ಮಾಡ್ತಾ ಬಂದಿದ್ದೆ. ಒಬ್ಬ ಶಾಸಕನ ಮನೆಯಲ್ಲಿ ಆಸ್ತಿ ಅಲ್ಲ ಕೇವಲ ಹಣವೇ 8.32 ಕೋಟಿ ಸಿಗುತ್ತೆ ಅಂದ್ರೆ ಮತ್ತೆ ಇನ್ನಷ್ಟು ಭ್ರಷ್ಟಾಚಾರ ನಡೆದಿರಬಹುದು. ಬಿಜೆಪಿಯ ಎಲ್ಲ ಶಾಸಕರ, ಸಚಿವ ಮನೆಯನ್ನು ಶೋಧ ಮಾಡಬೇಕೆಂದು ನಾವು ಆಗ್ರಹಿಸುತ್ತೇವೆ. ಲೂಟಿ ಭ್ರಷ್ಟಾಚಾರ ಮಾಡಿ ಕೋಟಿ ಕೋಟಿ ಹಣ ಚಲ್ಲಿ ಎಲೆಕ್ಷನ್ ಗೆಲ್ಲಿ ಬಿಜೆಪಿಯವರಿಗೆ ಅಮಿತ್ ಷಾ (Amith shah)ಇದನ್ನೆ ಹೇಳಿದ್ದಾರೆ ಎಂದು ಬೈರೇಗೌಡ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ (Randeep singh surjewala), ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದ ಸರ್ಕಾರ. ಭ್ರಷ್ಟಾಸುರ ಬೊಮ್ಮಾಯಿ ಸರ್ಕಾರ (Bommai Govt) ಕರ್ನಾಟಕವನ್ನು ಲೂಟಿ ಮಾಡುತ್ತಿದೆ. ಬಿಜೆಪಿಯೂ ಕರ್ನಾಟಕವನ್ನು ಭ್ರಷ್ಟಾಚಾರಕ್ಕೆ ಮಾದರಿಯನ್ನಾಗಿ ಮಾಡಿಕೊಂಡಿದೆ. 40 ಪರ್ಸೆಂಟ್ ಕಮಿಷನ್ ಸರ್ಕಾರ ಇದಾಗಿದೆ. ದೇಶದಲ್ಲಿ ಯಾರನ್ನಾದರೂ ಕೇಳಿ ಬೊಮ್ಮಾಯಿ, ಯಡಿಯೂರಪ್ಪ ಏನೂ ಅಂತಾ. ಆಗ ಜನ ಹೇಳ್ತಾರೆ ಪೇಸಿಎಂ ಅಂತಾ. ಬಿಜೆಪಿ ಅಂದ್ರೆ ಲಂಚ ಲಂಚ ಲಂಚ ಎಂದು ಆರೋಪಿಸಿದರು.
‘ಆಪರೇಷನ್ ಮಾಡಾಳು’ ರಹಸ್ಯ ದಾಳಿ ಹೇಗಾಯ್ತು ಗೊತ್ತಾ?: ಐದಾರು ದಿನಗಳಿಂದ ದಾಳಿಗೆ ಸಿದ್ಧತೆ
ಗುತ್ತಿಗೆದಾರ ಸಂತೋಷ್ ಪಾಟೀಲ್ 40% ಕಮಿಷನ್ ಬಗ್ಗೆ ಹೇಳಿ ಸಾವನ್ನಪ್ಪಿದ. ಆತನ ಕುಟುಂಬವನ್ನ ಕೇಳಿ ಹೇಳ್ತಾರೆ. ಮೋದಿ ನಾಲ್ಕು ದಿನಗಳ ಹಿಂದೆ ಬೆಳಗಾವಿಗೆ ಬಂದಿದ್ರು ಸಂತೋಷ್ ಪಾಟೀಲ್ ಮನೆಗೆ ಹೋಗಲಿಲ್ಲ. 40% ಕಮಿಷನ್‌ಗೆ ತುಮಕೂರಿನಲ್ಲಿ ರಾಜೇಂದ್ರ ಆತ್ಮಹತ್ಯೆ ಮಾಡಿಕೊಂಡ. ಬಿಜೆಪಿ ನಾಯಕರು ಕಮಿಷನ್ ಲೂಟಿ ಮಾಡಿದ್ದಾರೆ. ಬೊಮ್ಮಾಯಿ, ಕಟೀಲ್, ನಡ್ಡಾ, ಮೋದಿ ಅವರೇ ನಿಮಗೆ ಹಣ ಎಷ್ಟು ಬೇಕಾಗುತ್ತೆ ಹೇಳಿ ಬೆಂಗಳೂರು ಜನ ನಿಮಗೆ ಹಣ ಕೊಡ್ತಾರೆ ಆದರೆ ಸಂತೋಷ ಪಾಟೀಲ್, ರಾಜೇಂದ್ರ ಜೀವ ವಾಪಸ್ ನೀಡಿ ಎಂದರು.
8 ಬಾರಿ ರಾಜ್ಯಕ್ಕೆ ಮೋದಿ ಬಂದಿದ್ದರೂ ಕೆಂಪಣ್ಣ ಪತ್ರಕ್ಕೆ ಉತ್ತರ ಇಲ್ಲ, 40% ಕಮಿಷನ್ ಬಗ್ಗೆ ಮಾತಾಡಿಲ್ಲ, ದಿಂಗಾಲೇಶ್ವರ ಸ್ವಾಮೀಜಿ 10% ಕಮಿಷನ್ ಬಗ್ಗೆ ಆರೋಪ ಮಾಡಿದ್ರು. ಮೊನ್ನೆಯಿಂದ ನಡೆದ ಘಟನೆಗಳು ಬಗ್ಗೆ ಹೇಳೋದಾದರೆ ಅಕ್ರಮ ಪೊಲೀಸ್ ನೇಮಕಾತಿ ಆಗಿದೆ ಬೊಮ್ಮಾಯಿ ಸರ್ಕಾರದ ಹೆಸರು ಬದಲಾಯಿಸಿ ಭ್ರಷ್ಟ ಬೊಮ್ಮಾಯಿ ಸರ್ಕಾರ ಎಂದು ಬದಲಾಯಿಸಿ, ಭಾರತದಲ್ಲಿ ಸಿಎಂ ಬೊಮ್ಮಾಯಿ ಎಲ್ಲೇ ಚಲಿಸಿದ್ರೂ ಕರ್ನಾಟಕದ 40% ಸರ್ಕಾರದ, ಕರ್ನಾಟಕದ ಸಿಎಂಗೆ ಸ್ವಾಗತ ಎಂಬ ಪೋಸ್ಟರ್ ಗಳಿಂದ ಸ್ವಾಗತ ಸಿಗುತ್ತೆ. ನೀವೂ ಹಾಗೂ ನಿಮ್ಮ ಸರ್ಕಾರ ನಡೆಸುತ್ತಿರುವ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿಯ ಸಾಬೂನಿನ ಸುವಾಸನೆಯಲ್ಲೂ ಭ್ರಷ್ಟಾಚಾರದ ಸುಂಗಂಧ ಪಸರಿಸಿರುತ್ತೆ. 20 ರೂಪಾಯಿ ಸಾಬೂನಿನಲ್ಲೇ ಇಷ್ಟೊಂದು ಭ್ರಷ್ಟಾಚಾರ ನಡೆಸಿರುವ ಸರ್ಕಾರ ನಿಮ್ಮದು. ಹಾಗಾದರೆ ಇಡೀ ರಾಜ್ಯದಲ್ಲಿ ಇನ್ನೆಷ್ಟು ಭ್ರಷ್ಟಾಚಾರ ನಡೆಸಿರಬಹುದು ಎಂದು ಸುರ್ಜೇವಾಲಾ ಪ್ರಶ್ನಿಸಿದರು.