ಬಳ್ಳಾರಿಯಲ್ಲಿ ವಿಡಿಯೋ-ಫೋಟೋ ಬಿಡುಗಡೆ ಸಮರ; ಯಾರದು ಏನು ಬಯಲಾಯ್ತು? ಇಲ್ಲಿದೆ ಸತ್ಯ

Published : Jan 04, 2026, 07:57 AM IST
Ballari Banner Dispute bjp congress clash karnataka violence death

ಸಾರಾಂಶ

Ballari banner clash news: ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ರಾಜಕೀಯ ತಿರುವು ಪಡೆದಿದ್ದು, ಬಿಜೆಪಿ ನಾಯಕರು ಗಾಯಗೊಂಡಂತೆ ನಾಟಕವಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಫೋಟೋ ಸಾಕ್ಷ್ಯ ಬಿಡುಗಡೆ ಮಾಡಿದೆ. 

ಬಳ್ಳಾರಿ: ನಗರದಲ್ಲಿ ಗುರುವಾರ ರಾತ್ರಿ ನಡೆದ ಬ್ಯಾನರ್‌ ಗಲಾಟೆಯಲ್ಲಿ ಸ್ಥಳೀಯ ಬಿಜೆಪಿ ನಾಯಕರು ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕರು ಈ ಸಂಬಂಧ ಫೋಟೋ ಸಾಕ್ಷ್ಯ ಬಿಡುಗಡೆ ಮಾಡಿದ್ದಾರೆ. ಶನಿವಾರ ಸಂಜೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್‌ ಶಾಸಕರಾದ ನಾಗೇಂದ್ರ ಹಾಗೂ ಭರತ್ ರೆಡ್ಡಿ, ಶುಕ್ರವಾರ ಬೆಳಗ್ಗೆ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ನಡೆಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ಕೆಲ ನಾಯಕರು ಹಾಜರಿದ್ದರು. ಆ ವೇಳೆ, ಅವರು ಆರೋಗ್ಯವಾಗಿಯೇ ಇದ್ದರು. ಆದರೆ, ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬರುವ ವೇಳೆಗೆ ಅವರು ಆಸ್ಪತ್ರೆಯಲ್ಲಿ ಇದ್ದರು. ನಾಟಕದ ರೀತಿಯಲ್ಲಿ ಬ್ಯಾಂಡೇಜ್ ಕಟ್ಟಿಕೊಂಡು ಆಸ್ಪತ್ರೆ ಸೇರಿದ್ದರು ಎಂದು ದೂರಿ ಫೋಟೋ ಬಿಡುಗಡೆ ಮಾಡಿದರು.

ಈ ಫೋಟೊವನ್ನು ಬಿಡುಗಡೆ ಮಾಡಿದ ನಾಗೇಂದ್ರ ಹಾಗೂ ಭರತ್‌ ರೆಡ್ಡಿ, ಬಿಜೆಪಿ ಹೇಳ್ತಿರೋದೆಲ್ಲ ಸುಳ್ಳು ಎಂದು ಆರೋಪಿಸಿದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊವನ್ನು ಕಾಂಗ್ರೆಸ್ ನಾಯಕರು ಹಂಚಿಕೊಂಡಿದ್ದಾರೆ.

45 ಜನರ ವಿಚಾರಣೆ

ಇಲ್ಲಿನ ಸಿರುಗುಪ್ಪ ರಸ್ತೆಯಲ್ಲಿನ ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸದ ಎದುರು ಗುರುವಾರ ರಾತ್ರಿ ನಡೆದ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಸತೀಶ್ ರೆಡ್ಡಿ ಜೊತೆಗಿದ್ದ ನಾಲ್ವರು ಗನ್‌ಮ್ಯಾನ್‌ ಸೇರಿ 45 ಜನರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ನಗರ ಡಿವೈಎಸ್ಪಿ ಚಂದ್ರಕಾಂತ ನಂದಾರೆಡ್ಡಿ ಹಾಗೂ ಬ್ರೂಸ್‌ಪೇಟೆ ಸಿಪಿಐ ಮಹಾಂತೇಶ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ಗುಂಪು ಘರ್ಷಣೆ ವೇಳೆ ಭಾಗಿಯಾಗಿದ್ದ ಯುವಕರನ್ನು ಕರೆ ತಂದು ವಿಚಾರಿಸಲಾಗುತ್ತಿದೆ. ವಿಚಾರಣೆಗೊಳಗಾಗಿರುವವರ ಪೈಕಿ ಕಾಂಗ್ರೆಸ್‌ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಿಜೆಪಿ ಬೆಂಬಲಿಗರೂ ಇದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಮೊಬೈಲ್‌ಗಳಿಂದ ತೆಗೆದ ವೀಡಿಯೋಗಳು, ಸಾಮಾಜಿಕ ಜಾಲತಾಣಗಳು ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಬಂದ ವೀಡಿಯೋಗಳನ್ನಾಧರಿಸಿ ಗಲಭೆಯಲ್ಲಿ ಭಾಗಿಯಾಗಿದ್ದವರನ್ನು ಗುರುತಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆ ಸಂಬಂಧ ಈವರೆಗೆ ಯಾರೊಬ್ಬರನ್ನೂ ಬಂಧಿಸಲಾಗಿಲ್ಲ. ಮೊದಲು ವಿಚಾರಣೆ ಮಾಡಿ, ಬಳಿಕ ಆರೋಪಿಗಳಾಗಿದ್ದರೆ ಬಂಧನ ಸೇರಿದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಳ್ಳಾರಿ ನಗರ ಡಿವೈಎಸ್ಪಿ ಚಂದ್ರಕಾಂತ ನಂದಾರೆಡ್ಡಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಸತೀಶ್‌ ರೆಡ್ಡಿ ಗನ್‌ಮ್ಯಾನ್‌ಗಳ ವಿಚಾರಣೆ

ಸತೀಶ್ ರೆಡ್ಡಿ ಜೊತೆಗೆ ಒಟ್ಟು 6 ಜನ ಗನ್ ಮ್ಯಾನ್‌ಗಳು ಇದ್ದು, ಘಟನೆ ನಡೆದಾಗ ನಾಲ್ವರ ಪೈಕಿ ಇಬ್ಬರು ಜನಾರ್ದನ ರೆಡ್ಡಿ ಮನೆಯ ಬಳಿ ಬಂದಿದ್ದರು. ಆ ಇಬ್ಬರು ಸೇರಿದಂತೆ ನಾಲ್ವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಉಳಿದ ಇನ್ನಿಬ್ಬರು ಗನ್ ಮ್ಯಾನ್‌ಗಳು ಸತೀಶ್ ರೆಡ್ಡಿ ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆ ಬಳಿ ಇದ್ದಾರೆ ಎಂದು ತಿಳಿದು ಬಂದಿದೆ.

ರಾಜಶೇಖರ ರೆಡ್ಡಿ ಕುಟುಂಬಕ್ಕೆ ಜಮೀರ್‌ ₹25 ಲಕ್ಷ ಪರಿಹಾರ

ಬ್ಯಾನರ್ ಗಲಾಟೆ ಪ್ರಕರಣದಲ್ಲಿ ಮೃತಪಟ್ಟ ಬಳ್ಳಾರಿಯ ಹುಸೇನ್ ನಗರದ ರಾಜಶೇಖರ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮೃತ ಕುಟುಂಬಕ್ಕೆ ₹25 ಲಕ್ಷ ಆರ್ಥಿಕ ನೆರವು ನೀಡಿದರು. ಶಾಸಕ ನಾರಾ ಭರತ್ ರೆಡ್ಡಿ, ಕಂಪ್ಲಿ ಗಣೇಶ ಇದ್ದರು.

ಊರ ತುಂಬೆಲ್ಲ ಇದ್ದ ಬ್ಯಾನರ್‌ಗಳ ತೆರವು

ಬ್ಯಾನರ್ ಹಾಕುವ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ಹಿನ್ನೆಲೆಯಲ್ಲಿ ಶನಿವಾರ ಸಂಜೆ ನಡೆಯಬೇಕಿದ್ದ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ರದ್ದಾಗಿದೆ. ಕಾರ್ಯಕ್ರಮಕ್ಕಾಗಿ ಇಡೀ ಬಳ್ಳಾರಿ ಸಜ್ಜುಗೊಂಡಿತ್ತು. ಮಧುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ಇಡೀ ಬಳ್ಳಾರಿ ಸಂಪೂರ್ಣ ಕೇಸರಿಮಯವಾಗಿತ್ತು. ಎಲ್ಲೆಡೆ ವಾಲ್ಮೀಕಿ ಸಮುದಾಯದ ನಾಯಕರ ಬ್ಯಾನರ್ ಗಳು ರಾರಾಜಿಸುತ್ತಿದ್ದವು. ಆದರೆ, ಇದೀಗ ಎಲ್ಲವನ್ನೂ ತೆರವು ಮಾಡಲಾಗಿದೆ. ವಾಲ್ಮೀಕಿ ವೃತ್ತದಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ.

ಗಾಂಜಾ ಪೆಡ್ಲರ್ ಜತೆ ಭರತ್

ಬ್ಯಾನರ್ ಗಲಾಟೆ ರೂವಾರಿ ಸತೀಶ್ ರೆಡ್ಡಿಯನ್ನು ಬಂಧಿಸದೆ ಎಸ್ಪಿಯನ್ನು ಸಸ್ಪೆಂಡ್ ಮಾಡಿದ ಸರ್ಕಾರ ಧೋರಣೆ ಖಂಡನೀಯ. ನಗರ ಡಿವೈಎಸ್ಪಿ ನಂದಾರೆಡ್ಡಿ ಕುಮ್ಮಕ್ಕಿನಿಂದ ಈ ಘಟನೆ ಜರುಗಿದೆ ಎಂದು ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ಬಳ್ಳಾರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಗಾಂಜಾ ಪೆಡ್ಲರ್ ಜೊತೆಗೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಈ ವೇಳೆ ಗಾಂಜಾ ಪೆಡ್ಲರ್ ಜೊತೆ ಭರತ್ ರೆಡ್ಡಿ ಇರುವ ವಿಡಿಯೋ ಪ್ರದರ್ಶಿಸಿದ ಜನಾರ್ದನ ರೆಡ್ಡಿ, ಭರತ್ ರೆಡ್ಡಿ ಗಾಂಜಾ ಪೆಡ್ಲರ್ ದೌಲಾ ಎಂಬಾತನ ಜೊತೆ ಇದ್ದ ಎಂದು ಆರೋಪಿಸಿದರು. ವಿಡಿಯೋದಲ್ಲಿ, ಶಾಸಕ ನಾರಾ ಭರತ್ ರೆಡ್ಡಿ ಗಾಂಜಾ ಪೆಡ್ಲರ್ ದೌಲಾ ಜೊತೆಗೆ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿರುವ ದೃಶ್ಯಗಳು ಇವೆ. ಇದನ್ನು ಆಧಾರವಾಗಿಟ್ಟುಕೊಂಡು ಜನಾರ್ದನ ರೆಡ್ಡಿ ಕಾಂಗ್ರೆಸ್ ಶಾಸಕನ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ದೌಲಾ ಮೇಲೆ 50 ಕೆಜಿ ಗಾಂಜಾ ಪೆಡ್ಲಿಂಗ್ ಸೇರಿದಂತೆ 18 ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.

ಬಳ್ಳಾರಿ ಫೈರಿಂಗ್ ವಿಚಾರದಲ್ಲಿ ಮೃತ ಕಾಂಗ್ರೆಸ್ ಕಾರ್ಯಕರ್ತನಿಗೆ ನ್ಯಾಯ ಸಿಗಬೇಕಾದರೆ ತಪ್ಪಿತಸ್ಥರಾದ ಸತೀಶ್ ರೆಡ್ಡಿ ಮತ್ತು ಅವರ ಅಂಗರಕ್ಷಕರನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದರು.

PREV
Read more Articles on
click me!

Recommended Stories

ಕಟಕಟೆಯಲ್ಲಿ ಸಾಕ್ಷಿ ಹೇಳುತ್ತಿದ್ದ ವ್ಯಕ್ತಿ, ಪಲ್ಲಕ್ಕಿ ಹೊತ್ತಿದ್ದ ಅರ್ಚಕ ಹೃದಯಾಘಾತದಿಂದ ಸಾವು
ಬಳ್ಳಾರಿ ಗಲಾಟೆ: ಸಿಎಂಗೆ ಗೊತ್ತಿರೋ ರಹಸ್ಯ ತಿಳಿಸಿದ ಛಲವಾದಿ ನಾರಾಯಣಸ್ವಾಮಿ; ಇತ್ತ ಶ್ರೀರಾಮುಲು ಎಚ್ಚರಿಕೆ