ಹತ್ತು ಹಲವು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಇದೀಗ ವನ್ಯಪ್ರಾಣಿಗಳ ನೀರಿನ ದಾಹ ನೀಗಿಸಲು ರಾಜ್ಯದಲ್ಲೇ ಮೊದಲ ಬಾರಿಗೆ ಕಾಡಿನೊಳಗೆ ಕೆರೆ ಅಭಿವೃದ್ಧಿಪಡಿಸಿದೆ.
ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಮಾ.21): ಹತ್ತು ಹಲವು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಇದೀಗ ವನ್ಯಪ್ರಾಣಿಗಳ ನೀರಿನ ದಾಹ ನೀಗಿಸಲು ರಾಜ್ಯದಲ್ಲೇ ಮೊದಲ ಬಾರಿಗೆ ಕಾಡಿನೊಳಗೆ ಕೆರೆ ಅಭಿವೃದ್ಧಿಪಡಿಸಿದೆ. ಬಿರು ಬೇಸಿಗೆಯುಲ್ಲೂ ಈ ಕೆರೆಯಲ್ಲಿ ನೀರು ತುಂಬಿ ತುಳುಕುತ್ತಿದ್ದು ಪ್ರಾಣಿ ಪಕ್ಷಿಗಳ ದಾಹ ನೀಗಿಸುತ್ತಿದೆ.ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ. ರಾಜ್ಯಾದ್ಯಂತ ಸ್ವ ಸಹಾಯ ಸಂಘಗಳ ರಚನೆ ಮೂಲಕ ಮಹಿಳೆಯರ ಸಬಲೀಕರಣ, ಅಸಹಾಯಕರಿಗೆ ಮನೆ ನಿರ್ಮಾಣ, ಪುರಾತನ ದೇಗುಲಗಳ ಜೀರ್ಣೋದ್ಧಾರ,ಕೆರೆಗಳ ಅಭಿವೃದ್ಧಿ, ಬಡ ಮಕ್ಕಳ ಶಿಕ್ಷಣಕ್ಕಾಗಿ ಶಿಷ್ಯ ವೇತನ, ಶಾಲೆಗಳಿಗೆ ಪೀಠೋಪಕರಣ, ದುಶ್ಚಟ ಬಿಡಿಸುವ ಶಿಬಿರ ಹೀಗೆ ಹತ್ತು ಹಲವು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಇದೀಗಾ ಮತ್ತೊಂದು ಯೋಜನೆ ಕೈಗೊಂಡು ಗಮನ ಸೆಳೆದಿದೆ.
ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದಲ್ಲಿ ಕೆರೆಯೊಂದರ ಹೂಳೆತ್ತಿ ಅಭಿವೃದ್ಧಿಪಡಿಸುವ ಮೂಲಕ ಕಾಡು ಪ್ರಾಣಿಗಳ ಕುಡಿಯುವ ನೀರಿನ ಬವಣೆ ನೀಗಿಸಲು ಮುಂದಾಗಿದೆ. ಹೂಳು ತುಂಬಿ ಬತ್ತಿ ಹೋಗುತ್ತಿದ್ದ ಈ ಕೆರೆಯನ್ನು ವೈಜ್ಞಾನಿಕವಾಗಿ ಸಮತಟ್ಟಾಗಿ ಹೂಳು ತೆಗೆದು ಅಭಿವೃದ್ಧಿಪಡಿಸಿದೆ. ನೂರಾರು ಲೋಡ್ ಹೂಳನ್ನು ಹೊರಸಾಗಿಸದೆ ಕೆರೆಯ ಸುತ್ತ ಏರಿ ನಿರ್ಮಿಸಿ ಕೆರೆಯಲ್ಲಿ ಸದಾ ನೀರು ನಿಲ್ಲುವಂತೆ ಮಾಡಿದೆ. ಕೆಲ ತಿಂಗಳ ಹಿಂದೆ ಬಿದ್ದ ಮಳೆಯಿಂದ ಕೆರೆಯಲ್ಲಿ ತುಂಬಿದ್ದು ಈ ಬಿರು ಬೇಸಿಗೆಯಲ್ಲಿ ಕಾಡುಪ್ರಾಣಿಗಳ ದಾಹ ನೀಗಿಸುತ್ತಿದೆ.
ಜಲಮೂಲಗಳ ಸಂರಕ್ಷಣೆಗೆ ಹತ್ತು ಹಲವು ರೀತಿಯ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ರಾಜ್ಯದ ವಿವಿಧೆಡೆ ಕೆರೆಗಳ ಪುನಶ್ಚೇತನ ಗೊಳಿಸುವ ಮೂಲಕ ಜಲಸಂರಕ್ಷಣೆಗೆ ಮುಂದಾಗಿದೆ. ಮನುಷ್ಯನಿಗೆ ನೀರು ಬೇಕೆಂದರೆ ಬಾಯಿ ಬಿಟ್ಟು ಕೇಳಿ ಪಡೆಯುತ್ತಾನೆ ಆದರೆ ಮೂಕ ಪ್ರ್ರಾಣಿ ಪಕ್ಷಿಗಳು ಕುಡಿಯಲು ನೀರು ಸಿಗದಿದ್ದರೆ ಮೂಕರೋಧನೆ ಅನುಭವಿಸುತ್ತಾ ಪರಿತಪಿಸುತ್ತವೆ. ಇದನ್ನು ಮನಗಂಡೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಾಡಿನಲ್ಲಷ್ಟೆ ಅಲ್ಲ ಕಾಡಿನಲ್ಲು ಕೆರೆಗಳ ಅಭಿವೃದ್ಧಿಗೆ ಮುಂದಾಗಿದೆ. ಬಂಡೀಪುರದಲ್ಲಿ ಒಂದು ಕೆರೆಯನ್ನು ಪುನಶ್ಚೇತನಗೊಳಿಸಿರುವ ಸಂಸ್ಥೆ ಮತ್ತೊಂದು ಬಂಡೀಪುರದ ತಾವರಗಟ್ಟೆ ಕೆರೆಯನ್ನು ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು ಏಪ್ರಿಲ್ ನಲ್ಲಿ ಕಾಮಗಾರಿ ಆರಂಭಿಸಲಿದೆ.
ತಲೆ ಮೇಲೆ ಕಾಯಿ ಒಡೆದು ಪೂಜೆ: ಒಂದೇ ಏಟಿಗೆ ಎರಡು ಹೋಳಾಗುವ ತೆಂಗಿನ ಕಾಯಿ!
ಒಟ್ಟಾರೆ ಪುನಶ್ಚೇತನದ ಬಳಿಕ ಕಡು ಬೇಸಿಗೆಯಲ್ಲೂ ತುಂಬಿ ತುಳುಕುತ್ತಿರುವ ಕೆರೆಯಲ್ಲಿ ವನ್ಯಜೀವಿಗಳು ನೀರು ಕುಡಿಯುತ್ತಾ ತಮ್ಮ ದಾಹ ತಣಿಸಿಕೊಳ್ಳುತ್ತಿವೆ. ಕೆರೆಯಂಗಳದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿವೆ. ಈ ಸಾರ್ಥಕ ಕೆಲಸದಿಂದ ಪ್ರೇರಣೆಗೊಂಡಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಶಿವಮೊಗ್ಗ ಜಿಲ್ಲೆಯ ತಾವರೆಕೊಪ್ಪ ಸಿಂಹ ಧಾಮದಲ್ಲೂ 10 ಕೆರೆಗಳನ್ನು ಅಭಿವೃದ್ಧಿ ಕೈಗೆತ್ತಿಕೊಂಡಿದೆ. ಅದೇನೆ ಹೇಳಿ ಪ್ರಾಣಿಪಕ್ಷಿಗಳು ಕುಡಿಯುವ ನೀರಿಗೆ ಹಾಹಾಕಾರ ಪರಿಹರಿಸಲು ಕೈಗೊಂಡಿರುವ ಇಂತಹ ಸಮಾಜಮುಖಿ ಕಾರ್ಯಗಳನ್ನು ನಿಜಕ್ಕು ಶ್ಲಾಘನೀಯ.